Advertisement

ಬೈಕಂಪಾಡಿ ಕೈಗಾರಿಕಾ ವಲಯ ಅಭಿವೃದ್ಧಿಗೆ ಸಿದ್ಧವಾಗುತ್ತಿದೆ ಎಸ್‌ಪಿವಿ

09:51 AM Sep 06, 2018 | |

ಮಹಾನಗರ: ಬೈಕಂಪಾಡಿಯ ಕೈಗಾರಿಕಾ ವಲಯ ಅಭಿವೃದ್ಧಿಯ ದೃಷ್ಟಿಯಿಂದ ಸ್ಮಾರ್ಟ್‌ ಸಿಟಿ ಮಾದರಿಯಲ್ಲಿ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ- ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ರಚನೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಬಹುಬೇಡಿಕೆಯ ‘ಬೈಕಂಪಾಡಿ ಟೌನ್‌ಶಿಪ್‌ ಪ್ರಾಧಿಕಾರ’ ಸ್ಥಾಪನೆಗೆ ಇನ್ನೂ ಕೆಲವು ಸಮಯ ಕಾಯಬೇಕಾದ ಹಿನ್ನೆಲೆಯಲ್ಲಿ ತುರ್ತು ಕಾರ್ಯನಿರ್ವಹಣೆಯ ಉದ್ದೇಶದಿಂದ ಎಸ್‌ಪಿವಿ ರಚನೆಗೆ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಬೈಕಂಪಾಡಿಯ ವಿವಿಧ ಕೈಗಾರಿಕಾ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.

Advertisement

ಎಂಆರ್‌ಪಿಎಲ್‌, ಒಎನ್‌ಜಿಸಿ ಸಹಿತ ಬೃಹತ್‌ ಕೈಗಾರಿಕೆಗಳನ್ನು ಹೊರತುಪಡಿಸಿ ಬೈಕಂಪಾಡಿಯ ಸುಮಾರು 650 ಸಣ್ಣ ಕೈಗಾರಿಕೆಗಳು ಎಸ್‌ಪಿವಿ ಅಡಿಯಲ್ಲಿ ನೋಂದಣಿಯಾಗಲಿವೆ. ನೂತನ ಎಸ್‌ಪಿವಿಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ವಹಿಸಲಿದ್ದು, ಉಳಿದಂತೆ ಮಹಾನಗರ ಪಾಲಿಕೆ ಆಯುಕ್ತರು ಸಹಿತ ಸರಕಾರದಿಂದ ಆರು, ಬೈಕಂಪಾಡಿ ಕೈಗಾರಿಕಾ ವಲಯದಿಂದ 6 ಮಂದಿ ಸಹಿ ತ ಎಸ್‌ಪಿವಿ ರಚನೆಗೆ ಚಿಂತನೆ ನಡೆಸಲಾಗಿದೆ. ಸಮಿತಿಯ ಜವಾಬ್ದಾರಿ ಹಾಗೂ ನಿಯಮಗಳ ಬಗ್ಗೆ ಬೈಲಾ ಸಿದ್ಧಪಡಿಸಲಾಗುತ್ತಿದೆ. ಕಾನೂನು ತಜ್ಞರಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಎಸ್‌ಪಿವಿಯಿಂದ ಲಾಭವೇನು?
ಬೈಕಂಪಾಡಿ ಕೈಗಾರಿಕಾ ವಲಯದ ಎಲ್ಲ ಕೈಗಾರಿಕೆಗಳಿಂದ ತೆರಿಗೆಯನ್ನು ಪಾಲಿಕೆ ಪಡೆಯುತ್ತಿದೆ. ಆದರೆ, ಪ್ರತಿಫಲವಾಗಿ ಪಾಲಿಕೆ ಕೈಗಾರಿಕಾ ವಲಯಕ್ಕೆ ಯಾವುದೇ ಅಭಿವೃದ್ಧಿ ಚಟುವಟಿಕೆಯನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಕೈಗಾರಿಕಾ ವಲಯವು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬುದು ಕೈಗಾರಿಕೋದ್ಯಮಿಗಳ ಆರೋಪ. ಇದಕ್ಕಾಗಿ ಎಸ್‌ಪಿವಿ ರಚನೆ ಮಾಡಿದರೆ ಅದರ ಮೂಲಕವೇ ತೆರಿಗೆ ಸಂಗ್ರಹಿಸಿ, ನಿಗದಿತ ಮೊತ್ತವನ್ನು ಪಾಲಿಕೆಗೆ ನೀಡಿ ಈ ಮೂಲಕ ನಿರ್ವಹಣೆ ಕೈಗೊಳ್ಳುವ ಉದ್ದೇಶವಿದೆ. ಸದ್ಯ ಅನಧಿಕೃತ ಪಾರ್ಕಿಂಗ್‌ ಸಮಸ್ಯೆ ಕೈಗಾರಿಕಾ ವಲಯದಲ್ಲಿ ಮಿತಿ ಮೀರಿದ್ದು, ಇದರ ಹತೋಟಿಗೆ ಸಿಬಂದಿ ನೇಮಕ ಸಹಿತ ಎಲ್ಲ ಕಾರ್ಯವನ್ನು ಸ್ಥಳೀಯ ಕೈಗಾರಿಕಾ ಸಂಘಗಳೇ ನಡೆಸಬೇಕಾಗಿದೆ. ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಆದರೆ, ಎಸ್‌ಪಿವಿ ರಚನೆಯಾದರೆ ಇದರ ನಿರ್ವಹಣೆ ಸಹಿತ ಕುಡಿಯುವ ನೀರು, ಒಳಚರಂಡಿ, ರಸ್ತೆ, ವಿದ್ಯುತ್‌ ಸಹಿತ ಎಲ್ಲ ಮೂಲಸೌಕರ್ಯಗಳನ್ನು ಮುಂದೆ ಸಮಿತಿಯೇ ನಿರ್ವಹಿಸಲಿದೆ.

ಎಂಆರ್‌ಪಿಎಲ್‌, ಓಎನ್‌ಜಿಸಿ ಟೌನ್‌ಶಿಪ್‌ಗೆ
ಬಹುನಿರೀಕ್ಷಿತ ‘ಬೈಕಂಪಾಡಿ ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ಪ್ರಾಧಿಕಾರ’ ರಚನೆಗೆ ಈಗಾಗಲೇ ಗ್ರೀನ್‌ಸಿಗ್ನಲ್‌ ದೊರೆತಿದ್ದು, ಹಂತ ಹಂತವಾಗಿ ಇದು ಅನುಷ್ಠಾನವಾಗಲಿದೆ. ಇದರಲ್ಲಿ ಎಂಆರ್‌ಪಿಎಲ್‌, ಒಎನ್‌ಜಿಸಿ, ಎಚ್‌ ಪಿಸಿಎಲ್‌ ಸಹಿತ ಬೃಹತ್‌ ಕೈಗಾರಿಕೆಗಳು, ಬೈಕಂಪಾಡಿಯ 650 ಸಣ್ಣ ಕೈಗಾರಿಕೆಗಳು ಸೇರಲಿವೆ. ಪ್ರತ್ಯೇಕ ಪ್ರಾಧಿಕಾರದ ಅಧ್ಯಕ್ಷರಿಗೆ ಇಲ್ಲಿನ ಪೂರ್ಣ ಅಧಿಕಾರದ ಜವಾಬ್ದಾರಿ ನೀಡಲಾಗುತ್ತದೆ. 

ಯೆಯ್ನಾಡಿ, ಪುತ್ತೂರಿಗೂ ಎಸ್‌ಪಿವಿ?
47 ವರ್ಷಗಳ ಹಿಂದೆ ಸ್ಥಾಪನೆಯಾದ ಬೈಕಂಪಾಡಿ ಕೈಗಾರಿಕಾ ವಲಯ ಸುಮಾರು 1,407.16 ಎಕ್ರೆ ಜಾಗ ಹೊಂದಿದೆ. ಈ ಪ್ರದೇಶ ಈಗ ಕೆಐಎಡಿಬಿ ವ್ಯಾಪ್ತಿಗೆ ಬರುತ್ತದೆ. ಆದರೆ ಕೆಐಎಡಿಬಿಗೆ ಸರಕಾರದಿಂದ ಸೂಕ್ತ ಅನುದಾನ ಬಿಡುಗಡೆ ಆಗದ ಕಾರಣ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಇದೇ ವೇಳೆ ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹ ಮಾಡುತ್ತಿತ್ತೇ ವಿನಾ ಅಭಿವೃದ್ಧಿ ಆಗುತ್ತಿರಲಿಲ್ಲ. ಹೀಗಾಗಿ ಪ್ರತ್ಯೇಕ ಎಸ್‌ಪಿವಿ ರಚನೆಯ ಗುರಿ ಇರಿಸಲಾಗಿದೆ. ಇದನ್ನೇ ಮಾಡೆಲ್‌ ಆಗಿ ಇರಿಸಿಕೊಂಡು ಯೆಯ್ನಾಡಿ, ಪುತ್ತೂರು, ಕಾರ್ನಾಡಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಎಸ್‌ಪಿವಿ ರಚಿಸಲು ಅನುಕೂಲವಾಗಲಿದೆ. 

Advertisement

ಎಸ್‌ಪಿವಿ ಬೈಲಾ ತಯಾರಿ
ಶೀಘ್ರದಲ್ಲಿ ಬೈಕಂಪಾಡಿ ಟೌನ್‌ಶಿಪ್‌ ಪ್ರಾಧಿಕಾರ ಸ್ಥಾಪನೆ ಆಗುವ ಆಶಾಭಾವನೆ ಹೊಂದಿದ್ದೇವೆ. ಆದರೆ, ಅದಕ್ಕೂ ಮೊದಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಸ್‌ಪಿವಿ ರಚನೆಗೆ ಸಿದ್ಧತೆ ನಡೆಸಲಾಗಿದೆ. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಹಾಗೂ ಬೆಳವಣಿಗೆಯ ಬಗ್ಗೆ ನಿಗಾ ಇಡಲು ಎಸ್‌ಪಿವಿ ರಚನೆಗೆ ಉದ್ದೇಶಿಸಲಾಗಿದ್ದು, ಬೈಲಾ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
– ಗೌರವ್‌ ಹೆಗ್ಡೆ, ಅಧ್ಯಕ್ಷರು,
ಕೆನರಾ ಸಣ್ಣ ಕೈಗಾರಿಕೆಗಳ ಸಂಘ, ಬೈಕಂಪಾಡಿ

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next