Advertisement

ಪ್ರಜಾಪ್ರಭುತ್ವದ ಹಬ್ಬಕ್ಕೆ ಪೊಲೀಸರ ಸಿದ್ಧತೆ

01:19 PM Apr 08, 2018 | Team Udayavani |

ಮಂಗಳೂರು: ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಯು ‘ಪ್ರಜಾಪ್ರಭುತ್ವದ ಹಬ್ಬ’. ಇದರಲ್ಲಿ ಜನರು ಮುಕ್ತವಾಗಿ ಪಾಲ್ಗೊಳ್ಳಬೇಕು. ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಕಾನೂನು ಸುವ್ಯವಸ್ಥೆ ಕಾಯ್ದುಕೊಂಡು ಬರಲು ಸೂಕ್ತ ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಿರ್ವಹಿಸಲು ಜಿಲ್ಲಾ ಪೊಲೀಸ್‌ ಇಲಾಖೆಯು ದ. ಕನ್ನಡ ಜಿಲ್ಲಾಡಳಿತಕ್ಕೆ ಸರ್ವ ಸಹಕಾರ ನೀಡಲು ಸಿದ್ಧವಾಗಿದೆ- ಇದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ರವಿಕಾಂತೇ ಗೌಡ ಅವರ ಮಾತು.

Advertisement

ಚುನಾವಣೆಗೆ ಸಂಬಂಧಿಸಿ ಜಿಲ್ಲಾ ಪೊಲೀಸ್‌ ಇಲಾಖೆ ನಡೆಸಿರುವ ಸಿದ್ಧತೆ ಬಗ್ಗೆ ಡಾ| ರವಿಕಾಂತೇ ಗೌಡ ಪರವಾಗಿ ಅಡಿಶನಲ್‌ ಎಸ್‌ಪಿ ವಿ.ಜೆ. ಸಜೀತ್‌ ಅವರು ಉದಯವಾಣಿಗೆ ಮಾಹಿತಿ ನೀಡಿದರು.

ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಚುನಾವಣಾ ಸಿದ್ಧತೆಗಳು ಸುಸೂತ್ರವಾಗಿ ನಡೆಯುತ್ತಿವೆ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಎಂಬ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ಹಾಗೂ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ 39 ಬೂತ್‌ಗಳ ಸಹಿತ ಒಟ್ಟು 969 ಬೂತ್‌ಗಳು ಬರುತ್ತವೆ. ಪ್ರತಿಯೊಂದು ಬೂತ್‌ ಮಟ್ಟದಲ್ಲಿ ಬಂದೋಬಸ್ತು ವ್ಯವಸ್ಥೆ ಕೈಗೊಳ್ಳಲಾಗಿದೆ.

ದಕ್ಷಿಣ ಕನ್ನಡವು ಮತೀಯ ಸೂಕ್ಷ್ಮ ಜಿಲ್ಲೆ ಆಗಿರುವುದರಿಂದ ಇಲ್ಲಿನ ಎಲ್ಲ ಬೆಳವಣಿಗೆಗಳನ್ನು ಗಮನಿಸಲಾಗುತ್ತಿದೆ. ನಕ್ಸಲ್‌ ಪೀಡಿತ ಪ್ರದೇಶಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಮತೀಯ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು 700 ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 300 ಜನ ಅರೆ ಸೈನಿಕ ಪಡೆಯ ಸಿಬಂದಿಗೆ ಹಾಗೂ ಪ್ರತಿಯೊಂದು ಕ್ಷೇತ್ರಕ್ಕೆ ತಲಾ 3 ತುಕಡಿ ಕೆಎಸ್‌ಆರ್‌ಪಿ ಸಿಬಂದಿ ಒದಗಿಸುವಂತೆ ಕೇಳಿಕೊಳ್ಳಲಾಗಿದೆ.

ಚುನಾವಣಾ ನೀತಿಸಂಹಿತೆ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಈಗಾಗಲೇ ಬಂಟ್ವಾಳ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದೊಂದು ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಪಡೆಯದೆ ಸಾರ್ವಜನಿಕ ಮಾತ್ರವಲ್ಲದೆ ಖಾಸಗಿ ಸ್ಥಳಗಳಲ್ಲಿಯೂ ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌, ಹೋರ್ಡಿಂಗ್ಸ್‌, ಭಿತ್ತಿಪತ್ರ ಇತ್ಯಾದಿ ಹಾಕುವಂತಿಲ್ಲ. ಅನಧಿಕೃತವಾಗಿ ಇದ್ದ ಎಲ್ಲ ಬ್ಯಾನರ್‌, ಬಂಟಿಂಗ್‌ಗಳನ್ನು ಈಗಾಗಲೇ ತೆರವು ಮಾಡಲಾಗಿದೆ.

Advertisement

ಅಂತರ್‌ ಜಿಲ್ಲಾ ಮತ್ತು ಅಂತಾರಾಜ್ಯ ಗಡಿ ಭಾಗಗಳಲ್ಲಿ ಒಟ್ಟು 24 ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಜತೆಗೆ ಅಬಕಾರಿ, ಕಂದಾಯ, ಲೋಕೋಪಯೋಗಿ ಮತ್ತಿತರ ಇಲಾಖೆಗಳ ಸಿಬಂದಿ ಕೂಡ ನಿಯೋಜನೆ ಮಾಡಲಾಗಿದ್ದು, ಸಂಯುಕ್ತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವುಗಳ ಜತೆಗೆ 14ಫ್ಲೈಯಿಂಗ್  ಸ್ಕ್ವ್ಯಾ ಡ್‌ ಗಳು, 21 ಎಸ್‌ಎಸ್‌ಟಿಗಳು ಕಾರ್ಯನಿರ್ವಹಿಸಲಿವೆ.

ಗೂಂಡಾಗಳ ಮತ್ತು ರೌಡಿಗಳ ಮೇಲೆ ಗೂಂಡಾ ಕಾಯ್ದೆ ಮತ್ತು ಗಡೀಪಾರು ಕಾಯ್ದೆಯಡಿ ಐಪಿಸಿ/ ಸಿಆರ್‌ಪಿಸಿ ಕಲಂಗಳನ್ವಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪೊಲೀಸ್‌ ಠಾಣಾ ಹಂತದಲ್ಲಿ ಗೂಂಡಾಗಳನ್ನು ಮತ್ತು ರೌಡಿಗಳನ್ನು ಗುರುತಿಸಲಾಗಿದೆ ಹಾಗೂ ಅವರ ಚಲನವಲನಗಳ ಮೇಲೆ ಸೂಕ್ತ ನಿಗಾ ಇರಿಸಲಾಗಿದೆ. ಸಮಾಜ ವಿರೋಧಿ ಶಕ್ತಿಗಳ ಮನಸ್ಸಿನಿಂದಲೇ ಸಮಾಜ ವಿದ್ರೋಹಿ ಚಟುವಟಿಕೆಗಳ ಬಗೆಗಿನ ಚಿಂತನೆಗಳನ್ನು ಅಳಿಸಿ ಹಾಕುವಂತೆ ಎಚ್ಚರಿಕೆ ನೀಡಲಾಗಿದೆ. ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳುವ ಕೆಲಸವನ್ನು ತಹಶೀಲ್ದಾರರು ನಿರ್ವಹಿಸುತ್ತಿದ್ದು, ಅದು ಪ್ರಗತಿಯಲ್ಲಿದೆ.

ಚುನಾವಣಾ ಕರ್ತವ್ಯಕ್ಕಾಗಿ ಪೊಲೀಸ್‌ ಇಲಾಖೆಯಲ್ಲಿ ಪ್ರಸ್ತುತ ಲಭ್ಯವಿರುವ ವಾಹನಗಳ ವಿವರ ಮತ್ತು ಆವಶ್ಯಕತೆ ಇರುವ ಹೆಚ್ಚುವರಿ ವಾಹನಗಳನ್ನು ಪಡೆಯುವ ಕುರಿತಂತೆ ಚುನಾವಣಾಧಿಕಾರಿಗೆ ಪತ್ರ ಬರೆಯಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಸಂಬಂಧಿಸಿ ಎಲ್ಲ ಪೊಲೀಸ್‌ ಸಿಬಂದಿಯಿಂದ ಘೋಷಣಾ ಪತ್ರವನ್ನು ಪಡೆದುಕೊಳ್ಳಲಾಗಿದೆ. ನಿಷ್ಪಕ್ಷವಾಗಿ ನಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಸಿಬಂದಿಯಿಂದ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಇಲಾಖಾ ಶಿಸ್ತು ಕ್ರಮ ಜರಗಿಸಲಾಗುವುದು.

ಮುಕ್ತವಾಗಿ ಪಾಲ್ಗೊಳಿ
‘ಪ್ರಜಾಪ್ರಭುತ್ವದ ಹಬ್ಬ’ವಾಗಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರು ಮುಕ್ತವಾಗಿ ಪಾಲ್ಗೊಳ್ಳಬೇಕು. ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆಯನ್ನು ನಡೆಸುವ ಬಗ್ಗೆ ಜಿಲ್ಲಾ ಪೊಲೀಸ್‌ ವತಿಯಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಮುಂಜಾಗ್ರತಾ ಕ್ರಮ ಜರಗಿಸಲಾಗುವುದು.

 ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next