Advertisement

ವೇಸ್ಟ್‌ ಟ್ರಾನ್ಸ್‌ಫ‌ರ್‌ ಸ್ಟೇಷನ್‌ಗೆ ಸಿದ್ಧತೆ

10:48 AM Aug 24, 2018 | |

ಬೆಂಗಳೂರು: ನಗರದಲ್ಲಿನ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಇಂದೋರ್‌ ಮಾದರಿಯಲ್ಲಿ “ವೇಸ್ಟ್‌ ಟ್ರಾನ್ಸಫ‌ರ್‌ ಸ್ಟೇಷನ್‌’ ನಿರ್ಮಿಸಲು ಸಿದ್ಧತೆ ನಡೆಸಿರುವ ಬಿಬಿಎಂಪಿ, ಪ್ರಾಯೋಗಿಕವಾಗಿ ಯಲಹಂಕ ವಲಯದ ಕುವೆಂಪುನಗರ ವಾರ್ಡ್‌ನಲ್ಲಿ ಅಳವಡಿಸಲು ಮುಂದಾಗಿದೆ.

Advertisement

ಇತ್ತೀಚೆಗೆ ಸ್ವತ್ಛಸರ್ವೆಕ್ಷಣ್‌ ಅಭಿಯಾನದಲ್ಲಿ ಇಂದೋರ್‌, ದೇಶದ ಮೊದಲ ಸ್ವತ್ಛ ನಗರದ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಇಂದೋರ್‌ನಲ್ಲಿ ತ್ಯಾಜ್ಯ ವಿಲೇವಾರಿಗೆ ಟ್ರಾನ್ಸ್‌ಫ‌ರ್‌ ಸ್ಟೇಷನ್‌ಬಳಸಲಾಗುತ್ತಿದೆ. ಅದೇ ಮಾದರಿಯಲ್ಲಿ ನಗರದಲ್ಲಿ ಸ್ಟೇಷನ್‌ಗಳನ್ನು ಸ್ಥಾಪಿಸಲು ಪಾಲಿಕೆ ಮುಂದಾಗಿದೆ. ಅದರಂತೆ ಈಗಾಗಲೇ 50 ಸ್ಥಳಗಳಲ್ಲಿ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಪ್ರಾಯೋಗಿಕವಾಗಿ ಒಂದು ವಾರ್ಡ್‌ನಲ್ಲಿ ಅಳವಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಅದರಂತೆ ಪಾಲಿಕೆಯ 50 ಸ್ಥಳಗಳಲ್ಲಿ ಸ್ಟೇಷನ್‌ ನಿರ್ಮಾಣಕ್ಕೆ ಅಧಿಕಾರಿಗಳು ಸ್ಥಳ ಗುರುತಿಸಿದ್ದು, ಯಲಹಂಕದ ಕುವೆಂಪು ನಗರ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಸ್ಟೇಷನ್‌ ನಿರ್ಮಾಣವಾಗಲಿದೆ. ಈ ವಾರ್ಡ್‌ ನಲ್ಲಿ ಸ್ಟೇಷನ್‌ ಯಶಸ್ವಿಯಾಗಿ ಕಾರ್ಯನಿರ್ವ ಹಿಸಿದ ನಂತರ ಉಳಿದ 51
ಸ್ಥಳಗಳಲ್ಲಿ ಸ್ಟೇಷನ್‌ ಅಳವಡಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. 

ಪಾಲಿಕೆಯಲ್ಲಿ ನಿತ್ಯ 4 ಸಾವಿರ ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರ ಸಂಸ್ಕರಣೆಗೆ 7 ಸಂಸ್ಕರಣಾ ಘಟಕ, 4 ಕ್ವಾರಿಗಳನ್ನು ಗುರುತಿಸಲಾಗಿದೆ. ಆದರೂ ಐದು ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಕ್ವಾರಿಗಳು ಸಹ ಒಂದೊಂದಾಗಿ ಭರ್ತಿಯಾಗು ತ್ತಿವೆ. ಹೀಗಾಗಿ ಮೂಲದಲ್ಲಿಯೇ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ. 

ಅಳವಡಿಕೆ ಹೇಗೆ?: ವಾರ್ಡ್‌ನ ಒಂದು ಜಾಗದಲ್ಲಿ ದೊಡ್ಡ ಕಂಟೇನರ್‌ ಅಳವಡಿಸಲಾಗುತ್ತದೆ. ಅದರೊಳಗೆ ಕಸವನ್ನು ಕ್ರಷ್‌ ಮಾಡಿ, ಲಿಚೆಟ್‌ ಅನ್ನು ಚರಂಡಿಗೆ ಹರಿಸಲಾಗುತ್ತದೆ. ಅದರಿಂದ ಕಸದ ಪ್ರಮಾಣ ಕಡಿಮೆಯಾಗಲಿದ್ದು, ರಸ್ತೆಗಳಲ್ಲಿ ಲಿಚೆಟ್‌ ಹರಿಯುವುದು ತಪ್ಪಿದಂತಾಗುತ್ತದೆ. ಕಂಟೇನರ್‌ ತುಂಬಿದ ನಂತರ ಅದನ್ನು ಕಾಂಪ್ಯಾಕ್ಟರ್‌ ಮೂಲಕ ತೆಗೆದುಕೊಂಡು ಹೋಗಿ, ಆ ಜಾಗದಲ್ಲಿ ಖಾಲಿ ಕಂಟೇನರ್‌ ಅಳವಡಿಸಲಾಗುತ್ತದೆ. ಈ ಯೋಜನೆಗಾಗಿ 279 ಕೋಟಿ ರೂ. ವ್ಯಯಿಸಲಾಗುತ್ತಿದೆ. 

Advertisement

ನಿರ್ವಹಣೆಗೆ 196.34 ಕೋಟಿ ರೂ.: 50 ಕಡೆ ಟ್ರಾನ್ಸ್‌ಫರ್‌ ಸ್ಟೇಷನ್‌ ನಿರ್ಮಾಣ ಹಾಗೂ ಯಂತ್ರೋಪಕರಣ ಖರೀದಿಗಾಗಿ 82.84 ಕೋಟಿ ರೂ. ವೆಚ್ಚ ಮಾಡಲು ಪಾಲಿಕೆ ಮುಂದಾಗಿದೆ. ಆದರೆ, 7 ವರ್ಷಗಳ ಕಾಲ ಟ್ರಾನ್ಸ್‌ಫರ್‌ ಸ್ಟೇಷನ್‌ ನಿರ್ವಹಣೆಗೆ ಪ್ರತ್ಯೇಕವಾಗಿ 196.34 ಕೋಟಿ ರೂ. ಹಣ ವ್ಯಯಿಸಲು ನಿರ್ಧರಿಸಿರುವುದು ದುಬಾರಿ ಎಂಬ ಮಾತುಗಳು ಕೇಳಿಬರುತ್ತಿವೆ.  

ಬೆಳ್ಳಳ್ಳಿ ಕ್ವಾರಿಯಲ್ಲಿ ಬೈಕ್‌ರೇಸ್‌ ಎಂಡ್ನೂರಾ ಪಾರ್ಕ್‌
ಬೆಂಗಳೂರು:
ಬಿಬಿಎಂಪಿಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬೆಳ್ಳಳ್ಳಿ ಕ್ವಾರಿಯಲ್ಲಿ ಬೈಕ್‌ ರೇಸಿಂಗ್‌ಗಾಗಿ “ಎಂಡ್ನೂರಾ ಪಾರ್ಕ್‌’ ನಿರ್ಮಿಸಲು ಪಾಲಿಕೆ ಮುಂದಾಗಿದೆ. ಸುಸಜ್ಜಿತ ಟ್ರ್ಯಾಕ್‌ ನಿರ್ಮಾಣಕ್ಕೆ ತಜ್ಞರ ಅಭಿಪ್ರಾಯ ಪಡೆಯಲು ತೀರ್ಮಾನಿಸಿದೆ. 

ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬೆಳ್ಳಳ್ಳಿ ಕ್ವಾರಿಯ ಕೆಲವು ಭಾಗಗಳಲ್ಲಿ ಕ್ವಾರಿಯ ಕಲ್ಲುಗಳು ಅಡ್ಡ ಬರುವುದರಿಂದ ಅಂತಹ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಸೇರಿದಂತೆ ಇನ್ನಿತರ ಕ್ರಮಗಳ ಕುರಿತು ತಜ್ಞರೊಂದಿಗೆ ಚರ್ಚಿಸಲು ಅಧಿಕಾರಿಗಳು ಮುಂದಾಗಿದ್ದಾರೆ. 

ಬಾಗಲೂರು, ಬೆಳ್ಳಳ್ಳಿ ಹಾಗೂ ಮಿಟ್ಟಗಾನಹಳ್ಳಿಯ ಕ್ವಾರಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಈಗಾಗಲೇ ಭರ್ತಿಯಾಗಿರುವ ಬಾಗಲೂರು ಕ್ವಾರಿಯಲ್ಲಿ ಬೃಹತ್‌ ಉದ್ಯಾನ ನಿರ್ಮಿಸಲಾಗಿದೆ. ಉಳಿದಂತೆ ಬೆಳ್ಳಳ್ಳಿ ಹಾಗೂ ಮಿಟ್ಟಗಾನಹಳ್ಳಿ ಕ್ವಾರಿಗಳ ತ್ಯಾಜ್ಯದ ಮೇಲೆ ಮಣ್ಣಿನ ಹೊದಿಕೆ ಹಾಕಲಾಗುತ್ತಿದ್ದು, ಮಣ್ಣಿನ ಹೊದಿಕೆ ಹಾಕಿದ ನಂತರ, ಬೆಳ್ಳಳ್ಳಿ ಕ್ವಾರಿಯಲ್ಲಿ ಬೈಕ್‌ ರೇಸಿಂಗ್‌ ಟ್ರ್ಯಾಕ್‌ ನಿರ್ಮಿಸಲಾಗುತ್ತದೆ. ಕ್ವಾರಿಯಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಿ ಅದರ ಮೇಲೆ ಮಣ್ಣಿನ ಹೊದಿಕೆ ಹಾಕಲಾಗುತ್ತದೆ.

ಮಿಶ್ರ ತ್ಯಾಜ್ಯವಾಗಿರುವುದರಿಂದ ತ್ಯಾಜ್ಯ ಸಂಪೂರ್ಣವಾಗಿ ಕೊಳೆತಾಗ ಅದು ಸಂಕುಚಿತಗೊಂಡು ಮಣ್ಣು ಕುಸಿಯುವ ಸಾಧ್ಯತೆಯಿರುತ್ತದೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸದಂತೆ ಕೈಗೊಳ್ಳಬೇಕಾದ ಕ್ರಮಗಳು ಕುರಿತು ತಜ್ಞರಿಂದ ಮಾಹಿತಿ ಪಡೆದು, ಅದರಂತೆ ಯೋಜನೆ ಜಾರಿಗೊಳಿಸಲಾಗುತ್ತದೆ. 

ಏನಿದು ಪಾರ್ಕ್‌? 
ಮಣ್ಣಿನ ಹೊದಿಕೆ ಕಾರ್ಯ ಪೂರ್ಣಗೊಂಡ ನಂತರದಲ್ಲಿ ಕ್ವಾರಿಯ ಮಧ್ಯದಲ್ಲಿ ಉದ್ಯಾನ ನಿರ್ಮಿಸಲಾಗುತ್ತದೆ. ಅದರ ಸುತ್ತಲೂ ಅಂಕು-ಡೊಂಕಾಗಿ ರೇಸಿಂಗ್‌ ಟ್ರ್ಯಾಕ್‌ ನಿರ್ಮಿಸುವುದು ಎಂಡ್ನೂರಾ ಪಾರ್ಕ್‌ ವಿಶೇಷತೆಯಾಗಿದೆ. ಇಂತಹ ಟ್ರ್ಯಾಕ್‌ಗಳು ಈಗಾಗಲೇ ಜರ್ಮನಿ, ಥಾಯಾಂಡ್‌ ಸೇರಿ ದಂತೆ ಇತರೆ ದೇಶಗಳಲ್ಲಿ ಪ್ರಸಿದ್ಧವಾಗಿದ್ದು, ಬೈಕ್‌ ರೇಸರ್‌ಗಳಿಗೆ ನೆಚ್ಚಿನ ಪಾರ್ಕ್‌ಗಳಾಗಿವೆ. ಹೀಗಾಗಿ ಬೆಳ್ಳಳ್ಳಿ ಕ್ವಾರಿಯ 20 ಎಕರೆ ಜಾಗದಲ್ಲಿ ಎಂಡ್ನೂರಾ ಪಾರ್ಕ್‌ ಅಭಿವೃದ್ಧಿ ಮುಂದಾಗಿರುವ ಅಧಿಕಾರಿಗಳು, ನಂತರ ದಲ್ಲಿ ಬೈಕ್‌ ರೇಸಿಂಗ್‌ ಚಟುವಟಿಕೆಗಳಿಗೆ ಅನುಮತಿ ನೀಡಿ ಆದಾಯ ಗಳಿಸುವ ಉದ್ದೇಶವನ್ನೂ ಹೊಂದಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next