ಮೈಸೂರು: ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ದೇಗುಲ, ಪ್ರಾರ್ಥನ ಮಂದಿರ, ಮಾಲ್, ಹೋಟೆಲ್ ತೆರೆಯಲು ಸಕಲ ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದ ರಿಂದ ಕಳೆದ 70 ದಿನಗಳಿಂದ ವ್ಯಾಪಾರ-ವಹಿವಾಟು ಇಲ್ಲದೆ ಮಾಲೀಕರು ಕಂಗೆಟ್ಟಿದ್ದರು. ಜಿಲ್ಲೆಯಲ್ಲಿ ಜೂ.8ರಿಂದ ದೇವ ಸ್ಥಾನ ಸೇರಿ ಇನ್ನಿತರ ಮಾಲ್, ರೆಸ್ಟೋರೆಂಟ್ ತೆರೆಯಲು ಅವ ಕಾಶ ಸಿಕ್ಕಿರುವ ಪರಿಣಾಮ, ಮಾಲೀಕರು ಸಿಬ್ಬಂದಿ ಜತೆ ಸೇರಿ ಹೋಟೆಲ್, ರೆಸ್ಟೋರೆಂಟ್, ಲಾಡ್ಜ್ಗಳನ್ನ ಶುಚಿಗೊಳಿಸುವಕಾರ್ಯದಲ್ಲಿ ತೊಡಗಿದ್ದಾರೆ.
ದೇಗಲಗಳಲ್ಲೂ ಸಿದ್ಧತೆ: ಜಿಲ್ಲೆಯ ಚಾಮುಂಡೇಶ್ವರಿ ದೇಗುಲ, ನಂಜನಗೂಡು ಶ್ರೀಕಂಠೇಶ್ವರ ದೇಗುಲ ಸೇರಿದಂತೆ ಹಲವು ದೇಗುಲಗಳಿಗೆ ದರ್ಶನಕ್ಕೆ ಬರುವ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮುಜರಾಯಿ ಇಲಾಖೆ ಸಿದ್ಧತೆ ಮಾಡುತ್ತಿದೆ. ಜೂ.8ರಿಂದ ಚಾಮುಂಡೇಶ್ವರಿ ದೇವಾಲಯ ಆರಂಭ ಆಗುವುದರಿಂದ ಭಕ್ತಾದಿಗಳು ಮಾಸ್ಕ್ ಧರಿಸ ಬೇಕೆಂಬ ನಿಯಮ ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಬಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ದೇಹದ ಉಷ್ಣಾಂಶ ಮಾಪನ ಮಾಡಲಾಗುತ್ತದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಯತಿರಾಜ್ ಸಂಪತ್‌ಕುಮಾರ್ ತಿಳಿಸಿದ್ದಾರೆ.
ಮಾಲೀಕರಲ್ಲಿ ಸಂತಸದ ಜತೆ ಆತಂಕ: ಜೂ.8ರಂದು ಹೋಟೆಲ್, ರೆಸ್ಟೋರೆಂಟ್, ಲಾಡ್ಜ್ಗಳನ್ನು ತೆರೆಯಬಹುದೆಂದು ಸರ್ಕಾರ ಹೇಳಿರುವ ಕಾರಣ, ಮೈಸೂರಿನಲ್ಲಿ ಹೋಟೆಲ್ ಉದ್ಯಮ ಪುನಾರಂಭಿಸಲು ಮಾಲೀಕರು ಉತ್ಸುಕತೆಯಿಂದ ತಯಾರಿ ಮಾಡಿಕೊಳ್ಳುತ್ತಿದ್ದರೂ ಕೊರೋನಾ ಆತಂಕ ಆವರಿಸಿದೆ. ನೆರೆಯ ರಾಜ್ಯ, ಜಿಲ್ಲೆಗಳಲ್ಲಿ ಕರೋನಾ ರಣಕೇಕೆ ಹೆಚ್ಚಾಗಿರುವ ಜತೆಗೆ ನಿರೀಕ್ಷಿತ ಪ್ರಮಾಣ ದಲ್ಲಿ ಪ್ರವಾಸ ಮಾಡದೆ ಇರುವುದರಿಂದ ನಷ್ಟವಾಗುತ್ತದೆ ಎನ್ನುವ ಭಯ ಶುರುವಾಗಿದೆ.
ಮೈಸೂರಿನ ಎಲ್ಲಾ ಪಂಚತಾರಾ ಹೋಟೆಲ್‌ಗಳಲ್ಲಿ ಕೊಠಡಿ, ಲಾಂಜ್, ರಿಸೆಪ್ಷನ್ ಕೌಂಟರ್, ರೆಸ್ಟೋರೆಂಟ್‌ಗಳನ್ನು ಸ್ವತ್ಛ ಗೊಳಿಸಿ, ಸ್ಯಾನಿಟೈಜೇಷನ್ ಮಾಡಲಾಗುತ್ತಿದೆ. ಬರುವ ಗ್ರಾಹಕ ರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಹೋಟೆಲ್ ಮಾಲೀಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಗರದ ಚರ್ಚ್, ಮಸೀದಿಗಳಿಗೆ ಬರುವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಾಕ್ಸ್ ಮಾರ್ಕ್ ಮಾಡಲಾಗಿದ್ದು, ಸ್ಯಾನಿಟೈಸರ್ ವ್ಯಸ್ಥೆ ಕಲ್ಪಿಸಲಾಗಿದೆ.
ದೇವರ ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಎರಡು ತಿಂಗಳಿಂದಲೂ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನವಿಲ್ಲ ಬರೀ ಪೂಜೆ ನಡೆಯುತ್ತಿತ್ತು. ಸೋಮವಾರ ದೇವಾಲಯ ತೆರೆದರೂ ವಯಸ್ಸಾದವರು ಹಾಗೂ ಮಕ್ಕಳಿಗೆ ಪ್ರವೇಶವಿಲ್ಲ. ಸರ್ಕಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
-ಶಶಿಶೇಖರ್ ದೀಕ್ಷಿತ್, ಪ್ರಧಾನ ಅರ್ಚಕ, ಚಾಮುಂಡಿ ದೇವಾಲಯ