Advertisement

ಉಕ್ಕಿನ ಹಕ್ಕಿಗಳ ಹಾರಾಟಕ್ಕೆ ಭರದ ಸಿದ್ಧತೆ

06:42 AM Jan 31, 2019 | |

ಬೆಂಗಳೂರು: ಯಲಹಂಕದ ವಾಯು ನೆಲೆಯಲ್ಲಿ ಲೋಹದ ಹಕ್ಕಿಗಳ ಹಾರಾಟ, ರಕ್ಷಣಾ ಕ್ಷೇತ್ರದ ಸುಧಾರಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವೇದಿಕೆಯಾಗಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2019ಕ್ಕೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆ ಭರದಿಂದ ಸಾಗಿದೆ.

Advertisement

ಫೆಬ್ರವರಿ 20ರ ಬೆಳಗ್ಗೆ ಏರೋ ಶೋ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಫೆ.24ರವರೆಗೂ ವೈಮಾನಿಕ ಹಾರಾಟ ಮತ್ತು ಪ್ರದರ್ಶನ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಮಾನ ಹಾರಾಟ ಪ್ರದರ್ಶನ ಇರಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಯಲಹಂಕ ವಾಯುನೆಲೆಯಲ್ಲಿ ಮಾಡಿಕೊಳ್ಳಲಾಗುತ್ತಿದೆ.

ಫ್ಲೈಯಿಂಗ್‌ ಡಿಸ್‌ಫ್ಲೇ ವಿಭಾಗದಲ್ಲಿ ವಿವಿಧ ಬಗೆಯೆ 36 ಏರ್‌ಕ್ರಾಫ್ಟ್, ಇತರೆ ಏಜೆನ್ಸಿಗಳ 7 ಏರ್‌ಕ್ರಾಫ್ಟ್ ಮತ್ತು ಸ್ಟಾಟಿಕ್‌ ಡಿಸ್‌ಫ್ಲೇ ವಿಭಾಗದಲ್ಲಿ ಐಎಎಫ್ ಏರ್‌ಕ್ರಾಫ್ಟ್ ಹಾಗೂ ಎಚ್ಎಎಲ್‌ ಮತ್ತು ಇತರೆ ಏಜೆನ್ಸಿಗಳ ತಲಾ 11 ಏರ್‌ಕ್ರಾಫ್ಟ್ ಪ್ರದರ್ಶನ ಇರಲಿದೆ. ಇದರ ಜತೆಗೆ ವಿದೇಶ ಏರ್‌ಕ್ರಾಫ್ಟ್ಗಳ ವೈಮಾನಿಕ ಪ್ರದರ್ಶನವೂ ನಡೆಯಲಿದೆ ಮತ್ತು ಟೀಮ್‌ ಫ್ಲೈಯಿಂಗ್‌ ಡಿಸ್‌ಫ್ಲೇ ಕೂಡ ಇರಲಿದೆ ಎಂದು ಯಲಹಂಕ ವಾಯುನೆಲೆಯ ಏರ್‌ ಆಫೀಸರ್‌ ಕಮಾಂಡಿಂಗ್‌ ರಾವುರಿ ಶೀತಲ್‌ ಮಾಹಿತಿ ನೀಡಿದರು.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ- 2019ರ ಇವೆಂಟ್ ಮ್ಯಾನೇಜಮೆಂಟ್ ಎಚ್ಎಎಲ್‌ ಮಾಡಲಿದೆ. ರಕ್ಷಣಾ ಕ್ಷೇತ್ರದ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕಾಗಿ ಈಗಾಗಲೇ 164 ವಿದೇಶಿ ಕಂಪೆನಿ ಮತ್ತು 196 ದೇಶಿ ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ಫೆ.20ರಿಂದ 24ರವರೆಗೂ ನಿರಂತರ ಸೆಮಿನಾರ್‌, ಬಿಜಿನೆಸ್‌ ಮೀಟ್ ಹಾಗೂ ವಸ್ತು ಪ್ರದರ್ಶನ ನಡೆಯಲಿದೆ ಎಂದರು.

ಫೆ.23ರಂದು ಮಹಿಳಾ ದಿನದ ವಿಶೇಷವೆಂಬಂತೆ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ವೈಮಾನಿಕ ಕ್ಷೇತ್ರದ ಸಾಧನೆ ಮಾಡಿರುವ ಮಹಿಳೆಯರು ಭಾಗವಹಿಸಲಿದ್ದಾರೆ. ಹಾಗೆಯೇ ಪ್ರತಿದಿನ 10 ಸಾವಿರ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಬರಬಹುದಾದ ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಣೆ ನೀಡಿದರು.

Advertisement

ಸಾರ್ವಜನಿಕರಿಗೆ ಪ್ರತ್ಯೇಕ ಪಾಸ್‌ ವಿತರಣೆ ಆನ್‌ಲೈನ್‌ ಮೂಲಕವೇ ನಡೆಯಲಿದೆ. ಆನ್‌ಲೈನ್‌ನಲ್ಲಿ ಪಾಸ್‌ ಖರೀದಿಸಲು ಸಾಧ್ಯವಾಗದವರು ಸ್ಥಳದಲ್ಲೇ ಖರೀದಿಸಲು ವ್ಯವಸ್ಥೆ ಇದೆ. ಆದರೆ, ಆನ್‌ಲೈನ್‌ ಮೂಲಕವೇ ಪಾಸ್‌ಪಡೆಯುವುದು ಉತ್ತಮ. ಫ‌ುಡ್‌ಕೋರ್ಟ್‌, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಮಾಡಿದ್ದೇವೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ. ನಾಲ್ಕು ದಿನ ನಡೆಯುವ ಕಾರ್ಯಕ್ರಮಗಳ ವಿವರನ್ನು ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2019ರ ವೆಬ್‌ಸೈಟ್ https://aeroindia.gov.in ನಿಂದ ಪಡೆಯಬಹುದು ಎಂದರು.

ಡ್ರೋಣ್‌ ಸ್ಪರ್ಧೆ: 2017ರಲ್ಲಿ ನಡೆದ ಏರೋಶೋನಲ್ಲಿ 5.4 ಲಕ್ಷ ಜನರು ಭಾಗಿಯಾಗಿದ್ದರು. ಈ ವರ್ಷ ಇನ್ನಷ್ಟು ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆ ಇದೆ. ಡ್ರೋಣ್‌ ಸ್ಪರ್ಧೆ ಹಮ್ಮಿಕೊಂಡಿದ್ದೇವೆ. ಜಕ್ಕೂರು ವಾಯುನೆಯಲ್ಲಿ ಡ್ರೋಣ್‌ ಸ್ಪರ್ಧೆಯ ಲೀಗ್‌ ನಡೆಯಲಿದ್ದು, ಫೈನಲ್‌ ಯಲಹಂಕದಲ್ಲಿ ನಡೆಯಲಿದೆ. ಇದರ ಜತೆಗೆ ಫೋಟೋಗ್ರಫಿ ಸ್ಪರ್ಧೆ ಆಯೋಜಿಸಿದ್ದೇವೆ. ವಿದ್ಯಾರ್ಥಿಗಳಿಗೆ ಹಾಗೂ ನವೋದ್ಯಮಿಗಳಿಗೂ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.

ಬಿಗಿ ಭದ್ರತೆ: ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರದರ್ಶನ ಆವರಣವನ್ನು ಐದು ವಿಭಾಗವಾಗಿ ವಿಂಗಡಿಸಲಾಗಿದೆ. ಉದ್ಫಾಟನಾ ಪ್ರದೇಶದಲ್ಲಿ 3 ಸಾವಿರ ಜನರು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತ್ಯೇಕ ಪಾರ್ಕಿಂಗ್‌, ಬಸ್‌ ಸೇವೆ ಮತ್ತು ಲಾಕರ್‌ ವ್ಯವಸ್ಥೆ ಮಾಡಲಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ವಿವಿಧ ಭದ್ರತಾ ಏಜನ್ಸಿಗಳು ಒಟ್ಟಾಗಿ ಸೇವೆ ಸಲ್ಲಿಸಲಿವೆ. ತುರ್ತು ವೈದ್ಯಕೀಯ ಸೇವೆ, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣ ಘಟಕದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವರ ನೀಡಿದರು.

ಲೋಗೋದಲ್ಲಿ ತೇಜಸ್‌
2019ರ ಏರೋ ಶೋಗೆ ಪ್ರತ್ಯೇಕ ಲಾಂಛನ ಮಾಡಲಾಗಿದೆ. ‘ತೇಜಸ್‌’ ಲಘು ಯುದ್ಧ ವಿಮಾನ (ಎಲ್‌ಸಿಎ) ಪ್ರೇರಣೆಯೊಂದಿಗೆ ಲಾಂಛನ ಸಿದ್ಧಪಡಿಸಲಾಗಿದ್ದು, ಮೂರು ಬಣ್ಣಗಳ ಸಮ್ಮಿಳಿತ ತೇಜಸ್‌ ಯುದ್ಧ ವಿಮಾನದ ಪ್ರತಿಕೃತಿ ಮಧ್ಯದಲ್ಲಿ ಅಶೋಕ ಚಕ್ರ ಇರುವುದು ಈ ಬಾರಿಯ ಲಾಂಛನದ ವಿಶೇಷ. ‘ಎ’ ಚಿನ್ಹೆಯು ಜೆಟ್ ಯುದ್ಧ ವಿಮಾನ ಮತ್ತು ಏರೋ ಇಂಡಿಯಾ ಜಾಗತಿಕ ಪ್ರದರ್ಶನದ ಭಾರತದ ಹೆಮ್ಮೆಯನ್ನು ಎತ್ತಿ ತೋರಿಸಲಿದೆ. ಇದರ ಜತೆಗೆ ಭಾರತದ ಏರೋಸ್ಪೇಸ್‌ ಹಾಗೂ ವಿಮಾನ ಯಾನ ಕ್ಷೇತ್ರದಲ್ಲಿ ಇರುವ ವಿಫ‌ುಲ ಅವಕಾಶ ಮತ್ತು ಭಾರತೀಯ ಮೌಲ್ಯಗಳ ಸಂವಹನ ಮಾಧ್ಯಮವಾಗಿಟ್ಟುಕೊಂಡು ‘ದಿ ರನ್‌ವೇ ಟು ಎ ಬಿಲಿಯನ್‌ ಅಪರ್ಚುನಿಟಿಸ್‌’ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next