Advertisement

ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ: ಕೇಂದ್ರ ಹೆಚ್ಚಿಸಲು ಚಿಂತನೆ

12:28 AM May 02, 2020 | Sriram |

ಬೆಂಗಳೂರು: ಮಾಸ್ಕ್ ಮತ್ತು ಸಾಮಾಜಿಕ ಅಂತರದ ನಿಯಮದಡಿ ಎಸೆಸೆಲ್ಸಿ ಪರೀಕ್ಷೆ ನಡೆಸಬೇಕಿರುವುದರಿಂದ ಹೆಚ್ಚುವರಿ ಪರೀಕ್ಷಾ ಕೇಂದ್ರಗಳ ಆವಶ್ಯಕತೆಯೂ ಎದುರಾಗುವ ಸಾಧ್ಯತೆಯಿದೆ.

Advertisement

ಮೇ 3ಕ್ಕೆ ಲಾಕ್‌ಡೌನ್‌ ಸಡಿಲಗೊಳ್ಳುವ ಸಾಧ್ಯತೆಯಿದ್ದು, ಪರಿಸ್ಥಿತಿಯ ಆಧಾರದಲ್ಲಿ ಎಸೆಸೆಲ್ಸಿ ಪರೀಕ್ಷೆ ಮತ್ತು ಪರಿಷ್ಕೃತ ವೇಳಾಪಟ್ಟಿಯ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸೆಸೆಲ್ಸಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಸಿದ್ಧತೆಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಡಿಕೊಳ್ಳುತ್ತಿದೆ. ಸಾಮಾಜಿಕ ಅಂತರದ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವ ಅಗತ್ಯ ಎದುರಾಗಬಹುದು ಎಂಬ ಉದ್ದೇಶದಿಂದ ಈಗಾಗಲೇ ಗುರುತಿಸಿರುವ ಪರೀಕ್ಷಾ ಕೇಂದ್ರದಲ್ಲಿ ಇರುವ ಹೆಚ್ಚುವರಿ ಕೊಠಡಿಗಳ ಬಳಕೆಗೂ ಚಿಂತನೆ ನಡೆಸಲಾಗಿದೆ ಎಂದು ಮಂಡಳಿಯ ಮೂಲಗಳು ಖಚತಪಡಿಸಿವೆ.

ಆತಂಕ, ಗೊಂದಲ ಬೇಡ
ಲಾಕ್‌ಡೌನ್‌ ಸಡಿಲವಾದ ಅನಂತರ ಬಸ್‌ ಸೇವೆ ಆರಂಭವಾದ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಬಸ್‌ ಸೇವೆ ಇಲ್ಲದೆ ಪರೀಕ್ಷೆ ನಡೆಸುವುದು ಕಷ್ಟವಾಗುತ್ತದೆ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಅನನುಕೂಲ ಆಗುವ ಸಾಧ್ಯತೆಯೂ ಹೆಚ್ಚಿದೆ. ಹೀಗಾಗಿ ಸಾರಿಗೆ ವ್ಯವಸ್ಥೆ ಸುಗಮವಾದ ಬಳಿಕವೇ ಪರೀಕ್ಷೆ ನಡೆಯಲಿದೆ ಮತ್ತು ಈ ಬಗ್ಗೆ ಹೆತ್ತವರು ಮತ್ತು ವಿದ್ಯಾರ್ಥಿಗಳು ಆತಂಕ ಅಥವಾ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು, ದಕ್ಷಿಣ ಕನ್ನಡ, ಮೈಸೂರು, ಉಡುಪಿ, ಮಂಡ್ಯ, ಹಾಸನ, ಚಿಕ್ಕಮಗಳೂರು ಸಹಿತ ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರದ ಸಮಸ್ಯೆ ಉದ್ಭವಿಸುವುದಿಲ್ಲ. ಈಗ ಇರುವ ಪರೀಕ್ಷಾ ಕೇಂದ್ರಗಳಲ್ಲೇ ಸಾಕಷ್ಟು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಈ ಸಮಸ್ಯೆ ಎದುರಾಗುತ್ತದೆ. ಮಳೆ, ಪ್ರವಾಹದಿಂದ ಸಾವಿರಾರು ಶಾಲೆಗಳು ಮತ್ತು ಕೊಠಡಿ ನಾಶವಾಗಿದೆ. ಹೀಗಾಗಿ ಹೆಚ್ಚುವರಿ ಪರೀಕ್ಷಾ ಕೇಂದ್ರ ತೆರೆದು, ಭದ್ರತೆ ಒದಗಿಸುವುದು ಕಷ್ಟವಾಗಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

Advertisement

ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ
ಪರೀಕ್ಷೆ ಬರುವ ಪ್ರತಿ ವಿದ್ಯಾರ್ಥಿಗೂ ಸ್ಯಾನಿಟೈಸರ್‌ ಅಗತ್ಯವಿರುತ್ತದೆ. ಹೀಗಾಗಿ ಪರೀಕ್ಷಾ ಕೇಂದ್ರದಲ್ಲೇ ಬೇಕಾದಷ್ಟು ಸ್ಯಾನಿಟೈಸರ್‌ ವ್ಯವಸ್ಥೆಗೂ ಸಿದ್ಧತೆ ನಡೆದಿದೆ. ಅಲ್ಲದೆ, ಈಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇಷ್ಟಾಗಿಯೂ ಗ್ರಾಮೀಣ ಭಾಗ ಅಥವಾ ಬೇರೆ ಭಾಗದ ವಿದ್ಯಾರ್ಥಿಗಳು ಮಾಸ್ಕ್ ಧರಿಸದೇ ಬಂದಲ್ಲಿ ಪರೀಕ್ಷಾ ಕೇಂದ್ರದಲ್ಲೇ ಅವರಿಗೆ ಮಾಸ್ಕ್ ವಿತರಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ.

ಎಸೆಸೆಲ್ಸಿ ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆ ನಡೆಯುತ್ತಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಇರುವ ಹೆಚ್ಚುವರಿ ಕೊಠಡಿಗಳನ್ನು ಬಳಸಿಕೊಳ್ಳಲಿದ್ದೇವೆ.
ವಿ.ಸುಮಂಗಳಾ, ನಿರ್ದೇಶಕಿ,
ಎಸೆಸೆಲ್ಸಿ ಬೋರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next