ಶ್ರೀರಂಗಪಟ್ಟಣ: ಪಟ್ಟಣದ ಆನೆಕೋಟೆ ಬಾಗಿಲ ಬಳಿ ಇರುವ ಧ್ವನಿ – ಬೆಳಕು ಸ್ಮಾರಕ ಮಾದರಿಗಳ ಕಾರ್ಯಕ್ರಮ ನಡೆಯುವ ಸ್ಥಳವನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗಳೊಂದಿಗೆ ಪರಿಶೀಲಿಸಿದರು.
ಧ್ವನಿ-ಬೆಳಕು ಕಾರ್ಯಕ್ರಮ ಸ್ಥಳ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಬಗ್ಗೆ ಸ್ಥಳೀಯರು ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ತೆರಳಿ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಸಿದ್ಧತೆ ಮಾಡಿ, ದಸರಾ ಒಳಗೆ ಧ್ವನಿ -ಬೆಳಕು ಕಾರ್ಯಕ್ರಮಕ್ಕೆ ಮತ್ತೇ ಚಾಲನೆ ನೀಡಲು ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಿದರು.
ಆರಂಭ, ನಿರ್ವಹಣೆ: 2014ರಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಧ್ವನಿ-ಬೆಳಕು ಕಾರ್ಯಕ್ರಮ ಪ್ರತಿನಿತ್ಯ ನಡೆಸು ಯೋಜನೆ ರೂಪಿಸಿದ್ದರು. ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿಗರಿಗೆ ಇಲ್ಲಿನ ಇತಿಹಾಸ, ಸ್ಮಾರಕಗಳ ಕುರಿತು ಧ್ವನಿ ಸುರುಳಿ ಮೂಲಕ ತಿಳಿಸುವ ಕಾರ್ಯಕ್ರಮ ಇದಾಗಿತ್ತು.
ಪ್ರವಾಸಿಗರಿಗೆ 10 ರೂ.ಗಳಂತೆ ಪ್ರವೇಶ ಶುಲ್ಕ ನಿಗದಿ ಮಾಡಲಾಗಿತ್ತು. ನಿರ್ವಹಣೆಯನ್ನು ಪುರಸಭೆಗೆ ವಹಿಸಿಕೊಂಡಿತ್ತು. ಪ್ರವೇಶ ಶುಲ್ಕದಿಂದ ಬರುವ ಆದಾಯಕ್ಕಿಂತ ನಿರ್ವಹಣೆ ವೆಚ್ಚವೇ ಹೆಚ್ಚಾದ್ದರಿಂದ ಪುರಸಭೆ ನಿರ್ವಹಣೆಯನ್ನೇ ಕೈಬಿಟ್ಟಿತು. ಅಂದಿನಿಂದ ಧ್ವನಿ-ಬೆಳಕು ಸ್ಥಳ ಪಾಳು ಬಿದ್ದ ಸ್ಥಿತಿಗೆ ತಲುಪಿತು. ನಿರ್ವಹಣೆ ಇಲ್ಲದೆ ಅತ್ತ ಧ್ವನಿಯೂ ಇಲ್ಲ, ಇತ್ತ ಬೆಳಕೂ ಇಲ್ಲ ಎಂಬಂತೆ ಆಗಿತ್ತು.
ಗ್ಯಾಲರಿ ನಿರ್ಮಾಣ: ಬಳಿಕ ಪ್ರವಾಸೋದ್ಯಮ ಇಲಾಖೆ ಮತ್ತೆ ಅದರ ನಿರ್ವಹಣೆಗೆ ಮುಂದಾಯಿತು. ಅಳಿದುಳಿದ ಸ್ಮಾರಕಗಳ ಮಾದರಿ ಸಂಗ್ರಹಿಸಿ ಮತ್ತೆ ಅದಕ್ಕೆ ಉತ್ತೇಜನ ನೀಡಿತು. ಪ್ರವಾಸಿಗರ ವೀಕ್ಷಣೆಗೆ ಗ್ಯಾಲರಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜತೆಗೆ ವಿದ್ಯುತ್ ದೀಪ, ಸ್ಮಾರಕ ಮಾದರಿಗಳಿಗೆ ಬಣ್ಣ ಬಳಿಯುವುದು, ಹುಲ್ಲಿನ ಹಾಸಿಗೆ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ.
ಪುನಾರಂಭ: ಧ್ವನಿ-ಬೆಳಕು ಕಾರ್ಯಕ್ರಮದ ನಿರ್ವಹಣೆ ಇದೀಗ ಬುಕ್ ಮೈ ಶೋ ಇನೋವೇಟೀವ್ ಪ್ರಾಜೆಕ್ಟ್ ಸಂಸ್ಥೆಗೆ ನೀಡಲಾಗಿದೆ. ಇಲ್ಲಿರುವ ಮಾದರಿಗಳನ್ನು ದಸರಾ ಒಳಗೆ ದುರಸ್ತಿ ಕಾರ್ಯ ಮಾಡಿ ಪ್ರವಾಸಿಗರ ವೀಕ್ಷಣೆಗೆ ಪುನಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹರೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಎಸಿ ಶೈಲಜಾ, ತಹಶೀಲ್ದಾರ್ ಡಿ.ನಾಗೇಶ್, ತಾಪಂ ಇಒ ಅರುಣ್ ಕುಮಾರ್, ಮುಖ್ಯಾಧಿಕಾರಿ ಕೃಷ್ಣ ಸೇರಿದಂತೆ ಇತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.