Advertisement
ಫೆ.20ರಿಂದ ಮಹಾ ಶಿವರಾತ್ರಿ ಜಾತ್ರೆ ಆರಂಭವಾಗಲಿದೆ. ಫೆ.21ರಂದು ಶ್ರೀಸ್ವಾಮಿಗೆ ಎಣ್ಣೆಮಜ್ಜನ ವಿಶೇಷ ಸೇವೆ ಉತ್ಸವ ನಡೆಯಲಿದೆ. 22 ಹಾಗೂ 23ರಂದು ಅಮಾವಾಸ್ಯೆ ವಿಶೇಷ ಸೇವೆ ಉತ್ಸವ ಜರುಗಲಿದೆ. 24ರ ಬೆಳಗ್ಗೆ 9.50ರಿಂದ 11 ಗಂಟೆಯವರೆಗೆ ಮಹಾರಥೋತ್ಸವ, ರಾತ್ರಿ ಅಭಿಷೇಕ, ಪೂಜೆ ನಂತರ ಕೊಂಡೋತ್ಸವ ನಡೆಯಲಿದೆ. ಭಕ್ತಾದಿಗಳಿಗೆ ಬೆಳಗ್ಗೆ 6.30ರಿಂದ ಸಂಜೆ 5.30ರವರೆಗೆ ಹಾಗೂ ರಾತ್ರಿ 8.30ರಿಂದ ಬೀಗಮುದ್ರಯಾಗುವವರಿಗೆ ಧರ್ಮ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.
Related Articles
Advertisement
ವಿವಿಧೆಡೆ ನಲ್ಲಿ ಅಳವಡಿಕೆ: ಕುಡಿಯುವ ನೀರು ಮತ್ತು ಸ್ನಾನದ ನೀರಿನ ವ್ಯವಸ್ಥೆಯನ್ನು ಅರಳಿ ಮಠದ ಮುಂಭಾಗ, ಬಲಮುರಿ ಗಣಪತಿ ದೇವಸ್ಥಾನದ ಮುಂಭಾಗ, ಲಾಡು ಕೌಂಟರ್ ಪಕ್ಕ, ರಂಗಮಂದಿರದ ಆವರಣ, ಬಸ್ ನಿಲ್ದಾಣದ ಮಾಹಿತಿ ಕೇಂದ್ರದ ಪಕ್ಕದಲ್ಲಿ, ಶ್ರೀಶೈಲ ಭವನ ಮುಂಭಾಗ, ಸಂಕಮ್ಮ ನಿಲಯ ಮುಂಭಾಗ, ಅಂತರಗಂತೆ ಹತ್ತಿರ ಸೇರಿ ಒಟ್ಟು 8 ಸ್ಥಳಗಳಲ್ಲಿ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ವಿವಿಧ ಸ್ಥಳಗಳಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದೆ. ಸರದಿ ಸಾಲಿನಲ್ಲಿಯೂ ಸಹ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪರ್ವ ಮಾಡುವ ಭಕ್ತರಿಗೆ ಕಲ್ಯಾಣ ಮಂಟಪದ ಮುಂಭಾಗ ಸ್ಥಳಾವಕಾಶ ಕಲ್ಪಿಸಿ, ಪಾತ್ರೆ ತೊಳೆಯಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಪ್ರತ್ಯೇಕ ಷವರ್ ವ್ಯವಸ್ಥೆ: ಅಂತರಗಂಗೆ ಪಕ್ಕದಲ್ಲಿ ಬೃಹತ್ ಶೌಚಾಲಯದ ಹಿಂಭಾಗದಲ್ಲಿ ಪ್ರತಿ ಗಂಟೆಗೆ ಸುಮಾರು 400 ಭಕ್ತರು ಏಕಕಾಲದಲ್ಲಿ ಸ್ನಾನ ಮಾಡಲು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಷವರ್ ವ್ಯವಸ್ಥೆ ಕಲ್ಪಿಸಿದೆ. ಅಂತರಗಂಗೆಯಲ್ಲಿ ಹೊಸದಾಗಿ ನಿರ್ಮಿಸಿರುವ ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಲು ಮತ್ತು ಕಲ್ಯಾಣಿ ಪಕ್ಕದಲ್ಲಿ ಬಟ್ಟೆ ಬದಲಾಯಿಸಲು ವ್ಯವಸ್ಥೆ ಮಾಡಲಾಗಿದೆ. ಅಂತರಗಂಗೆ ಪಕ್ಕದಲ್ಲಿರುವ ಬೃಹತ್ ಶೌಚಾಲಯದ ಕಟ್ಟಡದಲ್ಲಿಯೂ ಸ್ನಾನದ ವ್ಯವಸ್ಥೆ ಇರಲಿದೆ. ಭಕ್ತಾದಿಗಳು ಕೈಕಾಲು ತೊಳೆಯಲು ಅರಳಿ ಮರದ ಮುಂಭಾಗ, ರಾಜಗೋಪುರದ ಬಲಭಾಗ, ಬಸ್ ನಿಲ್ದಾಣದ ಶೌಚಾಲಯದ ಪಕ್ಕ ಸೇರಿದಂತೆ 3 ಕಡೆಗಳಲ್ಲಿ ನಲ್ಲಿಗಳನ್ನು ಅಳವಡಿಸಿ ಕ್ರಮ ವಹಿಸಲಾಗಿದೆ.
ನೆರಳು, ನೀರಿಗೆ ತುರ್ತು ಕ್ರಮ: ಜಾತ್ರೆಗೆ ಬರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯನ್ನು ಮಾಲಾಗಿದೆ. ರಾಜಗೋಪುರದ ಮುಂಭಾಗ ಎಡ ಮತ್ತು ಬಲ ಭಾಗದ ಖಾಲಿ ಮೈದಾನದಲ್ಲಿ ಪ್ರತ್ಯೇಕವಾಗಿ 2 ಕಡೆ ಶಾಮಿಯಾನ ಹಾಕಲಾಗಿದೆ. ಸರತಿ ಸಾಲಿನಲ್ಲಿ ದರ್ಶನ ಮಾಡುವ ಭಕ್ತರಿಗೆ ನೆರಳಿಗಾಗಿ ದೇವಸ್ಥಾನದ ಸುತ್ತ, ವಿಶೇಷ ದಾಸೋಹದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಮುಂಭಾಗದ ಆವರಣದಲ್ಲಿ ಶಾಮಿಯಾನ ಹಾಕಲಾಗಿದೆ. ಇತರೆ ಅವಶ್ಯಕತೆ ಕಂಡುಬಂದ ಸ್ಥಳಗಳಲ್ಲಿ ಶಾಮಿಯಾನ ಅಳವಡಿಸಲಾಗುವುದು. ತುರ್ತು ಸಂದರ್ಭದಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ನೆರಳು ಮತ್ತು ನೀರಿನ ವ್ಯವಸ್ಥೆಯನ್ನು ತುರ್ತಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ಶೌಚಾಲಯ ಸೌಲಭ್ಯ: ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಆವರಣದ ಅಂತರಗಂತೆ ಸಮೀಪ ಬೃಹತ್ ಶೌಚಾಲಯ, ಪಾಲಾರ್ ರಸ್ತೆ, ಅರಳಿಮರದ ರಸ್ತೆ, ಬಸ್ ನಿಲ್ದಾಣ, ಶಿವದರ್ಶಿನಿ ಅತಿಥಿಗೃಹದ ಪಕ್ಕ, ಮುಡಿ ಶೆಡ್ ಹಿಂಭಾಗ, ದಾಸೋಹದ ಒಳ ಆವರಣ ಹಾಗೂ ಎಸಿ ಶೀಟ್ ಮಳಿಗೆಗಳ ಪಕ್ಕ ಸೇರಿದಂತೆ ಒಟ್ಟು 11 ಸ್ಥಳಗಳಲ್ಲಿ ಖಾಯಂ ಆಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಭಕ್ತಾದಿಗಳು ಉಚಿತವಾಗಿ ಉಪಯೋಗಿಸಬಹುದಾಗಿದೆ. ದೇವಸ್ಥಾನದ ಮುಂಭಾಗ, ರಾಜಗೋಪುರದ ಬಲಭಾಗದ ತಗ್ಗಿನಲ್ಲಿ 60 ಶೌಚಾಲಯಗಳನ್ನು ಹೊಂದಿದ ಸಮುಚ್ಚಯ ಹಾಗೂ ಆಸ್ಪತ್ರೆ ಮುಂಭಾಗದಲ್ಲಿ ಪಾರ್ಕಿಂಗ್ ಆವರಣದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ತಾತ್ಕಾಲಿಕವಾಗಿ ಶೌಚಾಲಯಗಳನ್ನು ಸಂಕಮ್ಮ ನಿಲಯದ ಹತ್ತಿರ, ಅಂತರಗಂಗೆ ಡ್ಯಾಂ ರಸ್ತೆ ಹಾಗೂ ಪಾಲಾರ್ ರಸ್ತೆಯಲ್ಲಿಯೂ ಸಹ ಕಲ್ಪಿಸಲಾಗಿದೆ.
ನಿರಂತರ ದಾಸೋಹ: ಭಕ್ತಾದಿಗಳಿಗೆ ದಾಸೋಹದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿಯವರೆಗೆ ನಿರಂತರವಾಗಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಊಟದ ಸಮಯದಲ್ಲಿ ಹಬ್ಬದ ಊಟ ಉಳಿದಂತೆ ತಿಂಡಿ ಬಡಿಸುವ ವ್ಯವಸ್ಥೆ ಮಾಡಲಾಗಿದೆ. ವಿಶೇಷ ದಾಸೋಹದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಮಾಹಿತಿ ಕೇಂದ್ರ ಭಕ್ತಾದಿಗಳಿಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಮಾಹಿತಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಪೆಟ್ರೋಲ್ ಬಂಕ್ ಬಳಿ ಭಕ್ತಾದಿಗಳು ಇಳಿಯುವ ಸ್ಥಳದಲ್ಲಿ, ಬಸ್ ನಿಲ್ದಾಣದ ಬಳಿ ಇರುವ ವಾಣಿಜ್ಯ ಮಳಿಗೆಯಲ್ಲಿ, ಜಡೆಕಲ್ಲು ಮಂಟಪ ದೇವಸ್ಥಾನದ ಪಕ್ಕದಲ್ಲಿ, ರಾಜಗೋಪುರ ಮುಂಭಾಗ, ಅಂತರಗಂಗೆ ಬಳಿ ಮಾಹಿತಿ ಕೇಂದ್ರ ತೆರೆಯಲಾಗಿದೆ.
ಮಾಹಿತಿ ಕೇಂದ್ರಗಳಲ್ಲಿ ಕ್ಷೇತ್ರದಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳು ಹಾಗೂ ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಮಾಹಿತಿ ಕೇಂದ್ರಗಳಲ್ಲಿ ತಪ್ಪಿಸಿಕೊಂಡವರ ಬಗ್ಗೆ, ವಸ್ತುಗಳನ್ನು ಕಳೆದುಕೊಂಡಿರುವ ಬಗ್ಗೆ ತಿಳಿಸಿದಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಲಾಗುವುದು. ಈ ಮಾಹಿತಿ ಕೇಂದ್ರಗಳಲ್ಲಿ ಭಕ್ತಾಧಿಗಳು ಕಾಣಿಕೆ ಹಾಗೂ ದವಸ ಧಾನ್ಯಗಳನ್ನು ಸ್ವಾಮಿಯವರಿಗೆ ಅರ್ಪಿಸಿ ಅಧಿಕೃತ ರಸೀತಿಗಳನ್ನು ಪಡೆಯಬಹುದಾಗಿದೆ.
ಲಗೇಜ್ ಕೌಂಟರ್ ವ್ಯವಸ್ಥೆ: ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರು ತಮ್ಮ ಸಾಮಗ್ರಿಗಳನ್ನು ಇಡಲು ಅಂತರಗಂಗೆಯ ದರ್ಶಿನಿ ಹತ್ತಿರ, ಜಡೆಕಲ್ಲು ದೇವಸ್ಥಾನದ ಹತ್ತಿರ ಹಾಗೂ ಬಸ್ ನಿಲ್ದಾಣಗಳ ಮಾಹಿತಿ ಕೇಂದ್ರದ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಸ್ವಾಮಿಯ ದರ್ಶನ ಸೌಲಭ್ಯಧರ್ಮದರ್ಶನ: ಭಕ್ತಾದಿಗಳಿಗೆ 3ನೇ ನಂಬರ್‌ಗೆಟ್ ಮುಖಾಂತರ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಜತೆ ಹೆಚ್ಚುವರಿ ಸರತಿ ಸಾಲು ವ್ಯವಸ್ಥೆ ಮಾಡಲಾಗಿದೆ. ನೇರದರ್ಶನ: ರಾಜಗೋಪುರದ ಮುಂಭಾಗದ ಗೇಟಿನ ಮೂಲಕ 500 ರೂ.ಗಳನ್ನು ನೀಡಿ ಪ್ರವೇಶ ಪಡೆಯಬಹುದು. 2 ಲಾಡು, 1 ತೆಂಗಿನ ಕಾಯಿ ಪ್ರಸಾದ ನೀಡಲಾಗುವುದು. ಆರೋಗ್ಯ ಕೇಂದ್ರ: ಹಾಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಜತೆಗೆ ಬಸ್ ನಿಲ್ದಾಣದ ಮಾಹಿತಿ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ವ್ಯವಸ್ಥೆ ಹಾಗೂ ತಾಳಬೆಟ್ಟದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ. ಲಾಡು, ಕಲ್ಲು ಸಕ್ಕರೆ, ತೀರ್ಥ ಪ್ರಸಾದ ಮಾರಾಟ ವ್ಯವಸ್ಥೆ 4 ಮಾರಾಟ ಕೌಂಟರ್‌ಗಳು ಬೆಳಗ್ಗೆ 5.30 ರಿಂದ ರಾತ್ರಿ 10.30ರವರೆಗೆ ಜಾತ್ರಾ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತವೆ. ರಾತ್ರಿ 10.30 ರಿಂದ ಬೆಳಗ್ಗೆ 5.30ರವರೆಗೆ 2 ಮಾರಾಟ ಕೌಂಟರ್‌ಗಳು ಕಾರ್ಯ ನಿರ್ವಹಿಸುತ್ತವೆ. ಸೇವಾ ಕೌಂಟರ್: ಬೆಳಗ್ಗೆ 2ರಿಂದ 4 ಗಂಟೆಯವರೆಗೆ, ಸಂಜೆ 4ರಿಂದ 7 ಗಂಟೆಯವರೆಗೆ, ರಾತ್ರಿ 8ರಿಂದ 11 ಗಂಟೆಯವರೆಗೆ ಲಭ್ಯವಿದೆ. ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ದೂರವಾಣಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಾಧಿಕಾರದ ಆಡಳಿತ ಕಚೇರಿ ದೂ.ಸಂ. 08226-272128, ಪೊಲೀಸ್ ಠಾಣೆ ದೂ.ಸಂ. 08225-272141, ಪ್ರಾಥಮಿಕ ಆರೋಗ್ಯ ಕೇಂದ್ರ ದೂ.ಸಂ. 08225-272155 ಸಂಪರ್ಕಿಸಿ ಮಾಹಿತಿ ಹಾಗೂ ಸೌಲಭ್ಯ ಪಡೆಯಬಹುದಾಗಿದೆ.