ಹೊನ್ನಾವರ: ಲಿಂಗನಮಕ್ಕಿ, ಮಹಾತ್ಮ ಗಾಂಧಿ ವಿದ್ಯುತ್ ಕೇಂದ್ರದಿಂದ ಹೊರ ಬಂದ ನೀರನ್ನು ಟೇಲರೀಸ್‌ನಲ್ಲಿ ಸಂಗ್ರಹಿಸಿ, ಪುನ: ವಿದ್ಯುತ್ ಉತ್ಪಾದಿಸುವ ಶರಾವತಿ ಯೋಜನೆಗೆ ಹೆಚ್ಚುವರಿಯಾಗಿ ಈ ನೀರನ್ನು ಮೇಲೆತ್ತಿ ಭೂಗರ್ಭ ಕೊಳವೆ ಮುಖಾಂತರ ತಲಕಳಲೆ ಅಣೆಕಟ್ಟೆಗೆ ಸಾಗಿಸಿ, ಆ ನೀರಿನಿಂದ ಪುನಃ ಇನ್ನೊಂದು ವಿದ್ಯುತ್ ಕೇಂದ್ರ ಸ್ಥಾಪಿಸಿ, ವಿದ್ಯುತ್ ಮತ್ತು ಜಲಪಾತದ ವೈಭವ ನಿರಂತರಗೊಳಿಸುವ ಮಹಾನ್ ಯೋಜನೆಯೊಂದು ಸಿದ್ಧವಾಗುತ್ತಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಎಂದು ಕರೆಯಲ್ಪಡುವ ಈ ಯೋಜನೆ ಜಾರಿಗೆ ಬಂದರೆ 2,000 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿ ರಾಜ್ಯದ ವಿದ್ಯುತ್ ಬರ ನೀಗಲಿದೆ. ಜೊತೆಯಲ್ಲಿ ಜೋಗ ಜಲಪಾತದಿಂದ ಹಗಲು 8 ತಾಸು ಸಾವಿರ ಕ್ಯುಸೆಕ್ ನೀರು ಬಿಟ್ಟು ಜಲಪಾತದ ಆಕರ್ಷಣೆ ನಿರಂತರಗೊಳಿಸುವ ಯೋಜನೆಯೊಂದು ಸಿದ್ಧವಾಗಿದೆ. ಸರ್ವೇ ಮುಗಿದು ಭೂಸಮೀಕ್ಷೆ ಆರಂಭವಾಗಲಿದೆ.
5017.44 ಕೋಟಿ ರೂ.ವೆಚ್ಚದ ಈ ಯೋಜನೆಯನ್ನು 5 ವರ್ಷ 6 ತಿಂಗಳಲ್ಲಿ ಮುಗಿಸಬಹುದಾಗಿದೆ. ಹೊಸ ಅಣೆಕಟ್ಟುಗಳನ್ನು ರಚಿಸದೆ ಎತ್ತರದಲ್ಲಿರುವ ತಲಕಳಲೆ ಅಣೆಕಟ್ಟಿಗೆ ತಗ್ಗು ಪ್ರದೇಶದಲ್ಲಿರುವ ಟೇಲರೀಸ್ ನೀರನ್ನು ವಿದ್ಯುತ್ ಬಳಸಿ ಏರಿಸಿ, ಇನ್ನೊಂದು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವುದು ಈ ಯೋಜನೆಯ ಗುರಿ.
ಶರಾವತಿ ಯೋಜನೆಗಳಲ್ಲಿ ಕೇವಲ 30-50 ಪೈಸೆಗೆ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಬೇಡಿಕೆ ಕಡಿಮೆ ಇರುವ ಅವ ಧಿಯಲ್ಲಿ ಈ ವಿದ್ಯುತ್ ಬಳಸಿಕೊಂಡು ಟೇಲರೀಸ್ ಅಣೆಕಟ್ಟಿನಿಂದ ನೀರನ್ನು ಬೃಹತ್ ಪಂಪ್‌ಗ್ಳ ಮೂಲಕ ತಲಕಳಲೆ ಅಣೆಕಟ್ಟಿಗೆ ಸಾಗಿಸಿ ವಿದ್ಯುತ್ ಬೇಡಿಕೆ ಇರುವ ಅವಧಿಯಲ್ಲಿ ಹೆಚ್ಚು ಉತ್ಪಾದಿಸಿ 7-8 ರೂ.ದರದಲ್ಲಿ ಮಾರಿಕೊಳ್ಳಬಹುದು ಎಂಬುದು ಕೆಪಿಸಿಯ ಆಲೋಚನೆ.
ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿಯವರು ಜೋಗ ಅಭಿವೃದ್ಧಿಯ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಪರಿಸರ ಹಾಳಾಗದಂತೆ ಭೂಗರ್ಭ ಕೊಳವೆಯ ಮುಖಾಂತರ ನೀರನ್ನು ಸಾಗಿಸುವ ಯೋಜನೆ ಇದು. ಇದರಿಂದಾಗಿ ಲಿಂಗನಮಕ್ಕಿಯಲ್ಲಿ ಹೆಚ್ಚುವರಿ ನೀರು ಉಳಿದುಕೊಳ್ಳುತ್ತದೆ. ಇದರಿಂದ ಕೇವಲ 30 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಮಹಾತ್ಮಗಾಂಧಿ ಕೇಂದ್ರದಿಂದ ಅದರ ಗರಿಷ್ಠ ಸಾಮರ್ಥ್ಯ 139 ಮೆ.ವ್ಯಾ.ನಷ್ಟು ಉತ್ಪಾದಿಸಬಹುದು.
ಲಿಂಗನಮಕ್ಕಿಯಲ್ಲಿ ಹೆಚ್ಚು ಉಳಿಯುವ ನೀರನ್ನು ಹೊರ ಬಿಟ್ಟು ಜೋಗ ಜಲಪಾತದ ವೈಭವ ಹೆಚ್ಚಿಸಲು ಬಳಸಿಕೊಳ್ಳಬಹುದು. ಜಲಪಾತದಿಂದ ಬಂದ ನೀರು ಟೇಲರೀಸ್ ತಲುಪಿದಾಗ ಅದನ್ನು ಮರಳಿ ಪಂಪ್ ಮಾಡಿದರೆ ತಲಕಳಲೆ ಸೇರಿಕೊಳ್ಳುತ್ತದೆ. ಮಳೆಗಾಲದಲ್ಲಿ 4 ಗೇಟ್ ಎರಡಡಿ ಎತ್ತಿದರೆ, ಬೇಸಿಗೆಯಲ್ಲಿ ನಿತ್ಯ ಸಾವಿರ ಕ್ಯುಸೆಕ್ ನೀರು ಬಿಟ್ಟರೆ ಜೋಗ ಝಗಮಗಿಸುತ್ತದೆ. ವಿದ್ಯುತ್ ಕೊರತೆಯೂ ನೀಗುತ್ತದೆ. ಪ್ರವಾಸೋದ್ಯಮ ಬಲಗೊಳ್ಳುತ್ತದೆ.
ಪುಟ್ಟ ನಾರ್ವೆ ದೇಶ ನೀರಿನ ಪುನರ್ ಬಳಕೆಯ ಇಂತಹ ಯೋಜನೆಯಿಂದ ವಿದ್ಯುತ್ ಉತ್ಪಾದಿಸಿ, ವಿದೇಶಕ್ಕೆ ಮಾರುತ್ತದೆ. ಹಲವು ದೇಶಗಳಲ್ಲಿ ಇಂತಹ ಯೋಜನೆ ಜಾರಿಗೆ ಬಂದಿದೆ. ಹೆಚ್ಚುವರಿ ಅಣೆಕಟ್ಟಿಲ್ಲದೆ ನೀರನ್ನು ಪುನ: ಬಳಸಿ ನಿರಂತರ ವಿದ್ಯುತ್ ಉತ್ಪಾದಿಸುವ, ಪರಿಸರಕ್ಕೆ ಅತಿ ಕಡಿಮೆ ಹಾನಿ ಮಾಡುವ ಈ ಜಲವಿದ್ಯುತ್ ಯೋಜನೆ ಉತ್ತಮವಾದದ್ದು. ಉಷ್ಣ, ಅಣು ವಿದ್ಯುತ್‌ಗಳಿಂದ ಹಲವು ಹಾನಿ, ದುಬಾರಿ ಖರ್ಚು ಇರುವಾಗ ಇಂತಹ ಯೋಜನೆ ಅಪೂರ್ವವಾದದ್ದು, ಅಗತ್ಯವಾದದ್ದು ಎನ್ನುವ ಅಭಿಪ್ರಾಯ ಮೂಡುತ್ತಿದೆ.
– ಜೀಯು, ಹೊನ್ನಾವರ