Advertisement

ಮತದಾರರ ಕರಡು ಪಟ್ಟಿ ಬಿಡುಗಡೆಗೆ ಸಿದ್ಧತೆ

04:06 PM Jun 25, 2021 | Team Udayavani |

ಹುಬ್ಬಳ್ಳಿ: ರಾಜ್ಯ ಚುನಾವಣೆ ಆಯೋಗದ ಸೂಚನೆ ಮೇರೆಗೆ ಮಹಾನಗರ ಪಾಲಿಕೆ ಚುನಾವಣೆಗೆ ಮತದಾರ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ಪಾಲಿಕೆಯ ಸುಮಾರು 950ಕ್ಕೂ ಹೆಚ್ಚು ಸಿಬ್ಬಂದಿ ತೊಡಗಿದ್ದು, ಆಯೋಗದ ಸೂಚನೆಯಂತೆ ಜೂ.28ರಂದು ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಿದ್ದು, ಜುಲೈ 9ರಂದು ಅಂತಿಮ ಪಟ್ಟಿ ಘೋಷಣೆಗೆ ಪಾಲಿಕೆ ಸಜ್ಜಾಗುತ್ತಿದೆ.

Advertisement

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕಳೆದ ಎರಡೂವರೆ ವರ್ಷಗಳಿಂದ ಚುನಾವಣೆ ಇಲ್ಲವಾಗಿದ್ದು, ವಾರ್ಡ್‌ಗಳ ಪುನರ್‌ ವಿಂಗಡಣೆ, ಮೀಸಲಾತಿ ವಿಚಾರದಲ್ಲಿ ಚುನಾವಣೆ ಮುಂದೂಡಿಕೆ ಸುಳಿಗೆ ಸಿಲುಕುವಂತಾಗಿತ್ತು. ಕೊನೆಗೂ ಕೋರ್ಟ್‌ ಸೂಚನೆಯಂತೆ, ವಾರ್ಡ್‌ಗಳ ಪುನರ್‌ ವಿಂಗಡಣೆ ಅಂತಿಮಗೊಂಡು ಅಧಿಸೂಚನೆಯೂ ಹೊರ ಬಿದ್ದಾಗಿದೆ. ಇದೀಗ ರಾಜ್ಯ ಚುನಾವಣೆ ಆಯೋಗದ ಸೂಚನೆಯಂತೆ ಮತದಾರ ಪಟ್ಟಿ ಸಿದ್ಧತೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆರು ತಿಂಗಳು ಮುಂದೂಡಿರುವ ರಾಜ್ಯ ಸರಕಾರ, ಪಾಲಿಕೆ ಚುನಾವಣೆ ಕುರಿತಾಗಿ ಹೈಕೋರ್ಟ್‌ಗೆ ಮನವಿ ಮಾಡಬೇಕು, ಇಲ್ಲವೆ ಕೋರ್ಟ್‌ ಇಂತಿಷ್ಟೇ ದಿನಗಳಲ್ಲಿ ಚುನಾವಣೆ ಎಂದು ಖಡಕ್‌ ಸೂಚನೆ ನೀಡಿದಲ್ಲಿ ಚುನಾವಣೆ ನಡೆಸಲು ಮುಂದಾಗಬೇಕಾಗುತ್ತದೆ.

ಗೊಂದಲ ಸರಿಪಡಿಸಬೇಕಿದೆ: ಮಹಾನಗರ ಪಾಲಿಕೆಯಲ್ಲಿ 67 ವಾರ್ಡ್‌ಗಳನ್ನು ಹಲವು ವರ್ಷಗಳ ನಂತರದಲ್ಲಿ ಪುನರ್‌ ವಿಂಗಡಣೆಯೊಂದಿಗೆ 82 ವಾರ್ಡ್‌ಗಳನ್ನಾಗಿ ಮಾಡಲಾಗಿದ್ದು, ವಾರ್ಡ್‌ ಮೀಸಲಾತಿಯೂ ಹೊರ ಬಿದ್ದಿದೆ. ಆದರೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗೆ ಇರುವ ಸವಾಲು ಎಂದರೆ ವಾರ್ಡ್‌ಗಳ ಪುನರ್‌ ವಿಂಗಡಣೆಯಿಂದ ಮತದಾರರ ಹೆಸರುಗಳು ಅವರದ್ದೇ ವಾರ್ಡ್‌ಗಳಲ್ಲಿ ಇವೆಯೋ? ಇಲ್ಲವೆ ಬೇರೆ ವಾರ್ಡ್‌ಗಳಿಗೆ ಹಂಚಿಕೆಯಾಗಿವೆಯೋ? ಎಂಬುದರ ಮನವರಿಕೆ, ಆಕ್ಷೇಪಗಳ ಆಧಾರದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕಿದೆ ಅದು ಯುದ್ಧೋಪಾದಿಯಲ್ಲಿ. ಕಳೆದ ವಿಧಾನಸಭೆ ಚುನಾವಣೆಯ ಮತದಾರರ ಯಾದಿಯ ಅಡಿಯಲ್ಲಿಯೇ ಪಾಲಿಕೆ ಚುನಾವಣೆಗೆ ಮತದಾರ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ಪಾಲಿಕೆ ಸಿಬ್ಬಂದಿ ತೊಡಗಿದ್ದಾರೆ.

ಹಳೆಯ 67 ವಾರ್ಡ್‌ಗಳೇ ಮುಂದುವರಿದಿದ್ದರೆ ಪಾಲಿಕೆ ಚುನಾವಣೆಗೆ ಮತದಾರ ಯಾದಿ ತಯಾರು ಕಷ್ಟದ ಕೆಲಸವೇನು ಆಗುತ್ತಿರಲಿಲ್ಲ. ಅಲ್ಪಸ್ವಲ್ಪ ಆಕ್ಷೇಪಣೆಗಳು ಎದುರಾಗುತ್ತಿದ್ದವು. ಆದರೆ, ಇದೀಗ ವಾರ್ಡ್‌ ವಿಂಗಡಣೆಯಾಗಿ 82 ವಾರ್ಡ್‌ಗಳಾಗಿದ್ದು, ಸುಮಾರು 15 ಹೊಸ ವಾರ್ಡ್‌ಗಳು ಅಸ್ತಿತ್ವಕ್ಕೆ ಬಂದಿವೆ. ದೊಡ್ಡ ವಾರ್ಡ್‌ ಒಡೆಯಲಾಗಿದೆ. ಒಂದು ಎರಡು ವಾರ್ಡ್‌ಗಳ ಭಾಗ ತೆಗೆದುಕೊಂಡು ಹೊಸ ವಾರ್ಡ್‌ ರಚಿಸಲಾಗಿದೆ. ಇರುವ ಸವಾಲು, ಮತದಾರರು ಇದ್ದ ವಾರ್ಡ್‌ನಲ್ಲೇ ಇದ್ದಾರೋ, ಹೊಸ ವಾರ್ಡ್‌ಗೆ ಸೇರ³ಡೆಗೊಂಡಿದ್ದಾರೋ ಎಂಬುದಾಗಿದೆ. ಸಾಮಾನ್ಯವಾಗಿ ಮತದಾರರ ಪಟ್ಟಿ ತಯಾರಿಸಿದರೂ ಬೇರೆ ವಾರ್ಡ್‌ಗಳಿಗೆ ಹೆಸರು ಹೋಗುವುದು, ಇಲ್ಲವೆ ಹೆಸರೇ ಮಾಯವಾಗುವುದು ಕಂಡು ಬರುತ್ತದೆ. ಇದೀಗ ಹೊಡ ವಾರ್ಡ್‌ ಆಗಿರುವುದರಿಂದ ಆ ವಾಡ್‌ನ‌ಲ್ಲಿ ಬರುವ ಮತದಾರರು ಅದೇ ವಾರ್ಡ್‌ನ ಮತದಾರ ಯಾದಿಯಲ್ಲಿ ಇದ್ದಾರೋ ಇಲ್ಲವೋ ಎಂಬುದನ್ನು ನೋಡಬೇಕಿದೆ. ಒಂದೇ ಮನೆಯಲ್ಲಿ ಕೆಲವರ ಹೆಸರು ಒಂದು ವಾರ್ಡ್‌ನಲ್ಲಿ, ಇನ್ನು ಕೆಲವರ ಹೆಸರು ಮತ್ತೂಂದು ವಾರ್ಡ್‌ನಲ್ಲಿ ಸೇರ್ಪಡೆಗೊಂಡಿರುತ್ತದೆ. ಅದೆಲ್ಲವನ್ನು ಸರಿಸಬೇಕಿದೆ.

ಕೋವಿಡ್‌ ಸಂಕಷ್ಟದ ನಡುವೆ ಮತದಾರ ಯಾದಿ: ಕೋವಿಡ್‌ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಅದರ ನಡುವೆಯೇ ಇದೀಗ ಮತದಾರರ ಯಾದಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪಾಲಿಕೆ ವಲಯಗಳ ಸಹಾಯಕ ಆಯುಕ್ತರು, ಇಂಜನಿಯರ್‌ಗಳು, ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು, ವಾಡ್‌ ìವಾರು ಮನೆ, ಮನೆಯ ಮಾಹಿತಿ ನೀಡುವ ಬಿಲ್‌ ಕಲೆಕ್ಟರ್‌ಗಳು ಸೇರಿದಂತೆ ಒಟ್ಟು 950ಕ್ಕೂ ಜನರು ಮತದಾರರ ಪಟ್ಟಿ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಕಳೆದೆರಡು ದಿನಗಳಿಂದ ಕೋವಿಡ್‌ನಿರ್ವಹಣೆ ಕಾರ್ಯಗಳಿಗೆ ಕೊಂಚ ವ್ಯತ್ಯಯ ಉಂಟಾಗತೊಡಗಿದೆ. ಎಲ್ಲ ವಾರ್ಡ್‌ಗಳ ಮತದಾರರ ಯಾದಿ ತಯಾರಿಸಿ, ಕರಡು ಪ್ರತಿಯನ್ನು ಜೂ.28ರಂದು ಪ್ರಕಟಿಸಲಾಗುತ್ತದೆ. ಅದಕ್ಕೆ ಆಕ್ಷೇಪಣೆಗಳು ಬಂದರೆ ಅವುಗಳ ಬಗ್ಗೆ ವಿಚಾರಣೆ ನಡೆಸಿ, ಲೋಪವಿದ್ದರೆ ಸರಿಪಡಿಸುವ ಮೂಲಕ ಅಂತಿಮವಾಗಿ ಜುಲೈ 9ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಆ ನಂತರದಲ್ಲಿ ಆಕ್ಷೇಪಣೆಗೆ ಅವಕಾಶ ಇರಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next