Advertisement
ಹಳ್ಳಿಗಳಿಗೆ ಅಡುಗೆ ಅನಿಲ ಕಾಲಿಟ್ಟು ವರ್ಷಗಳೇ ಕಳೆದರೂ ಹಳ್ಳಿ ಮಂದಿ ಇಂದಿಗೂ ಸಾಂಪ್ರದಾಯಿಕ ಕಟ್ಟಿಗೆ ಒಲೆಗಳನ್ನು ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಹಳ್ಳಿ ಮನೆಗಳಲ್ಲಿ ಕನಿಷ್ಠ 8ರಿಂದ 15ರ ಜನ ವಾಸವಾಗಿರುತ್ತಾರೆ. ಅಂತಹ ಕಡೆ ಅಡುಗೆ ಅನಿಲಕ್ಕಿಂತ ಕಟ್ಟಿಗೆಯೇ ಸೂಕ್ತವಾಗಿರುವ ಕಾರಣ ಮಳೆಗಾಲದಲ್ಲಿ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಕಟ್ಟಿಗೆ ಸಂಗ್ರಹಿಸಿ ಇಡುತ್ತಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಳ್ಳಿಯ ಮನೆ ಮಂದಿ ಒಟ್ಟಿಗೆ ಸೇರಿದ್ದಾರೆ. ಖಾಸಗಿ ಕಂಪೆನಿಗಳು, ಸರಕಾರಿ ಉದ್ಯೋಗಿಗಳು, ಲಾರಿ ಚಾಲಕರು, ಹೊಟೇಲ್‌ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು, ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕ-ಯುವತಿಯರು ಈಗ ಮನೆಗಳಲ್ಲೇ ಇದ್ದಾರೆ. ಈ ನಿಯಮ ಆರ್ಥಿಕತೆಗೆ ಪೆಟ್ಟು ನೀಡಿದ್ದರೂ ಹಳ್ಳಿಯ ಕಾಯಕಗಳಿಗೆ ಪೂರಕವಾಗಿ ಪರಿಣಮಿಸಿದೆ. ಮನೆ ಮಂದಿಯೇ ಸೇರಿ ಕಟ್ಟಿಗೆ, ತರೆಗೆಲೆ ಮತ್ತಿತರ ಸಾಮಗ್ರಿಗಳನ್ನು ಕೂಡಿಡುತ್ತಿದ್ದಾರೆ. ಇದಕ್ಕಾಗಿ ಕೂಲಿ ಕಾರ್ಮಿಕರ ಮೊರೆಹೊಗುವುದು ಈ ಬಾರಿ ತಪ್ಪಿದೆ. ಕಟ್ಟಿಗೆ ಒಡೆಯಲು ಮಾತ್ರ ಕೆಲವು ಕಡೆಗಳಲ್ಲಿ ಕೂಲಿ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಹಳ್ಳಿ ಮಹತ್ವ ಅರಿವಾಗುತ್ತಿದೆ
ಮನೆಯಿಂದ ದೂರ ಇರುತ್ತಿದ್ದ ಎಲ್ಲ ಮಂದಿಯನ್ನು ಒಟ್ಟಿಗೆ ಸೇರಿಸುವಲ್ಲಿ ಕಾರಣ ವಾದ ಕೋವಿಡ್-19 ದಿಂದ ಹಳ್ಳಿ ಬದುಕಿನ ಮಹತ್ವವೂ ಜನತೆಗೆ ಅರಿ ವಾಗಿದೆ. ಕೋವಿಡ್-19 ಭಯವಿದ್ದರೂ ಹಳ್ಳಿ ಮನೆಗಳಲ್ಲಿನ ಖುಷಿಯನ್ನು ಅನುಭವಿಸುವ ಸಂದರ್ಭ ಬಹಳ ವರ್ಷಗಳ ಅನಂತರ ಸಿಕ್ಕಿದೆ ಎನ್ನುವುದು ಬಹಳ ವರ್ಷಗಳಿಂದ ಲಾರಿ ಕಂಪೆನಿ ಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡು ತ್ತಿರುವ ಆನಂದ ಗೌಡ ಅವರ ಮಾತು.