ಕೆ.ಆರ್.ಪೇಟೆ: ತಾಲೂಕಿನಲ್ಲಿ 9 ದೇವಾಲಯಗಳ ತೆರವುಗೊಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿದ್ದರೂ ಜನರ ವಿರೋಧದ ನಡುವೆ ದೇವಾಲಯಗಳನ್ನು ತೆರವುಗೊಳಿಸುವುದು ಅಧಿಕಾರಿಗಳಿಗೆ ದೊಡ್ಡ ಸಲಾವಾಗಿ ಪರಿಣಮಿಸಿದೆ. ಕೆಲವು ವರ್ಷಗಳ ಹಿಂದೆಯೇ ಇದೇ ದೇಗುಲಗಳ ತೆರವಿಗೆ ತಾಲೂಕು ಆಡಳಿತ ಮುಂದಾಗಿತ್ತು. ಆದರೆ, ಭಕ್ತರ ವಿರೋಧ ಹಾಗೂ ದೇಗುಲಗಳ ಇತಿಹಾಸ ತಿಳಿದುಕೊಂಡು ತೆರವು ಕಾರ್ಯ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ದೇಗುಲಗಳ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.
ತೆರವು ಮಾಡುವ ದೇಗುಲ: ಮುಖ್ಯವಾಗಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿದ್ದ ಪಟ್ಟಣದ ದೇವಿರಮ್ಮಣ್ಣಿಕೆರೆ ಏರಿ ಮೇಲಿರುವ ಬಸನವಕಟ್ಟೆ, ಹೊಸಹೊಳಲು ಚಿಕ್ಕಕೆರೆ ಏರಿ ಮೇಲಿರುವ ಶ್ರೀ ಬಸವೇಶ್ವರ ದೇವಸ್ಥಾನ, ಮುಜುರಾಯಿ ಇಲಾಖೆಗೆ ಸೇರಿರುವ ತೇರೆನಹಳ್ಳಿಶ್ರೀ ಆಂಜನೇಯಸ್ವಾಮಿ ದೇವಾಲಯ, ಬೊಮ್ಮೇನಹಳ್ಳಿ ಗ್ರಾಮದಲ್ಲಿರುವ ಶ್ರೀಶನೇಶ್ವರಸ್ವಾಮಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ, ರಂಗನಾಥಪುರ ಕ್ರಾಸ್‌ನ ಶ್ರೀ ಚಾಮುಂಡೇಶ್ವರಿದೇವಾಲಯ, ಶೀಳನೆರೆ ಬಸವೇಶ್ವರ ದೇವಾಲಯ, ನಾರ್ಗೋನಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯ, ಹರಳಹಳ್ಳಿ ಶ್ರೀ ಬಸವೇಶ್ವರ ದೇವಾಲಯಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಪಟ್ಟಿ ಮಾಡಿಕೊಂಡಿದೆ.
ಶೀಳನೆರೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ತಾಲೂಕು ಆಡಳಿತ ಈ ಹಿಂದೆಯೇ ತೆರವುಗೊಳಿಸಿತ್ತು. ಆದರೆ, ಗ್ರಾಮಸ್ಥರು ಮತ್ತೆ ಅದೇ ಸ್ಥಳದಲ್ಲಿ ನಿರ್ಮಿಸಿಕೊಂಡಿದ್ದರು. ಜೊತೆಗೆ ಬೊಮ್ಮೇನಹಳ್ಳಿ ಶ್ರೀ ಶನಿದೇವರ ದೇಗುಲವನ್ನು ಅಲ್ಲಿನ ಭಕ್ತಾದಿಗಳೇ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿ ರಸ್ತೆ ಹೊರಭಾಗದಲ್ಲಿ ಮತ್ತೆ ನಿರ್ಮಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮುಜುರಾಯಿ ಇಲಾಖೆಗೆ ಸೇರಿಸುವ ತೇರೆನಹಳ್ಳಿ ಶಿಥಿಲಾವಸ್ಥೆಯಿಂದ ಕುಸಿದು ಬಿದ್ದಿದ್ದ ಶ್ರೀ ಆಂಜನೇಯಸ್ವಾಮಿ ದೇವಾಲಯವನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರಾಮಸ್ಥರೆ ಇತ್ತೀಚೆಗಷ್ಟೆ ನಿರ್ಮಿಸಿದ್ದರು. ಈಗ ಜಿಲ್ಲಾಡಳಿತ ಮತ್ತೆ ಅವುಗಳನ್ನು ಕೆಡವಲಿದ್ದು, ಭಕ್ತ ಆತಂಕ ಉಂಟು ಮಾಡಿದೆ. ಹಿಂದೂ ದೇಗುಲಗಳ ತೆರವಿಗೆ ಮಾತ್ರ ಆದೇಶ ಕೊಟ್ಟಿದ್ದಾರಾ? ಸಮಾಜ ಸೇವಕ ಪ್ರದೀಪ್ ಎಂಬುವವರ ಉದಯವಾಣಿಯೊಂದಿಗೆ ಮಾತನಾಡಿ ಸುಪ್ರೀಂ ಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಸರ್ವ ಧರ್ಮಗಳ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಲು ಆದೇಶ ನೀಡದೆ.
ಆದರೆ ತಾಲೂಕಿನಲ್ಲಿ ಮಾತ್ರ ಕೇವಲ ಹಿಂದೂ ಧರ್ಮದ ದೇವಾಲಯಗಳನ್ನು ಮಾತ್ರ ಅಕ್ರಮವಾಗಿ ನಿರ್ಮಾಣವಾಗಿವೆ ಎಂದು ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಆದರೆ, ಇತರೆ ಧರ್ಮದವರ ಪ್ರಾರ್ಥನಾ ಮಂದಿರಗಳಿಂದಲೂ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ಅರಣ್ಯ ಒತ್ತುವರಿ ಮಾಡಿಕೊಂಡು ಪ್ರಾರ್ಥನಾ ಮಂದಿರಗಳನ್ನು ಯಾವುದೇ ಅನುಮತಿ ಪಡೆಯದೆ ನಿರ್ಮಾಣ ಮಾಡಿಕೊಂಡಿದ್ದರೂ ಈ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿಲ್ಲ. ಶೀಳನೆರೆ ಹೋಬಳಿ ಒಂದರಲ್ಲಿಯೇ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದೆ ಇರುವ ಎರಡು ಹಿಂದೂ ದೇವಾಲಯಗಳನ್ನು ತೆರವುಗೊಳಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ಅದೇ ಹೋಬಳಿ ಮುರುಕನಹಳ್ಳಿ ಸಮೀಪ ಮುಖ್ಯರಸ್ತೆಯಲ್ಲಿರುವ ದರ್ಗಾದಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
ಸಿಂಧುಘಟ್ಟ ಗ್ರಾಮದಲ್ಲಿರುವ ಮಸೀದಿಯಿಂದ ಸಣ್ಣ= ವಾಹನಗಳು ಓಡಾಡುವುದಕ್ಕೆ ತೊಂದರೆ ಇದೆ. ಈ ಬಗ್ಗೆ ಏಕೆ ಕ್ರಮವಹಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಲಕ್ಷ್ಮೀಪುರ ಸಮೀಪ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಎರಡರಿಂದ ಮೂರು ಎಕರೆ ಭೂಮಿ ಒತ್ತುವರಿ ಮಾಡಿಕೊಂಡು ಪ್ರಾರ್ಥನಾ ಮಂದಿರ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಯಾಕೆ ಅಧಿಕಾರಿಗಳು ಗಮನಹರಿಸಿಲ್ಲ. ಅವರಿಗೆ ಕೇವಲ ಹಿಂದೂ ದೇವಾಲಯಗಳು ಮಾತ್ರ ಕಣ್ಣಿಗೆ ಕಾಣಿಸುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.