ರಾಮನಗರ: ಏಪ್ರಿಲ್ 29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಂಡಿರುವ ಬಗ್ಗೆ ಡೀಸಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಗರದ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಸಿಇಟಿ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಸಿಇಟಿ ಪರೀಕ್ಷೆ ನಡೆಸಲು 5 ಕೇಂದ್ರಗಳನ್ನು ಗುರುತಿಸಿರುವುದಾಗಿ, 1892 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅವ್ಯವಹಾರ ನಡೆಯದಂತೆ ನಿಗಾವಹಿಸಿ: ಪರೀಕ್ಷೆ ವೇಳೆ ಯಾವುದೇ ಅಕ್ರಮಗಳು, ಅವ್ಯವಹಾರಗಳಿಗೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ ಸುತ್ತಳತೆಯಲ್ಲಿ ಸಿಆರ್‌ಪಿಸಿ 144ನೇ ಕಲಂ ಜಾರಿಗೊಳಿಸಲು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎರಡೂ ತಾಲೂಕುಗಳ ತಹಶೀಲ್ದಾರರಿಗೆ ಆದೇಶ ನೀಡಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೂ ಇಬ್ಬರು ಆರಕ್ಷಕ ಸಿಬ್ಬಂದಿ ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಸಮೀಪದ ಪೋಲಿಸ್ ವೃತ್ತ ನಿರೀಕ್ಷಕರರ ಸಂಪರ್ಕದಲ್ಲಿದ್ದು, ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ನಿಗಾವಹಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ನೀರು, ಶೌಚಾಲಯ ಮುಂತಾದ ಅಗತ್ಯ ವ್ಯವಸ್ಥೆ ಹಾಗೂ ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಹಾಗೂ ಆರೋಗ್ಯ ಸೇವೆಗಳು ವಿದ್ಯಾರ್ಥಿಗಳಿಗೆ ಅಗತ್ಯವಾಗಿ ದೊರೆಯಲು ಆರೋಗ್ಯ ಸಹಾಯಕಿಯರನ್ನು ನಿಯೋಜಿಸುವಂತೆ ಸೂಚನೆ ನೀಡಿದರು.
ವೀಕ್ಷಕರ ನೇಮಕ: ಪ್ರತಿ ಪರೀಕ್ಷಾ ಕೇಂದ್ರಕ್ಕೂ ಸಹಾಯಕ ಆಯುಕ್ತರ ಗ್ರೇಡ್ ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಿಸಿ ಮತ್ತು ಪ್ರತಿ ತಾಲೂಕಿಗೂ ಮೂರು ಬಿ-ಗ್ರೇಡ್ ಅಧಿಕಾರಿಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವಂತೆ ಹಾಗೂ ಪ್ರಶ್ನೆಪತ್ರಿಕೆಗಳನ್ನು ಮಾರ್ಗಧಿಕಾರಿಗಳಿಂದ ಪಡೆದು ಖಜಾನೆಯಲ್ಲಿ ಠೇವಣಿ ಇರಿಸುವುದು. ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಜವಾಬ್ದಾರಿಯನ್ನು ನಿಭಾಯಿಸುಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಒಎಂಆರ್ ಶೀಟ್‌ಗಳನ್ನು ಮಾರ್ಗಾಧಿಕಾರಿಗಳಿಗೆ ನೀಡುವ ಹೊಣೆ ಡೀಸಿ ಕಚೇರಿಗೆ ಸೇರಿದ್ದಾಗಿದ್ದು, ಅದಕ್ಕೆ ಕ್ರಮ ಕೈಗೊಳ್ಳಬೇಕು. ಪ್ರಶ್ನೆ ಪತ್ರಿಕೆಗಳನ್ನು ಮತ್ತು ಉತ್ತರ ಪತ್ರಿಕೆಗಳನ್ನು ಖಜಾನೆಯಿಂದ ಪರೀಕ್ಷಾ ಕೇಂದ್ರಕ್ಕೆ, ಪರೀಕ್ಷಾ ಕೇಂದ್ರದಿಂದ ಖಜಾನೆಗೆ ಕೊಂಡೊಯ್ಯುವಾಗ ಪೋಲಿಸ್ ಬಂದೋಬಸ್ತ್ ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು. ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಕೈಪಿಡಿಯಂತೆ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಜರುಗಿಸಲು ಕ್ರಮವಹಿಸುವಂತೆ ಆದೇಶಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶರು, ಜಿಲ್ಲಾ ಖಜಾನಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರದ ಉಪಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕಾ ಪಾಲಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.