ಶಿರಹಟ್ಟಿ: ಪಟ್ಟಣದ ಆರಾಧ್ಯ ದೈವ, ಗ್ರಾಮ ದೇವತೆ ಆದಿಶಕ್ತಿ ದೇವಿ ಜಾತ್ರಾ ಮಹೋತ್ಸವ ಜ. 26, 27 ಮತ್ತು 28ರಂದು ಜರುಗಲಿದ್ದು, ಇಡೀ ಪಟ್ಟಣ ಸಕಲ ಸಿದ್ಧತೆಗೆ ಮುಂದಾಗಿದೆ. ಪಟ್ಟಣದಲ್ಲಿ ಈಗಾಗಲೇ ಸುಮಾರು ಐದು ವಾರಗಳನ್ನು ಮಾಡಿದ್ದು, ಜಾತ್ರಾ ಮಹೋತ್ಸವ ಅಂಗವಾಗಿ ದೇವಿ ಮೂರ್ತಿ ಪಟ್ಟಣದ ಪ್ರತಿ ಓಣಿಗೆ ಭೇಟಿ ನೀಡಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಅಲ್ಲದೇ ಭಕ್ತರು ದೇವಿಯನ್ನು ಮನೆಗೆ ಬರಮಾಡಿಕೊಂಡು ಉಡಿ ತುಂಬಲು ಉತ್ಸುಕರಾಗಿದ್ದಾರೆ.
ಈ ಹಿಂದೆ 18 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಐತಿಹಾಸಿಕ ಪರಂಪರೆಯುಳ್ಳ ಗ್ರಾಮ ದೇವತೆ ಜಾತ್ರೆಯನ್ನು ಈಗ ಮೂರು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. ಜಾತ್ರೆ ಪ್ರಯುಕ್ತ ನಗರದ ಪ್ರಮುಖ ಬೀದಿಗಳು ಸಿಂಗಾರಗೊಳ್ಳುತ್ತಿವೆ. ಜ. 25 ರಂದು ಬೆಳಗ್ಗೆ 6.45ಕ್ಕೆ ಬಡಿಗೇರ ಓಣಿಯಲ್ಲಿ ಶ್ರೀ ದೇವಿಗೆ ನೆದರು ಬರಿಯುವುದು, ನಂತರ ಪಂಚ ಮುತ್ತೆ„ದೆಯರಿಗೆ ಉಡಿ ತುಂಬುವುದು ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.
ಭಕ್ತರ ಮನೆಗೆ ದೇವಿ: ಸಂಪ್ರದಾಯದಂತೆ ಗ್ರಾಮದೇವತೆಯ ಜಾತ್ರಾ ಮಹೋತ್ಸವ ಅಂಗವಾಗಿ ಜ.26ರಂದು ಬೆಳಗ್ಗೆ 6.45ಕ್ಕೆ ಉಡಿ ತುಂಬುವ ಕಾರ್ಯ ಜರುಗಿದ ನಂತರ ಪಟ್ಟಣದ ಮೊದಲಿಗೆ ಶ್ರೀ ಜ.ಫಕ್ಕೀರೇಶ್ವರ ಮಠಕ್ಕೆ ಭೇಟಿ ನೀಡಿ, ಪಟ್ಟಣದ ಗೌಡರಾದ ಯಲ್ಲಪ್ಪಗೌಡ ಪಾಟೀಲ್ ಅವರ ಮನೆಗೆ ತೆರಳಿ ಉಡಿ ತುಂಬಿಸಿಕೊಂಡು, ನಂತರ ತನ್ನಿಷ್ಟದ ಭಕ್ತರ ಮನೆ ಮನೆ ದರ್ಶನ ಭಾಗ್ಯವನ್ನು ಕರುಣಿಸುತ್ತದೆ.
ಇದನ್ನೂ ಓದಿ:ಜಿಪಂ-ಗ್ರಾಪಂ ನಡುವೆ ಸಂಪರ್ಕ ಸೇತುವೆ ತಾಪಂ
ಅತ್ಯಂತ ವೈಭವದಿಂದ ಜರುಗುವ ಮೆರವಣಿಗೆಯುದ್ದಕ್ಕೂ ಉಧೋ ಉಧೋ ಎನ್ನುವ ಜೈಕಾರ ಹಾಕುತ್ತ ದೇವಿ ಸಾಗಿದತ್ತ ಭಕ್ತರ ಹಿಂಡು ಸಾಗುವುದು. ದೇವಿಯ ಸೇವೆಗೈದು ಪುನೀತ ಭಾವ ಮೆರೆಯುವರು. ಗ್ರಾಮ ದೇವತೆ ಜಾತ್ರಾ ಮಹೋತ್ಸವ ಅಧ್ಯಕ್ಷ ಯಲ್ಲಪ್ಪಗೌಡ್ರ ಎಸ್. ಪಾಟೀಲ್ ಪ್ರತಿಕ್ರಿಯಿಸಿ, ಜಿಲ್ಲಾ ಧಿಕಾರಿಗಳ ನಿರ್ದೇಶನದ ಮೇರೆಗೆ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು, ಕೋವಿಡ್ ದ ಭೀತಿಯ ಹಿನ್ನೆಲೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಈ ವರ್ಷ ಆಚರಿಸಲು ನಿರ್ಧರಿಸಲಾಗಿದೆ. ಅತ್ಯಂತ ಸರಳವಾಗಿ ದೇವಿ ಸಂಚಾರ ಮತ್ತು ಉಡಿ ತುಂಬುವ ಕಾರ್ಯಗಳನ್ನು ಹೊರತುಪಡಿಸಿದರೆ, ಯಾವುದೇ ವಿಶೇಷ ಕಾರ್ಯಕ್ರಮವನ್ನು ಈ ವರ್ಷ ಹಮ್ಮಿಕೊಂಡಿಲ್ಲ ಎಂದು ಹೇಳಿದರು.
ಪ್ರಕಾಶ ಶಿ.ಮೇಟಿ