Advertisement

ನೈಸರ್ಗಿಕ ಜೀವಸಂಕುಲ ಮರೆತು ಅಂಜನಾದ್ರಿಗಾಗಿ ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಸಿದ್ಧತೆ?

08:01 PM Apr 06, 2022 | Team Udayavani |

ಗಂಗಾವತಿ : ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಗೆ ಆಗಮಿಸುವ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಮತ್ತು ಕೇಂದ್ರ ಸರಕಾರ ಅಂಜನಾದ್ರಿ ಸುತ್ತಲಿನ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ರಸ್ತೆ, ವಸತಿಗೃಹ ಸ್ನಾನಘಟ್ಟ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲು ಭೂ ಸ್ವಾಧಿನಕ್ಕೆ ಮುಂದಾಗಿದ್ದು ಅಧಿಕಾರಿಗಳು ತಯಾರಿಸಿದ ಭೂ ಸ್ವಾಧೀನ ಯಾದಿಯಲ್ಲಿ ಹನುಮನಹಳ್ಳಿ, ಅಂಜಿನಳ್ಳಿ ಹಾಗೂ ಚಿಕ್ಕರಾಂಪೂರ ಗ್ರಾಮಗಳು ಸೇರಿ ಈ ಗ್ರಾಮಗಳ ರೈತರಿಗೆ ಸೇರಿದ ಸುಮಾರು ಸಾವಿರ ಎಕರೆ ಪ್ರದೇಶ ಭೂ ಸ್ವಾಧೀನವಾಗಲಿದೆ. ಈಗಾಗಲೇ ಅಧಿಕೃತವಾಗಿ ಅಂಜನಾದ್ರಿಯ ಸುತ್ತಲು 14 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದ್ದು ಪಂಪಾಸರೋವರಕ್ಕೆ ಸೇರಿದ 7 ಎಕರೆ ಭೂಮಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಅಗತ್ಯರುವಷ್ಟು ಭೂಮಿ ಸ್ವಾಧೀನ ಮಾಡಿಕೊಂಡು ಅಂಜನಾದ್ರಿ ಸುತ್ತಲಿರುವ ಏಳುಗುಡ್ಡ ಪ್ರದೇಶದ ಜೀವಿಸಂಕುಲ ಮತ್ತು ನೂರಾರು ವರ್ಷಗಳಿಂದ ತುಂಗಭದ್ರಾ ನದಿಯಿಂದ ನೈಸರ್ಗಿಕವಾಗಿ ಕೃಷಿ ಮಾಡುವ ಕೃಷಿಕರನ್ನು ಒಕ್ಕಲೆಬ್ಬಿಸುವ ಆತಂಕ ಉಂಟಾಗಿದೆ.

Advertisement

ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿ ಹೆಚ್ಚು ಗುಡ್ಡಗಾಡು ಇರುವುದರಿಂದ ಕೃಷಿ ಭೂಮಿ ಸುಮಾರು 5-6 ಸಾವಿರ ಎಕರೆ ಪ್ರದೇಶವಿದ್ದು ಇಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿರುವ ಅಪರೂಪದ ಕರಿ ಮತ್ತು ಕೆಂಪು ಕೋತಿ(ಮಂಗಗಳು), ಓತಿಕ್ಯಾತ, ನಕ್ಷತ್ರ ಆಮೆ, ಪುನಗು ಬೆಕ್ಕು, ಮೊಲ, ಕರಡಿ, ಚಿರತೆ, ಕಾಡು ಹಂದಿ, ನರಿ, ತೋಳ ಹಾಗೂ ರತ್ನಪಕ್ಷಿ, ಗೊರವಂಕ, ನವಿಲು, ಪಾರಿವಾಳ, ಹದ್ದು, ಗಿಡುಗ, ಕೌಜುಗ ಹೀಗೆ ಹತ್ತು ಹಲವು ಪ್ರಾಣಿಗಳು ಪಕ್ಷಿಗಳು ಇಲ್ಲಿ ಸಿಗುವ ಹಣ್ಣು ಹಂಪಲು ತುಂಗಭದ್ರಾ ನದಿ ಮತ್ತು ವಿಜಯನಗರ ಕಾಲುವೆ ನೀರನ್ನು ಅವಲಂಬಿಸಿವೆ. ಅಂಜನಾದ್ರಿಗಾಗಿ ಸಾವಿರ ಎಕರೆ ಫಲವತ್ತಾದ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳುವುದರಿಂದ ರೈತರನ್ನು ಮೂರು ಹಳ್ಳಿಗಳ ಜನರನ್ನು ಜತೆಗೆ ಏಳು ಗುಡ್ಡ ಪ್ರದೇಶದಲ್ಲಿರುವ ಜೀವಿ ಸಂಕುಲವು ನಾಶವಾಗುವ ಅಪಾಯವಿದೆ.

ಹಂಪಿಯನ್ನು ಯುನೆಸ್ಕೋ ಪಟ್ಟಿಯಲ್ಲಿ ಉಳಿಸುವ ಉದ್ದೇಶದಿಂದ ರಚನೆ ಮಾಡಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ನಿಯಮಗಳಿಂದ ಆನೆಗೊಂದಿ ಭಾಗದ 15 ಹಳ್ಳಿಗಳ ಅಭಿವೃದ್ಧಿ ಹಾಗೂ ಸ್ಥಳೀಯರು ವ್ಯಾಪಾರ ವಹಿವಾಟು ಮಾಡಲಾಗದಂತಹ ಸ್ಥಿತಿಯುಂಟಾಗಿದ್ದು ಹೊಸಪೇಟೆ ಹೊಟೇಲ್ ಮತ್ತು ರಾಜಕೀಯ ಲಾಭಿಯಿಂದ ಕಳೆದ 10 ವರ್ಷಗಳಿಂದ ಆನೆಗೊಂದಿ ಭಾಗ ಶೋಷಣೆಗೆ ಒಳಗಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಂಜನಾದ್ರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಇಲ್ಲಿಯ ರೈತರ ಭೂಮಿಗೆ ಒಳ್ಳೆಯ ಬೆಲೆ ಬಂದಿತ್ತು. ಸರಕಾರದ ನಿಯಮದಂತೆ ಗ್ರೀನ್ ಜೋನ್ ನಿಯಮಕ್ಕೊಳಪಟ್ಟು ಕೆಲ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಸಲು ಹವಾಮಾ ಎನ್‌ಓಸಿ ಕೊಡುವ ಸಂದರ್ಭದಲ್ಲಿಯೇ ಸಾವಿರ ಎಕರೆ ಭೂಮಿಯನ್ನು ಅಂಜನಾದ್ರಿಗೆ ಸ್ವಾಧೀನಪಡಿಸಿಕೊಳ್ಳುವ ಸುದ್ದಿ ಹರಡಿರುವುದು ಆತಂಕಕ್ಕೀಡು ಮಾಡಿದೆ.

ಭೂಸ್ವಾಧೀನದ ಪ್ರದೇಶದಲ್ಲಿರುವ ಜನವಸತಿ ಗ್ರಾಮಗಳಾದ ಹನುಮನಹಳ್ಳಿ, ಅಂಜಿನಳ್ಳಿ ಹಾಗೂ ಚಿಕ್ಕರಾಂಪೂರ ಗ್ರಾಮಗಳು ಸಹ ಸ್ಥಳಾಂತರವಾಗುವ ಆತಂಕ ಜನರಲ್ಲಿ ಕಾಡುತ್ತಿದ್ದು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕೂಡಲೇ ಜನರಿಗೆ ಸತ್ಯ ಸಂಗತಿಯನ್ನು ಬಹಿರಂಗಪಡಿಸಬೇಕಿದೆ.

ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿರುವ ಜನಜೀವನ ಹಾಗೂ ಜೀವಿ ಸಂಕುಲವನ್ನು ಸಂರಕ್ಷಣೆ ಮಾಡುವುದರ ಜತೆಗೆ ಅಂಜನಾದ್ರಿಯ ಅಭಿವೃದ್ಧಿಗಾಗಿ 50-100 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಬೇಕಿದ್ದು ಸಾವಿರಾರು ಎಕರೆ ಅನಗತ್ಯವಾಗಿ ಭೂಮಿ ವಶಕ್ಕೆ ಪಡೆಯುವುದು ಸರಿಯಲ್ಲ. ಸರಕಾರ ಮೊದಲಿಗೆ ಇಲ್ಲಿಯ ಗ್ರಾಮಗಳಿಗೆ ಹಲವು ದಶಕಗಳಿಂದ ನೆನಗುದಿಯಲ್ಲಿರುವ ಹಕ್ಕು ಪತ್ರ ಪಟ್ಟಾ ನೀಡಬೇಕು. ನೂರಾರು ವರ್ಷಗಳಿಂದ ಕೃಷಿ ಮಾಡುವ ರೈತರಿಗೂ ಸರಿಯಾದ ದಾಖಲಾತಿಗಳಿಲ್ಲ. ಅದನ್ನು ಸರಿಪಡಿಸಬೇಕು. ಅದನ್ನು ಬಿಟ್ಟು ಗ್ರಾಮಗಳನ್ನು ರೈತರನ್ನು ಮತ್ತು ಜೀವಿಸಂಕುಲಕ್ಕೆ ಸಂಚಕಾರವಾಗುವ ಭೂಸ್ವಾಧೀನ ಮಾಡಬಾರದು. ಅಂಜನಾದ್ರಿಗೆ ಅಗತ್ಯವಿರುವಷ್ಟು ಭೂಮಿಯನ್ನು ಮಾತ್ರ ಸ್ವಾಧೀನ ಮಾಡಿಕೊಂಡು ಸ್ಥಳೀಯವಾಗಿರುವ ಭೂಮಿ ದರದ ಮೂರು ಪಟ್ಟು ಪರಿಹಾರ ವಿತರಿಸಬೇಕು.
-ಕೆ.ಕೃಷ್ಣ ಅಂಜಿನಳ್ಳಿ ರೈತ.

Advertisement

ಅಂಜನಾದ್ರಿಗೆ ಈಗಾಗಲೇ ಪಂಪಾಸರೋವರ ವಿಜಯಲಕ್ಷ್ಮೀ ದೇಗುಲದ 7 ಎಕರೆ ಮತ್ತು ಇನ್ನೂ ಅಗತ್ಯವಿರುವ 14 ಎಕರೆ ಭೂಮಿಯನ್ನು ಸ್ವಾಧಿನ ಮಾಡಲಾಗಿದೆ. ಉಳಿದಂತೆ ಸರಕಾರ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಸ್ಥಳೀಯರು ಆತಂಕಗೊಳ್ಳಬಾರದು. ಕೆಲವರು ಹನುಮನಹಳ್ಳಿ, ಅಂಜಿನಳ್ಳಿ ಮತ್ತು ಚಕ್ಕರಾಂಪೂರ ಗ್ರಾಮಗಳ ರೈತರ ಸಾವಿರ ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳುವ ಯಾದಿ ಕುರಿತು ಆತಂಕಗೊಂಡಿದ್ದು ಭೂಸ್ವಾಧೀನದ ಕುರಿತು ಸರಕಾರ ಯಾವುದೇ ಸೂಚನೆ ನೀಡಿಲ್ಲ. ಈ ಕುರಿತು ಮೇಲಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇದೆ.
-ಯು.ನಾಗರಾಜ ತಹಸೀಲ್ದಾರರು.

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next