Advertisement

1ನೇ ತರಗತಿಯಿಂದಲೇ ಇಂಗ್ಲಿಷ್‌ ಶಿಕ್ಷಣ

09:44 PM May 06, 2019 | mahesh |

ಪುತ್ತೂರು: ರಾಜ್ಯ ಸರಕಾರವು ತನ್ನ ಬಜೆಟ್‌ನಲ್ಲಿ ತಿಳಿಸಿದಂತೆ 2019-20ನೇ ಶೈಕ್ಷಣಿಕ ವರ್ಷದಿಂದ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಪುತ್ತೂರು ತಾಲೂಕಿನ ಒಟ್ಟು 8 ಶಾಲೆಗಳಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಳ್ಳಲಿದೆ.

Advertisement

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಆರಂಭಿಸುವುದಕ್ಕೆ ವಿರೋಧಗಳಿದ್ದರೂ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಉತ್ತಮವಾಗಿದೆ ಎನ್ನುವ ಅಭಿಪ್ರಾಯವೂ ಇದೆ. ಪ್ರಸ್ತುತ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ದೊರಕಿದ್ದು, ಅರ್ಥಿಕವಾಗಿ ಹಿಂದುಳಿದ ಮಕ್ಕಳೂ ಖಾಸಗಿ ಶಾಲೆಗಳಿಗೆ ತೆರಳುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.

ಎಂಟು ಶಾಲೆಗಳಿಗೆ ಅವಕಾಶ
ಇಲಾಖೆ ಸುತ್ತೋಲೆಯಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಒಟ್ಟು 8 ಸರಕಾರಿ ಶಾಲೆಗಳಿಗೆ ಪ್ರಸ್ತುತ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಕ್ಕೆ ಅವಕಾಶ ನೀಡಲಾಗಿದೆ. ಸರಕಾರವು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಅನುಗುಣವಾಗಿ ವಿಭಾಗಿಸಿದ್ದು, ಪುತ್ತೂರು ಬಿಇಒ ಕಚೇರಿಗೆ ಸಂಬಂಧಿಸಿ ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ 6 ಹಾಗೂ ಸುಳ್ಯ ಕ್ಷೇತ್ರ ವ್ಯಾಪ್ತಿಯಲ್ಲಿ 2 ಶಾಲೆಗಳಿಗೆ ಅವಕಾಶ ನೀಡಲಾಗಿದೆ.

ಸುತ್ತೋಲೆಯಲ್ಲಿ ವಿವರಣೆ
ಯಾವೆಲ್ಲ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಬೇಕು ಎನ್ನುವ ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಸುತ್ತೋಲೆ ಬಂದಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಶಾಲೆಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಹೋಬಳಿಗೆ ಒಂದರಂತೆ ಶಾಲೆಗಳ ಮಾಹಿತಿ ಕೇಳಿತ್ತು. ಒಂದೇ ಆವರಣದಲ್ಲಿ 1ರಿಂದ 10ನೇ ತರಗತಿಗಳಿರುವ ಶಾಲೆಗಳಿಗೆ (ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಹೊರತುಪಡಿಸಿ) ಪ್ರಥಮ ಆದ್ಯತೆ ನೀಡಬೇಕು. ಮಕ್ಕಳ ದಾಖಲಾತಿ ಹೆಚ್ಚಿರುವ 1ರಿಂದ 8ನೇ ತರಗತಿಗಳಿರುವ ಶಾಲೆಗಳ 100 ಮೀ.ನಿಂದ 500 ಮೀ.ವರೆಗೆ ಪ್ರೌಢಶಾಲೆಗಳಿದ್ದಲ್ಲಿ ಅಂತಹ ಶಾಲೆಗಳನ್ನು ಆಯ್ಕೆ ಮಾಡುವುದು.

ಆಯ್ಕೆಯಾದ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ತರಗತಿ ನಿರ್ವಹಿಸಲು ಇಎಲ್‌ಇಪಿ/ಆರ್‌ಐಒರವರ 30 ದಿನಗಳ ತರಬೇತಿ/ಸಿಇಎಲ್‌ಟಿ/ಪಿಜಿಡಿಇಎಲ್‌ಟಿ ತರಬೇತಿಗೆ ಶಿಕ್ಷಕರ ಲಭ್ಯತೆಯನ್ನು ನಮೂದಿಸಿ ಕಳುಹಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

Advertisement

ಯಾವ್ಯಾವ ಶಾಲೆಗಳು?
ತಾಲೂಕಿನಲ್ಲಿ ಹಿರೇಬಂಡಾಡಿ ಸರಕಾರಿ ಹಿ.ಪ್ರಾ. ಶಾಲೆ, ಕೆಯ್ಯೂರು ಸರಕಾರಿ ಪ.ಪೂ. ಕಾಲೇಜು (ಕರ್ನಾಟಕ ಪಬ್ಲಿಕ್‌ ಸ್ಕೂಲ್‌), ಕುಂಬ್ರ ಪ್ರೌಢಶಾಲೆ (ಕರ್ನಾಟಕ ಪಬ್ಲಿಕ್‌ ಸ್ಕೂಲ್‌), ಕಾವು ಹಿ.ಪ್ರಾ.ಶಾಲೆ, ಉಪ್ಪಿನಂಗಡಿ ಹಿ.ಪ್ರಾ. ಶಾಲೆ, ಹಾರಾಡಿ ಹಿ.ಪ್ರಾ. ಶಾಲೆ, ನೆಲ್ಯಾಡಿ ಹಿ.ಪ್ರಾ. ಶಾಲೆ ಹಾಗೂ ಕಾಣಿಯೂರು ಹಿ.ಪ್ರಾ. ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಳ್ಳಲಿದೆ.

ಡಯೆಟ್‌ನಲ್ಲಿ ತರಬೇತಿ
ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಕ್ಕೆ ಆಯ್ಕೆಯಾದ ಶಾಲೆಗಳಿಂದ ತಲಾ ಓರ್ವ ಶಿಕ್ಷಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಅಂತಹ ಶಿಕ್ಷಕರಿಗೆ ಮಂಗಳೂರಿನ ಡಯೆಟ್‌ನಲ್ಲಿ ತರಬೇತಿಯಿತ್ತು, ಆಂಗ್ಲ ಮಾಧ್ಯಮ ಶಿಕ್ಷಣದಲ್ಲಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ಣ ಮಾಹಿತಿ ಇಲ್ಲ
ಶಿಕ್ಷಣ ಇಲಾಖೆಯ ನಿರ್ದೇಶನದಂತೆ ನಾವು ಕಳುಹಿಸಿದ ಎಲ್ಲ 8 ಶಾಲೆಗಳ ಪ್ರಸ್ತಾವನೆಗೂ ಅವಕಾಶ ನೀಡಿ, ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಕ್ಕೆ ಸುತ್ತೋಲೆ ಬಂದಿರುತ್ತದೆ. ಈ ಕುರಿತು ಮೇ 5ರಂದು ಮಂಗಳೂರು ಡಯೆಟ್‌ನಲ್ಲಿ ಸಭೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಉಳಿದಂತೆ ಆಂಗ್ಲ ಮಾಧ್ಯಮ ಆರಂಭದ ಕುರಿತು ಪೂರ್ಣ ಮಾಹಿತಿ ಇನ್ನಷ್ಟೇ ಬರಬೇಕಿದೆ.
– ಸುಂದರ ಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next