Advertisement

ಶಾಲಾ ಕಾಲೇಜು, ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ಗೆ ಸಕಲ ಸಿದ್ಧತೆ: ಡಿಸಿ

01:27 AM May 09, 2020 | Sriram |

ಉಡುಪಿ: ಉಡುಪಿ ಜಿಲ್ಲೆಗೆ ವಿದೇಶಗಳಿಂದ, ಹೊರರಾಜ್ಯದಿಂದ ಸುಮಾರು 20,000 ಜನರು ಬರಬಹುದೆಂದು ಅಂದಾಜಿಸಲಾಗಿದೆ. ಅವರನ್ನು ಕ್ವಾರಂಟೈನ್‌ನಲ್ಲಿರಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಆದಕ್ಕಾಗಿ ಜಿಲ್ಲೆಯ ಖಾಸಗಿ ಶಾಲೆ, ಕಾಲೇಜುಗಳ ಕಟ್ಟಡಗಳು ಮತ್ತು ಹಾಸ್ಟೆಲ್‌ಗ‌ಳನ್ನು ಜಿಲ್ಲಾಡಳಿತ ಕೋರಿದ ಕೂಡಲೇ ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ರಜತಾದ್ರಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲ ಸರಕಾರಿ, ಖಾಸಗಿ ಶಾಲಾ ಮುಖ್ಯೋಪಾಧ್ಯಾಯರ, ವಸತಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊರರಾಜ್ಯ: 6,000 ನೋಂದಣಿ
ಜಿಲ್ಲೆಗೆ ಹೊರರಾಜ್ಯದಿಂದ ಬರಲು ಪ್ರಥಮ ಹಂತದಲ್ಲಿ ಸುಮಾರು 6,000 ಮಂದಿ ನೋಂದಾಯಿಸಿಕೊಂಡಿದ್ದು, ರಾಜ್ಯ ಸರಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಮೊದಲಿಗೆ ಅವರನ್ನು ಜಿಲ್ಲೆಯ ಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿ, ಪೊಲೀಸ್‌ ಎಸ್ಕಾರ್ಟ್‌ನೊಂದಿಗೆ ಸಂಬಂಧಪಟ್ಟ ತಾಲೂಕಿನ ಕ್ವಾರಂಟೈನ್‌ ಕೇಂದ್ರಗಳಿಗೆ ಕಳುಹಿಸಲಾಗುವುದು. ಆರೋಗ್ಯ ಪರೀಕ್ಷೆಯಲ್ಲಿ ರೋಗ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಹೊಟೇಲ್‌ಗ‌ಳಲ್ಲಿ ಕ್ವಾರಂಟೈನ್‌ ಆಗಬಯಸುವವರು ಹೊಟೇಲ್‌ ವೆಚ್ಚವನ್ನು ತಾವೇ ಭರಿಸಬೇಕು. ಜಿಲ್ಲಾಡಳಿತ ವ್ಯವಸ್ಥೆ ಮಾಡುವ ಕೇಂದ್ರಗಳಲ್ಲಿ ಉತ್ತಮ ರೀತಿಯಲ್ಲಿ ಉಚಿತ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ವಿದೇಶದಿಂದ ಬರುವವರನ್ನು ಪ್ರತ್ಯೇಕವಾಗಿ ಸಿಂಗಲ್‌ ರೂಂಗಳಲ್ಲಿ ಕ್ವಾರಂಟೈನ್‌ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.

ಸಬೂಬಿಲ್ಲದೆ ಕಟ್ಟಡ ಹಸ್ತಾಂತರಿಸಿ
ವಿದೇಶ, ಹೊರರಾಜ್ಯದಿಂದ ಬರುವವರನ್ನು ಕ್ವಾರಂಟೈನ್‌ಗೊಳಿಸಲು ಜಿಲ್ಲೆಯ ಸರಕಾರಿ ಹಾಸ್ಟೆಲ್‌ಗ‌ಳು, ಖಾಸಗಿ ಹಾಸ್ಟೆಲ್‌ಗ‌ಳು, ಶಾಲಾ ಕಾಲೇಜುಗಳು, ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತ ಸೂಚಿಸಿದ ಕೂಡಲೇ ಸಂಬಂಧಪಟ್ಟ ಸಂಸ್ಥೆಗಳು ಯಾವುದೇ ಸಬೂಬುಗಳನ್ನು ನೀಡದೆ ಕೂಡಲೇ ತಮ್ಮ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಬಿಟ್ಟು ಕೊಡಬೇಕು. ಕಟ್ಟಡಕ್ಕೆ ಸಣ್ಣಪುಟ್ಟ ದುರಸ್ತಿಗಳಿದ್ದರೆ ತತ್‌ಕ್ಷಣ ಮಾಡಿಸಿ ಎಂದು ಹೇಳಿದರು.

ಸ್ಯಾನಿಟೈಸ್‌ ಮಾಡಿ ಕಟ್ಟಡ ಹಸ್ತಾಂತರ
ಕ್ವಾರಂಟೈನ್‌ಗಾಗಿ ಬಳಸಕೊಳ್ಳುವ ಸರಕಾರಿ ಹಾಸ್ಟೆಲ್‌ಗ‌ಳು, ಖಾಸಗಿ ಹಾಸ್ಟೆಲ್‌ಗ‌ಳು, ಶಾಲಾ ಕಾಲೇಜುಗಳನ್ನು ಕ್ವಾರಂಟೈನ್‌ ಮುಗಿದ ಕೂಡಲೇ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮರಳಿ ಬಿಟ್ಟು ಕೊಡಲಾಗುವುದು ಎಂದರು.

Advertisement

ಜಿಲ್ಲೆಯ ಜನರ ಆರೋಗ್ಯಕ್ಕೆ ಆದ್ಯತೆ
ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಲ್ಲಿದ್ದ ವಲಸೆ ಕಾರ್ಮಿಕರಿಗೆ ಅತ್ಯುತ್ತಮ ರೀತಿಯಲ್ಲಿ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಮತ್ತು ಲಾಕ್‌ ಡೌನ್‌ ನಿರ್ಬಂಧಗಳನ್ನು ಇಡೀ ರಾಜ್ಯದಲ್ಲೇ ಅತ್ಯಂತ ಶಿಸ್ತಿನಿಂದ ಅತ್ಯುತ್ತಮವಾಗಿ ಪಾಲಿಸಿದ ನಾಗರಿಕರು ಎಂಬ ಹೆಗ್ಗಳಿಕೆ ಜಿಲ್ಲೆಗೆ ಇದೆ. ಹೊರಗಿನಿಂದ ಬರುವ ವ್ಯಕ್ತಿಗಳಿಂದ ಜಿಲ್ಲೆಯ 13 ಲಕ್ಷ ಜನರನ್ನು ಕೋವಿಡ್‌ ಸೋಂಕು ಹರಡದ ಕುರಿತಂತೆ ಜಿಲ್ಲಾಡಳಿದ ಎಲ್ಲ ಅಧಿಕಾರಿಗಳು ಉತ್ತಮ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಗದೀಶ್‌ ತಿಳಿಸಿದರು.

ತಹಶೀಲ್ದಾರರಿಗೆ ಸೂಚನೆ
ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗ‌ಳ, ಹೊಟೇಲ್‌ಗ‌ಳ ವಿವರ ಸಂಗ್ರಹಿಸಿ ಅಗತ್ಯವಿರುವಡೆಯಲ್ಲಿ ಎಲ್ಲ ಮೂಲ ಅಗತ್ಯಗ ಳೊಂದಿಗೆ, ಜಿಲ್ಲಾಡಳಿತ ಸೂಚಿಸಿದ ಕೂಡಲೇ ಕ್ವಾರಂಟೈನ್‌ ಕೇಂದ್ರ ತೆರೆಯಲು ಸಿದ್ಧವಾಗಿರುವಂತೆ ಜಗದೀಶ್‌ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿಎಚ್‌ಒ ಡಾ| ಸುಧೀರ್‌ಚಂದ್ರ ಸೂಡಾ, ಡಿಡಿಪಿಐ ಶೇಷಶಯನ ಕಾರಿಂಜ ಉಪಸ್ಥಿತರಿದ್ದರು. ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ, ವಸತಿ ಶಾಲೆಗಳ ಪ್ರಾಂಶುಪಾಲರು, ಮುಖ್ಯಸ್ಥರು ಉಪಸ್ಥಿತರಿದ್ದರು.

ಕ್ವಾರಂಟೈನ್‌ ಕೇಂದ್ರ ಆರಂಭಕ್ಕೆ ವಿರೋಧಿಸಿದರೆ ಜೈಲು
ಜಿಲ್ಲೆಗೆ ವಿದೇಶದಿಂದ ಮತ್ತು ಹೊರರಾಜ್ಯದಿಂದ ಆಗಮಿಸುವವರನ್ನು ಕ್ವಾರಂಟೈನ್‌ಗೊಳಿಸಬೇಕಾಗಿದ್ದು ಈ ಕುರಿತು ಕ್ವಾರಂಟೈನ್‌ ಕೇಂದ್ರಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ ಅಡ್ಡಿಪಡಿಸುವವರನ್ನು ಸೆಕ್ಷನ್‌ 188, 269, 270 ಪ್ರಕಾರ ಜೈಲುಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಸಿದ್ದಾರೆ.

12 ಚೆಕ್‌ಪೋಸ್ಟ್‌ಗಳು
ಜಿಲ್ಲಾ ಕೋವಿಡ್-19 ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 12 ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ಹೊರಗಿ ನಿಂದ ಬರುವವರಿಗೆ ಚೆಕ್‌ಪೊಸ್ಟ್‌ಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಪ್ರವೇಶ ನೀಡಲಾಗುತ್ತಿದೆ. ಕ್ವಾರಂಟೈನ್‌ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಂಬಂಧಪಟ್ಟ ಸಂಸ್ಥೆಗಳ ಅಗತ್ಯ ಸಿಬಂದಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next