Advertisement

ಅತೃಪ್ತರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ

11:52 PM Jul 08, 2019 | Team Udayavani |

ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್‌ ಸಿದ್ಧªತೆ ನಡೆಸುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ಗೆ ದೂರು ದಾಖಲಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

Advertisement

ಈ ಕುರಿತು ಸೋಮವಾರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೆಶ್ವರ್‌, ಗೃಹ ಸಚಿವ ಎಂ.ಬಿ. ಪಾಟೀಲ್‌ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಕುಮಾರಕೃಪ ಅತಿಥಿ ಗೃಹದಲ್ಲಿ ಪ್ರತ್ಯೇಕ ಸಭೆ ನಡೆಸಿ, ತಮಿಳುನಾಡು ಮಾದರಿಯಲ್ಲಿ ಸಂವಿಧಾನದ ಹತ್ತನೇ ಪರಿಚ್ಚೇದದ 164 (1ಬಿ) ಪ್ರಕಾರ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರ ಶಾಸಕತ್ವವನ್ನು ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಸಂವಿಧಾನದ ಕಲಂ 164 (1ಬಿ) ಪ್ರಕಾರ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಪೂರಕವಾದ ದಾಖಲೆಗಳೊಂದಿಗೆ ಸ್ಪೀಕರ್‌ಗೆ ದೂರು ನೀಡಲು ನಾಯಕರು ಸಭೆಯಲ್ಲಿ ತೀರ್ಮಾನಿಸಿದ್ದಾರೆ.

ಒಂದು ವೇಳೆ, ಕಾಂಗ್ರೆಸ್‌ ದೂರಿನ ಅನ್ವಯ ರಾಜೀನಾಮೆ ನೀಡಿರುವ ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಿದರೆ, ಅತೃಪ್ತ ಶಾಸಕರು ಒಂದು ವೇಳೆ ಬಿಜೆಪಿ ಸೇರಿದರೂ ಅವರು ತಕ್ಷಣವೇ ಸಚಿವರಾಗಲು ಅವಕಾಶ ವಂಚಿತರಾಗುತ್ತಾರೆ. ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರೆ ಮಾತ್ರ ಸಚಿವರಾಗಲು ಅರ್ಹತೆ ಪಡೆದುಕೊಳ್ಳುತ್ತಾರೆ.

ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್‌ ಜತೆ ಗುರುತಿಸಿಕೊಂಡಿರುವುದು, ರಾಜೀನಾಮೆ ನೀಡಿ ಮುಂಬೈಗೆ ತೆರಳುವಾಗ ಬಿಜೆಪಿಯ ರಾಜ್ಯಸಭಾ ಸದಸ್ಯರ ಒಡೆತನದ ವಿಶೇಷ ವಿಮಾನ ಬಳಕೆ ಮಾಡಿರುವುದನ್ನು ಸಾಕ್ಷಿಯಾಗಿ ನೀಡಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ.

Advertisement

ಒಡೆದು ಆಳುವ ತಂತ್ರ?: ರಾಜ್ಯ ಕಾಂಗ್ರೆಸ್‌ ನಾಯಕರು ಸರ್ಕಾರ ಉಳಿಸಿಕೊಳ್ಳಲು ಹಾಗೂ ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಲು ಅವರಲ್ಲಿಯೇ ಒಡೆದು ಆಳುವ ತಂತ್ರ ಅನುಸರಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಈ ಹಿಂದೆ ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರಿ ಮುಂಬೈಗೆ ತೆರಳಿದ್ದ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಠಳ್ಳಿ, ಪ್ರತಾಪ್‌ಗೌಡ ಪಾಟೀಲ್‌, ಬಿ.ಸಿ.ಪಾಟೀಲ್‌, ಶಿವರಾಮ್‌ ಹೆಬ್ಟಾರ್‌ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆಧಾರದಲ್ಲಿ ಹಿಂದೆ ನೀಡಿದ್ದ ದೂರಿನ ಜೊತೆಗೆ ಈಗಿನ ಬೆಳವಣಿಗೆಯ ಕಾರಣ ನೀಡಿ, ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನ ರದ್ದುಗೊಳಿಸುವಂತೆ ದೂರು ನೀಡಲು ನಿರ್ಧರಿಸಿದ್ದಾರೆ.

ಅವರ ಹೊರತಾಗಿ ರಾಮಲಿಂಗಾ ರೆಡ್ಡಿ, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ್‌, ಮುನಿರತ್ನ ಹಾಗೂ ಆನಂದ್‌ ಸಿಂಗ್‌ ವಿರುದ್ಧ ಯಾವುದೇ ದೂರು ದಾಖಲಿಸದೇ ಅವರನ್ನು ವಾಪಸ್‌ ಕರೆತರಲು ಪ್ರಯತ್ನ ನಡೆಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next