Advertisement

ಕೆಂಪೇಗೌಡ ಜಯಂತಿಗೆ ಸರ್ವ ಸಿದ್ಧತೆ 

11:15 AM Jun 25, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ನಿರ್ಮಾತೃ ಮಾಗಡಿ ಕೆಂಪೇಗೌಡರ ಜಯಂತಿಯನ್ನು ಸರ್ಕಾರದಿಂದ ಅಧಿಕೃತವಾಗಿ ಜೂ. 27ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಚರಿಸಲಾಗುತ್ತದೆ. ವಿಧಾನಸೌಧದಲ್ಲಿ ಶನಿವಾರ ಕೆಂಪೇಗೌಡರ ಜಯಂತಿ ಆಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆ ಬಳಿಕ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಈ ವಿಷಯ ತಿಳಿಸಿದರು.

Advertisement

ಕೆಂಪೇಗೌಡರ ಜಯಂತಿಗೆ ಸರ್ಕಾರ ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ತುಮಕೂರಿನ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ರೋಷನ್‌ ಬೇಗ್‌ ಅಧ್ಯಕ್ಷತೆ ವಹಿಸುವರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವರಾದ ಅನಂತ ಕುಮಾರ್‌, ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ವಿಧಾನಸಭೆ ಆಧ್ಯಕ್ಷ ಕೆ.ಬಿ.ಕೋಳಿವಾಡ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಗ್ಗೆ 9.30ಕ್ಕೆ ಸ್ವಾತಂತ್ರ ಉದ್ಯಾನವನದಿಂದ ವಿಧಾನಸೌಧಕ್ಕೆ ಜಾನಪದ ಕಲಾತಂಡಗಳೊಂದಿಗೆ ನಾಡಪ್ರಭು ಕೆಂಪೇಗೌಡರ ಸ್ತಬ್ಧಚಿತ್ರದ ಮೆರವಣಿಗೆ ನಡೆಯಲಿದೆ. ಇದಕ್ಕೆ ಮೊದಲು ಕೆಂಪೇಗೌಡರು ನಿರ್ಮಿಸಿದ್ದ ನಾಲ್ಕು ಗಡಿ ಗೋಪುರಗಳ ಬಳಿಯಿಂದ ಜ್ಯೋತಿ ಮತ್ತು ಮಾಗಡಿ ಹಾಗೂ ಅಹುತಿ ಕಡೆಯಿಂದ ಎರಡು ಜ್ಯೋತಿಗಳ ಮೆರವಣಿಗೆ ಸ್ವಾತಂತ್ರ್ಯ ಉದ್ಯಾನವನಕ್ಕೆ ಬಂದು ಸೇರಲಿದೆ. ಅಲ್ಲಿಂದ ಮೆರವಣಿಗೆ ವಿಧಾನಸೌಧಕ್ಕೆ ಬರಲಿದೆ ಎಂದು ವಿವರಿಸಿದರು.

ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಪ್ರಾಧಿಕಾರ: ಇದಲ್ಲದೆ, ಕೆಂಪೇಗೌಡರ ಹುಟ್ಟೂರು ಸಮಗ್ರ ಅಭಿವೃದ್ಧಿಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದ್ದು, ಅದರ ಮೂಲಕ ಕೆಂಪೇಗೌಡರ ಜೀವನ ಹಾಗೂ ಅವರ ಕೆಲಸ ಕಾರ್ಯಕಗಳ ಬಗ್ಗೆ ಸಂಶೋಧನೆನೆ, ಪುಸ್ತಕ ಪ್ರಕಟಣೆ ಹಾಗೂ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

ಬೆಂಗಳೂರು ನಗರದವನ್ನು ಸ್ಥಾಪಿಸಿದ ಕೆಂಪೇಗೌಡರನ್ನು ಸ್ಮರಿಸಿ ಅವರು ಸಾಧನೆಗಳನ್ನು ಜನರಿಗೆ ತಲುಪಿಸಲು ಮತ್ತು ನಗರ ನಿರ್ಮಾಣದಲ್ಲಿ ಅವರಿಗಿದ್ದ ಆಶಯವನ್ನು ಮುಂದಿನ ಪೀಳಿಗೆಗೆ ಮುಟ್ಟಿಸಲು ಪ್ರಾಧಿಕಾರದ ವತಿಯಿಂದ ಕೆಂಪೇಗೌಡರು ನಿರ್ಮಿಸಿದ್ದ ಕೆರೆಗಳು, ಶಾಸಕನಗಳು, ಗುಡಿ ಗೋಪುರ ಸಂರಕ್ಷಣೆ ಮತ್ತು ಜೀರ್ಣೋದ್ದಾರ ಮಾಡುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗಿದೆ.

ನಾಡಪ್ರಭು ಕೆಂಪೇಗೌಡರ ಅಧ್ಯಯವ ಕೇಂದ್ರ ಸ್ಥಾಪಿಸುವ ಉದ್ದೇಶವೂ ಇದೆ. ಬೆಂಗಳೂರು ಕೇಂದ್ರ ಭಾಗದಲ್ಲಿ ಕೆಂಪೇಗೌಡರ ಭವನ ನಿರ್ಮಾಣ, ಕೆಂಪೇಗೌಡರು ಮತ್ತು ಅವರ ವಂಶಸ್ಥರು ಆಳ್ವಿಕೆ ನಡೆಸಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಗುಡಿಗೋಪುರ, ಕೋಟೆಗಳು, ಶಿಲಾಶಾಸನ, ಕೆರೆಗಳನ್ನು ಸಂರಕ್ಷಿಸಿ ಅಭಿವದ್ಧಿ ಪಡಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾಗಡಿ ಬಳಿಯ ತಿಪ್ಪಸಂದ್ರ ಹ್ಯಾಂಡ್‌ಪೋಟ್ಸ್‌ ಮತ್ತು ಕೆಂಚನಹಳ್ಳಿ ನಡುವೆ ಇರುವ ಕೆಂಪಾಪುರ ಗ್ರಾಮದಲ್ಲಿ ಕೆಂಪೇಗೌಡರ ಸಮಾಧಿ ಇದೆ ಎಂದು ಸಂಶೋಧಕರು ಗುರುತಿಸಿದ್ದು, ಕರ್ನಾಟಕ ಇತಿಹಾಸ ಅಕಾಡೆಮಿಯೂ ಇದನ್ನು ಒಪ್ಪಿದೆ. ಈ ಸ್ಥಳವನ್ನು ಸರ್ವರಿಗೂ ಒಪ್ಪುವ ರೀತಿಯಲ್ಲಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದರು.

ವಿಭಜಿತ ಬೆಂಗಳೂರು ವಿವಿಗೆ ಕೆಂಪೇಗೌಡರ ಹೆಸರಿಡಲು ಚಿಂತನೆ
ಬೆಂಗಳೂರು:
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡರ ಹೆಸರಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಂಪೇಗೌಡರ ಹೆಸರು ಬೆಂಗಳೂರು ಅಭಿವೃದ್ಧಿಯೊಂದಿಗೆ ಬೆಸೆದುಕೊಂಡಿದೆ.

ಈಗಾಗಲೇ ನಗರದ ಪ್ರಮುಖ ಬಸ್‌ ನಿಲ್ದಾಣ ಮೆಜೆಸ್ಟಿಕ್‌ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡರ ಹೆಸರು ಇಡಲಾಗಿದೆ. ಇದೀಗ ಬೆಂಗಳೂರು ವಿವಿಗೂ ಕೆಂಪೇಗೌಡರ ಹೆಸರಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next