ದೇವನಹಳ್ಳಿ: ಅಂತಾರಾಷ್ಟ್ರೀಯ ಯೋಗ ದಿನವನ್ನು ದೇವನಹಳ್ಳಿ ಪಟ್ಟಣದಲ್ಲಿರುವ ಕ್ರೀಡಾಂಗಣದಲ್ಲಿ ಜೂ.21ರಂದು ನಡೆಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ತಿಳಿಸಿದರು.
ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಬಳಿ ಇರುವ ಜಿಲ್ಲಾ ಸಂಕೀರ್ಣ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಕಳೆದ ವರ್ಷದವರೆಗೂ ರಾಜ್ಯ ಮಟ್ಟದ ಕಾರ್ಯಕ್ರಮದೊಂದಿಗೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳು ದೇವನಹಳ್ಳಿ ತಾಲೂಕಿಗೆ ಸ್ಥಳಾಂತಗೊಂಡಿರುವುದರಿಂದ ಈ ವರ್ಷ ಪ್ರತ್ಯೇಕವಾಗಿ ಆಚರಿಸಬೇಕಾಗಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ವ್ಯವಸ್ಥಿತವಾಗಿ ನಡೆಸಲು ನೀಡಲಾಗಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ: ವಿದ್ಯಾರ್ಥಿಗಳು ಸೇರಿದಂತೆ ಸುಮಾರು 2ರಿಂದ 3 ಸಾವಿರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರಿಗೆ ಉಪಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ಜೂ.21ರ ಬೆಳಗ್ಗೆ 6ಗಂಟೆಯಿಂದ 8.30 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ ಜೂ.19ರಂದು ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ತಾಲೀಮು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಸಿಬ್ಬಂದಿ ತಪ್ಪದೇ ಭಾಗವಹಿಸಲಿ: ಅಂತಾರಾಷ್ಟ್ರೀಯ ಯೋಗ ದಿನಾದಂದು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ತಪ್ಪದೇ ಭಾಗವಹಿಸಬೇಕು. ಇಲಾಖೆ ಮುಖ್ಯಸ್ಥರಿಗೆ ಆಯುಷ್ ಇಲಾಖೆಯಿಂದ ಪತ್ರ ರವಾನೆ ಆಗಬೇಕು. ಸಮಯವನ್ನು ವ್ಯರ್ಥ ಮಾಡದೇ, ಕಾರ್ಯಕ್ರಮವನ್ನು ನಿಗದಿಪಡಿಸಿರುವ ಅವಧಿಯೊಳಗೆ ಬಹಳ ಅಚ್ಚುಕಟ್ಟಾಗಿ ಆರಂಭಿಸಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಈ ವೇಳೆ ದೊಡ್ಡಬಳ್ಳಾಪುರ ಪೊಲೀಸ್ ಉಪ ಅಧೀಕ್ಷಕ ಮೋಹನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಹರೀಶ್ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಯುವಜನ ಸೇವಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ ಸೇರಿದಂತೆ ಸಂಘ- ಸಂಸ್ಥೆಗಳ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.