ಹುಬ್ಬಳ್ಳಿ: ಬೃಹತ್ ಉದ್ಯೋಗ ಮೇಳ ಉದ್ಯೋಗದಾತರ ಹಾಗೂ ಉದ್ಯೋಗ ಹುಡುಕಾಟದಲ್ಲಿರುವವರ ನಡುವೆ ಕೊಂಡಿಯಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಉದ್ಯೋಗದಾತರು ಕೌಶಲಾಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ತಮ್ಮ ಸಂಸ್ಥೆಯ ಕುರಿತು ಮಾಹಿತಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಧಾರವಾಡದಲ್ಲಿ ನಡೆಯಲಿರುವ ಅಖಂಡ ಧಾರವಾಡ ಜಿಲ್ಲೆಯ ಬೃಹತ್ ಉದ್ಯೋಗ ಮೇಳದ ಪ್ರಯುಕ್ತ ಶುಕ್ರವಾರ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಭಾಗದ ಕೈಗಾರಿಕೆಗಳಿಗೆ ಕೌಶಲಭರಿತ ಅಭ್ಯರ್ಥಿಗಳ ಬೇಡಿಕೆ ಇದೆ. ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಂಪೆನಿಗಳಿವೆ. ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಅಭ್ಯರ್ಥಿಗಳು ಓಡಾಡುತ್ತಿದ್ದಾರೆ. ಇವರಿಬ್ಬರ ನಡುವೆ ಕೊಂಡಿಯಾಗಿ ಇಬ್ಬರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಉದ್ಯೋಗದಾತರು ತಮ್ಮ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳ ಕುರಿತು ಇಲಾಖೆಯ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ ಮಾತನಾಡಿ, ಕೆಲವೊಂದು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಕೇವಲ ಪಾಲ್ಗೊಳ್ಳಲು ಮಾತ್ರ ಆಗಮಿಸುತ್ತವೆ. ಒಬ್ಬ ನಿರುದ್ಯೋಗಿಗೂ ಉದ್ಯೋಗ ನೀಡುವುದಿಲ್ಲ. ಕಾಟಾಚಾರದ ಮೇಳ ಆಗಬಾರದು ಎನ್ನುವ ಕಾರಣಕ್ಕೆ ಮುಕ್ತಾಯದ ನಂತರ ಎಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗಿದೆ ಎನ್ನುವ ಮಾಹಿತಿ ನೀಡಬೇಕು. ಈ ಭಾಗದ ಕೈಗಾರಿಕೆಗಳಿಗೆ ಉದ್ಯೋಗಿಗಳನ್ನು ನೀಡುವುದು ಮೊದಲ ಆದ್ಯತೆಯಾಗಿದೆ. ಉದ್ಯೋಗದಾತರು ಅಭ್ಯರ್ಥಿಗಳಿಗೆ ತರಬೇತಿ ನೀಡಿ ನಂತರ ಉದ್ಯೋಗ ಕೊಡಬಹುದು ಎಂದು ತಿಳಿಸಿದರು.
ರಿಯಾಜ್ ಬಸರಿ ಮಾತನಾಡಿ, ಉದ್ಯೋಗ ಮೇಳಕ್ಕೆ ಬರುವ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಸುವಂತಿರಬಾರದು. ತನ್ನ ಶಿಕ್ಷಣ,ವೇತನ ಅಪೇಕ್ಷೆ, ಹುದ್ದೆಗಳು, ಕಂಪೆನಿ ಸೇರಿದಂತೆ ವಿವಿಧ ಮಾಹಿತಿ ಪ್ರತಿಯೊಬ್ಬ ಅಭ್ಯರ್ಥಿಗೆ ದೊರೆಯುವಂತಾಗಬೇಕು. ಅಂದಾಗ ಮಾತ್ರ ಸಂದರ್ಶನ ನಡೆಸುವವರಿಗೂ ಕಡಿಮೆ ಅವಧಿಯಲ್ಲಿ ತಮ್ಮ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಜಿಲ್ಲಾ ಕೌಶಲ ಕೇಂದ್ರದ ಡಾ| ಚಂದ್ರಪ್ಪ, ಜಿಲ್ಲಾ ಕೈಗಾರಿಕೆ ಕೇಂದ್ರದ ಸಹಾಯಕ ನಿರ್ದೇಶಕ ಎನ್.ಎಂ. ಭೀಮಪ್ಪ, ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಉದ್ಯಮಿಗಳಾದ ಜಯದೇವ ಮೆಣಸಗಿ, ಎಂ.ಬಿ. ಹೊಂಬರಡಿ, ರಮೇಶ ಪಾಟೀಲ, ಶಂಕರಣ್ಣ ಮುನವಳ್ಳಿ, ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ವಿ.ಪಿ. ಲಿಂಗನಗೌಡರ ಇನ್ನಿತರರಿದ್ದರು.