Advertisement

ಪ‌ರಿಷತ್‌ ಚುನಾವಣೆಗೆ ಸರ್ವ ಸಿದ್ಧತೆ: ಡಿ.ಸಿ.

03:36 PM Jun 06, 2018 | Harsha Rao |

ಮಂಗಳೂರು: ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕರ ಹಾಗೂ ನೈಋತ್ಯ ಪದವೀಧರ ಕ್ಷೇತ್ರಗಳಿಗೆ ಜೂ. 8ರಂದು ನಡೆಯುವ ಚುನಾವಣೆಗೆ ದ. ಕನ್ನಡ ಜಿಲ್ಲೆಯಲ್ಲಿ ಸರ್ವ ಸಿದ್ಧತೆಗಳನ್ನು ಮಾಡಲಾಗಿದೆ. ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ 14 ಹಾಗೂ ಪದವೀಧರರ ಕ್ಷೇತ್ರಕ್ಕೆ 23 ಮತಗಟ್ಟೆಗಳು ಸೇರಿದಂತೆ ಒಟ್ಟು 37 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಅವರು ಜೂ. 8ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದೆ. ಈ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಭಾವಚಿತ್ರ ಇರುವ ಗುರುತಿನ ಚೀಟಿಯೊಂದಿಗೆ ನಿಗದಿತ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಬಹುದಾಗಿದೆ. ಗುರುತು ಚೀಟಿ ಇಲ್ಲದಿದ್ದರೆ ಚುನಾವಣಾ ಆಯೋಗ ಅನುಮೋದಿಸಿರುವ ಇತರ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ನೀಡಿ ಮತ ಚಲಾಯಿಸಬಹುದಾಗಿದೆ. ಮತದಾರರ ವಿವರಗಳನ್ನು dk.nic.in ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ ಎಂದರು. 

ಮತದಾನ ವಿಧಾನ
ಮತದಾನ ಮಾಡಲು ನೇರಳೆ ಬಣ್ಣದ ಸ್ಕೆಚ್‌ ಪೆನ್‌ ಬಳಸಲಾಗುವುದು. ಆದ್ಯತೆಗನುಗುಣವಾಗಿ ಪ್ರಾಶಸ್ತÂ ಮತ ಚಲಾವಣೆ ಮಾಡಲು ಅವಕಾಶವಿದೆ. ಅಂಕೆಗಳಲ್ಲಿ 1, 2, 3… ರಂತೆ ಅಭ್ಯರ್ಥಿಗಳ ಎದುರು ನಮೂದಿಸಿ ಮತ ಚಲಾವಣೆ ಮಾಡಬೇಕಿರುತ್ತದೆ. ಮತದಾರ ಒಟ್ಟು ಅಭ್ಯರ್ಥಿಗಳು ಮತ್ತು ನೋಟಾ ಸೇರಿದಂತೆ ಮತಗಳನ್ನು ನೀಡಬಹುದಾಗಿದೆ ಎಂದರು.

ಆಯೋಗದ ನಿರ್ದೇಶನದಂತೆ ಪದವೀಧರ ಕ್ಷೇತ್ರದ ಮತದಾರರ ಬಲಕೈಯ ತೋರು ಬೆರಳಿಗೆ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರನ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುವುದು.

ಅಸಿಂಧು ಮತಗಳು
1ನೇ ಪ್ರಾಶಸ್ತÂದ ಮತ ದಾಖಲಿಸಿಲ್ಲದ, 1ನೇ ಪ್ರಾಶಸ್ತÂದ ಮತವನ್ನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗೆ ದಾಖಲಿಸಿದ, ನೇರಳೆ ಬಣ್ಣದ ಸ್ಕೆಚ್‌ ಪೆನ್‌ ವಿನಾ ಉಳಿದ ಸಾಧನದಿಂದ ಗುರುತಿಸಿದ ಮತಗಳು, ಯಾವ ಅಭ್ಯರ್ಥಿಯ ಮುಂದೆ ಮತ ಚಲಾಯಿಸಲಾಗಿದೆ ಎಂದು ನಿರ್ಧಾರಕ್ಕೆ ಬರಲಾಗದ ಮತಗಳು ಅಸಿಂಧು ಮತಗಳಾಗಿ ಪರಿಗಣಿಸಲ್ಪಡುತ್ತದೆ ಎಂದು ವಿವರಿಸಿದರು.

Advertisement

ಭದ್ರತಾ ಕೊಠಡಿ
ಮತದಾನ ಮುಕ್ತಾಯಗೊಂಡ ಬಳಿಕ ಜಿಲ್ಲೆಯ ಎಲ್ಲ ಕ್ಷೇತ್ರಗಳ ಮತಗಟ್ಟೆಗಳಿಂದ ಮತಪೆಟ್ಟಿಗೆ, ಶಾಸನಬದ್ಧ ಲಕೋಟೆ ಗಳನ್ನು ಸಂಗ್ರಹಿಸಿ ಸೂಕ್ತ ಪೊಲೀಸ್‌ ಭದ್ರತೆಯೊಂದಿಗೆ ಮೈಸೂ ರಿನ ಮಹಾ ರಾಣಿ ವಿಮೆನ್ಸ್‌ ಆ್ಯಂಡ್‌ ಬಿಸಿನೆಸ್‌ ಮ್ಯಾನೇಜ್‌ ಮೆಂಟ್‌ ಕಾಲೇಜಿಗೆ ಒಯ್ದು ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗುವುದು. 

ಜೂ. 12ರಂದು ಮತ ಎಣಿಕೆ
ಮೈಸೂರಿನ ಮಹಾರಾಣಿ ವಿಮೆನ್ಸ್‌ ಆ್ಯಂಡ್‌ ಬಿಸಿನೆಸ್‌ ಮೆನೇಜ್‌ಮೆಂಟ್‌ ಕಾಲೇಜಿನಲ್ಲಿ ಜೂ. 12ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next