Advertisement

ಗಗನಯಾನಕ್ಕೆ ಸಿದ್ಧತೆ: ದೇಶಕ್ಕೆ ಶುಭಸಂಕೇತ

02:53 AM Jan 02, 2019 | |

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಅವರನ್ನು ಸುರಕ್ಷಿತವಾಗಿ ಧರೆಗೆ ಕರೆತರುವುದಷ್ಟೇ ಅಲ್ಲದೆ, ಗಗನ ಯಾತ್ರೆ ಕೈಗೊಳ್ಳುವವರಿಗೆ ತರಬೇತಿ ನೀಡುವುದೂ ಕೂಡ ಒಂದು ಕಠಿಣ ಪ್ರಕ್ರಿಯೆ.

Advertisement

ಕಳೆದ ಅರ್ಧ ಶತಮಾನದಲ್ಲಿ ಬಾಹ್ಯಕಾಶ ಕ್ಷೇತ್ರದಲ್ಲಿನ ಮಾನವನ ಸಾಧನೆ ಚಮತ್ಕಾರಕ್ಕಿಂತ ಕಡಿಮೆಯೇನಿಲ್ಲ. ಆಕಾಶದಲ್ಲಿ ಹಾರಬೇಕೆಂಬ ಕನಸು ವಿಮಾನದ ಆವಿಷ್ಕಾರಕ್ಕೆ ಕಾರಣವಾಯಿತು.. ವಿಮಾನದ ಆವಿಷ್ಕಾರವು ಅಂತರಿಕ್ಷದ ಬಾಗಿಲನ್ನು ತೆರೆದುಬಿಟ್ಟಿತು. ಅಮೆರಿಕ ಮತ್ತು ಸೋವಿಯತ್‌ ಒಕ್ಕೂಟ 1961ರಲ್ಲೇ ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಕಳುಹಿಸಿದ್ದವು. ಐದು ವರ್ಷಗಳ ನಂತರ ಚೀನಾ ಕೂಡ ಈ ಸಾಧನೆ ಮಾಡಿತು. ಈಗ ಭಾರತವೂ ಮಾನವನನ್ನು ಅಂತರಿಕ್ಷಕ್ಕೆ ಕಳುಹಿಸಲು ಸಿದ್ಧತೆ ಆರಂಭಿಸಿದೆ. ಕೇಂದ್ರ ಸರ್ಕಾರ ಗಗನಯಾನ ಯೋಜನೆಗೆ ಒಪ್ಪಿಗೆ ನೀಡಿದೆ. 2022ರಲ್ಲಿ ಮೂವರು ಭಾರತೀಯರನ್ನು ಏಳು ದಿನಗಳವರೆಗೆ ಬಾಹ್ಯಾಕಾಶಕ್ಕೆ ಕಳಿಹಿಸುವ ಉದ್ದೇಶ ಈ ಯೋಜನೆಯದ್ದು. ತಡವಾದರೂ ಅಡ್ಡಿಯಿಲ್ಲ, ಈ ಸ್ವದೇಶಿ ಮಿಷನ್‌ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶಕ್ಕೆ ಹೊಸ ದ್ವಾರಗಳನ್ನು ತೆರೆಯುವುದರಲ್ಲಿ ಸಂಶಯವಿಲ್ಲ. 

ಗಗನಯಾನ ಯೋಜನೆ ಇಸ್ರೋ ಪಾಲಿಗೆ ನಿಜಕ್ಕೂ ಸವಾಲಿಂದ ಕೂಡಿದೆ. ಏಕೆಂದರೆ ಅದು ಇದುವರೆಗೂ ಪೂರ್ಣಗೊಳಿಸಿದ ಮಿಷನ್‌ಗಳೆಲ್ಲ ಮಾನವರಹಿತವಾದದ್ದು. ಹೀಗಾಗಿ ಗಗನಯಾನ ಯೋಜನೆಯ ನಿರ್ವ ಹಣೆ ಇಲ್ಲಿಯವರೆಗಿನ ಇಸ್ರೋದ ಉಳಿದೆಲ್ಲ ಯೋಜನೆಗಳಿಗಿಂತಲೂ ತಾಂತ್ರಿಕವಾಗಿ ಮತ್ತು ಪ್ರಾಯೋಗಿ ಕವಾಗಿ ಭಿನ್ನವಾಗಿರಲಿದೆ ಮತ್ತು ಹೆಚ್ಚು ಜಟಿಲವೂ ಹೌದು. ಗಗನಯಾತ್ರಿ ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಅವರನ್ನು ಅಷ್ಟೇ ಸುರಕ್ಷಿತವಾಗಿ ಧರೆಗೆ ಕರೆತರುವುದಷ್ಟೇ ಅಲ್ಲದೆ, ಗಗನ ಯಾತ್ರೆ ಕೈಗೊಳ್ಳುವವರಿಗೆ ತರಬೇತಿ ನೀಡುವುದೂ ಕೂಡ ಒಂದು ಕಠಿಣ ಪ್ರಕ್ರಿಯೆ. ಭಾರತದಲ್ಲಿ ಇಂದಿಗೂ ಗಗನಯಾತ್ರಿಗಳಿಗೆ ತರಬೇತಿ ನೀಡುವ ಕೇಂದ್ರವಿಲ್ಲ. ಈ ಕಾರಣಕ್ಕಾಗಿಯೇ ಈ ಮಿಷನ್‌ಗೆ ಆಯ್ಕೆಯಾಗುವ ಯಾತ್ರಿ ಗಳನ್ನು ತರಬೇತಿಗಾಗಿ ವಿದೇಶಕ್ಕೆ ಕಳುಹಿಸುವುದು ಅನಿವಾರ್ಯ. ಅಂತರಿಕ್ಷ ಯಾತ್ರೆಗೆ ಸಂಬಂಧಿಸಿದ ತಂತ್ರಜ್ಞಾನ ರಷ್ಯಾ, ಅಮೆರಿಕ ಮತ್ತು ಚೀನಾದ ಬಳಿ ಇದೆ. ಹೀಗಾಗಿ ಅನೇಕ ಸ್ತರಗಳಲ್ಲಿ ಈ ರಾಷ್ಟ್ರಗಳಿಂದ ಸಹಾಯದ ಅಗತ್ಯವೂ ಎದುರಾಗಬಹುದು. 

ಆದರೂ ಉಪಗ್ರಹ ಉಡ್ಡಯನಗಳಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಾ ವಿಖ್ಯಾತಿ ಗಳಿಸಿರುವ ನಮ್ಮ ವಿಜ್ಞಾನಿಗಳು ಮಾನವ ಸಹಿತ ಬಾಹ್ಯಾಕಾಶ ಯೋಜನೆಯಲ್ಲೂ ಸಫ‌ಲರಾಗುತ್ತಾರೆ ಎಂಬ ನಂಬಿಕೆ ದೇಶವಾಸಿಗಳಿಗಷ್ಟೇ ಅಲ್ಲ, ವೈಜ್ಞಾನಿಕ ವಲಯಕ್ಕೂ ಇದೆ. ಈ ಮಹಾ ಯೋಜನೆಯಲ್ಲಿ ಭಾರತ ಯಶಸ್ಸು ಗಳಿಸುತ್ತಿದ್ದಂತೆಯೇ ಬಾಹ್ಯಾಕಾಶ ಯಾತ್ರೆಯ ವ್ಯವಹಾರದಲ್ಲೂ ಅನೇಕ ಸಾಧ್ಯತೆಗಳು ತೆರೆದುಕೊಳ್ಳಲಿವೆ. 

ಬಾಹ್ಯಾಕಾಶ ಕಾರ್ಯಕ್ರಮಗಳು ಅತ್ಯಂತ ಖರ್ಚಿನಿಂದ ಕೂಡಿರುತ್ತವೆ. ವೈಜ್ಞಾನಿಕ ಪ್ರತಿಭೆಗಳ ಸಮೇತ, ಮುಂಚೂಣಿ ತಂತ್ರಜ್ಞಾನದ ಅಗತ್ಯವೂ ಇರುತ್ತದೆ. ಆದರೆ ಇಸ್ರೋ ನಡೆದು ಬಂದ ಹಾದಿಯನ್ನು ನೋಡಿದರೆ, ಬೃಹತ್‌ ಆರ್ಥಿಕ ಬೆಂಬಲವಿಲ್ಲದೆಯೂ ಸಕ್ಷಮ ತಂತ್ರಜ್ಞಾನಗಳನ್ನು, ಕಾರ್ಯಕ್ರಮಗಳನ್ನು ರಚಿಸಿ ಸೈ ಎನ್ನಿಸಿಕೊಳ್ಳುವ ಕಲೆ ಅದಕ್ಕೆ ಸಿದ್ಧಿಸಿದೆ ಎನ್ನುವುದು ಅರಿವಾಗುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಯಶಸ್ವಿಯಾದ ಮಂಗಳಯಾನ ಯೋಜನೆ ಇದಕ್ಕೆ ಉದಾಹರಣೆ. ಆದರೂ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮಗಳ ವಿಚಾರಕ್ಕೆ ಬರುವುದಾದರೆ ಇವುಗಳಿಗೆ ಅತಿಹೆಚ್ಚು ಆರ್ಥಿಕ ಬೆಂಬಲದ ಅಗತ್ಯವಿರುತ್ತದೆ. ಈಗೀಗಂತೂ ದೇಶವೊಂದರ ಆದ್ಯತೆಯ ಪಟ್ಟಿಯಲ್ಲಿ ಇಂಥ ಕಾರ್ಯಕ್ರಮಗಳು ಇರುವುದೇ ಇಲ್ಲ. ಆದರೆ ಭಾರತದ ವಿಷಯದಲ್ಲಿ ಹೀಗಾಗುತ್ತಿಲ್ಲ. ಭಾರತವೀಗ‌ ಈ ಯೋಜನೆಯ ಬಗ್ಗೆ ಉತ್ಸಾಹ ತೋರಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹವಾದದ್ದು.  ಆದಾಗ್ಯೂ ಈ ಯೋಜನೆಯ ರೂಪುರೇಷೆ ರಚನೆಯಾಗಿದ್ದು, ಇಸ್ರೋ ಸರ್ಕಾರದ ಮುಂದೆ ಶಿಫಾರಸ್ಸು ಇಟ್ಟದ್ದು 2004ರಲ್ಲೇ.  2007ರಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾನವ ಸಹಿತ ಅಂತರಿಕ್ಷ ಕಾರ್ಯಕ್ರಮದ ಘೋಷಣೆ ಮಾಡಲಾಗಿತ್ತು. ಈಗ ಮತ್ತೆ ಸರ್ಕಾರವು ಈ ಕಾರ್ಯಕ್ರಮದ ವಿಚಾರದಲ್ಲಿ ಉತ್ಸಾಹ ತೋರಿಸಿರುವುದು ಭಾರತದ ಪಾಲಿಗೆ ನಿಜಕ್ಕೂ ಶುಭಸಂಕೇತವೆಂದೇ ಹೇಳಬಹುದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next