ದಾವಣಗೆರೆ: ಏ.1ರಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಮುಂದುವರೆದರೆ ಪೂರಕ ವ್ಯವಸ್ಥೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ತಿಳಿಸಿದ್ದಾರೆ.
ವಾಹನ ವಿಮಾ ಪ್ರೀಮಿಯಂ ಕಡಿತ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ಆರು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿರುವ ಲಾರಿ ಮುಷ್ಕರದಿಂದ ಜಿಲ್ಲೆಯಲ್ಲಿ ಅವಶ್ಯಕ ಸರಕು-ಸಾಮಾನುಗಳ ಸಾಗಾಣಿಕೆ ಕುರಿತು ಪರಿಶೀಲಿಸಲು ಗುರುವಾರ ಕರೆಯಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ ಅತ್ಯಾವಶ್ಯಕ ಸಾಮಗ್ರಿಗಳ ಪೂರೈಕೆಯಲ್ಲಿ ತೊಂದರೆ ಇಲ್ಲ. ಮುಷ್ಕರ ಮುಂದುವರೆದರೆ ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದರು. ಅತ್ಯಾವಶ್ಯಕ ಸಾಮಗ್ರಿಗಳಾದ ಪಡಿತರ, ದವಸಧಾನ್ಯ, ಔಷಧಿ, ಹಣ್ಣು ಹಾಲು ಇತ್ಯಾದಿ ಪೂರೈಕೆಗೆ ಈಗ ಯಾವುದೇ ತೊಂದರೆ ಇಲ್ಲ.
ಮುಷ್ಕರ ಮುಂದುವರೆದರೆ ಅತ್ಯಾವಶ್ಯಕ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪರ್ಯಾಯ ವ್ಯವಸ್ಥೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ತಿಳಿಸಿದರು.ಎಪಿಎಂಸಿ ಕಾರ್ಯದರ್ಶಿ ಆನಂದ್ ಮಾತನಾಡಿ, ಇಲ್ಲಿಯವರೆಗೆ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ತೊಂದರೆಯಾಗಿಲ್ಲ.
ಈರುಳ್ಳಿ ಮತ್ತು ಆಲೂಗಡ್ಡೆ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಇಲ್ಲಿಂದ ತರಕಾರಿ ಬೇರೆಡೆ ಸಾಗಿಸಲಾಗುತ್ತಿಲ್ಲ ಎಂದು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಮಾತನಾಡಿ, ಸದ್ಯಕ್ಕೆ ಏನೂ ತೊಂದರೆ ಇಲ್ಲ. ಆದರೆ, ಮುಷ್ಕರ ಮುಂದುವರೆದರೆ ಮಾವು ಬೆಳೆದ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದರು.
ಹಾಲಿನ ಸಾಗಾಣಿಕೆ ಮತ್ತು ಮಾರುಕಟ್ಟೆ ಮೇಲೆ ಮುಷ್ಕರದ ಪರಿಣಾಮ ಇಲ್ಲ ಎಂದು ಕೆಎಂಎಫ್ ಅಧಿಕಾರಿ ತಿಳಿಸಿದರೆ, ಕೆಎಸ್‌ಆರ್ ಟಿಸಿ ನಿಗಮದ ವತಿಯಿಂದ ಎಲ್ಲ ಡಿಪೋಗಳಲ್ಲಿ ಇಂಧನದ ವ್ಯವಸ್ಥೆ ಇರುವುದರಿಂದ ಮುಷ್ಕರದಿಂದ ಇಂಧನದ ಸಮಸ್ಯೆ ಎದುರಾಗುವುದಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.