Advertisement

12 ಕೊಠಡಿಗಳಲ್ಲಿ ಮತ ಎಣಿಕೆಗೆ ಸಿದ್ಧತೆ

11:23 AM Apr 23, 2019 | Team Udayavani |

ಕೋಲಾರ: ನಗರದ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 23ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತ ಎಣಿಕೆಗಾಗಿ 12 ಕೊಠಡಿಗಳನ್ನು ಸಿದ್ಧಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಎಣಿಕೆ ಕಾರ್ಯದಲ್ಲಿ ಯಾವುದೇ ಗೊಂದಲಗಳಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಮೇ 23ರ ಮತ ಎಣಿಕೆ ಸಂಬಂಧ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತ ಎಣಿಕೆಗೆ ತಲಾ 12 ಟೇಬಲ್ಗಳನ್ನು ಹಾಗೂ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೂ 14 ಟೇಬಲ್ಗಳನ್ನು ಅಣಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಟೇಬಲ್, ಸಿಬ್ಬಂದಿ ನೇಮಕ: ಶ್ರೀನಿವಾಸಪುರ, ಚಿಂತಾಮಣಿ, ಕೆಜಿಎಫ್‌, ಕೋಲಾರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಒಂದು ದೊಡ್ಡ ಕೊಠಡಿಗಳಲ್ಲಿ ತಲಾ 14 ಟೇಬಲ್ಗಳನ್ನು ಹಾಕಲಾಗುವುದು. ಉಳಿದಂತೆ ಬಂಗಾರಪೇಟೆ, ಮುಳಬಾಗಿಲು, ಮಾಲೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎರಡೂ ಕೊಠಡಿಗಳಲ್ಲಿ ತಲಾ 14 ಹಾಗೂ ಶಿಡ್ಲಘಟ್ಟ ಕ್ಷೇತ್ರಕ್ಕೆ 12 ಟೇಬಲ್ಗಳನ್ನು ಹಾಕಿ, 12 ಕೊಠಡಿಗಳಲ್ಲಿಯೂ ಪ್ರತಿ ಟೇಬಲ್ಗೆ ಮೂವರು ಸಿಬ್ಬಂದಿ ನಿಯೋಜಿಸಲಾಗುವುದು. ಸ್ಟ್ರಾಂಗ್‌ರೂಂ ಪಕ್ಕದ ಕೊಠಡಿಗಳನ್ನೇ ಬಹುತೇಕ ಮತ ಎಣಿಕೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಮತ ಎಣಿಕೆ ಕಾರ್ಯಕ್ಕೆ ಇನ್ನೂ ಒಂದು ತಿಂಗಳು ಕಾಲಾವಕಾಶವಿದೆ. ವಾರದ ಮೊದಲು ಈ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಕೆಲವೆಡೆ ಇವಿಎಂಗಳಲ್ಲಿ ದೋಷವುಂಟಾಗಿರುವುದು ಹೊರತುಪಡಿಸಿ, ಮತದಾನ ಶಾಂತಿಯುತವಾಗಿ, ಗೊಂದಲಗಳಿಗೆ ಅವಕಾಶವಿಲ್ಲದಂತೆ ನಡೆಸಿದ್ದೀರಿ, ಮತ ಎಣಿಕೆ ಕಾರ್ಯವೂ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.

ನೀತಿಸಂಹಿತೆ ಉಲ್ಲಂಘನೆ ಪ್ರಕರಣ 22: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ 22 ಪ್ರಕರಣಗಳು ದಾಖಲಾಗಿವೆ. 36,9,430 ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಅದೇರೀತಿ ಅಬಕಾರಿ ವ್ಯಾಪ್ತಿಯಲ್ಲಿ 466 ಪ್ರಕರಣಗಳು ದಾಖಲಾಗಿದ್ದು, 40,78,283 ರೂ. ಮೌಲ್ಯದ 13,877 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

Advertisement

93,768 ಸಾವಿರ ಮಂದಿಗೆ 1.29 ಕೋಟಿ ರೂ.ಪರಿಹಾರ:

ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾಗಿದ್ದು, ಮೊದಲ ಹಂತದಲ್ಲಿ ಪ್ರತಿ ಹೆಕ್ಟೇರ್‌ಗೆ 6,800 ರೂ.ನಂತೆ ಮೊದಲ ಹಂತದಲ್ಲಿ 1128 ಗ್ರಾಮಗಳಲ್ಲಿ 93,768 ಫಲಾನುಭವಿಗಳಿಗೆ 1.29 ಕೋಟಿ ರೂ. ನಷ್ಟ ಪರಿಹಾರ ನೀಡಿರುವುದಾಗಿ ಜಿಲ್ಲಾಧಿಕಾರಿ ಮಂಜುನಾಥ್‌ ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ 6 ತಾಲೂಕುಗಳ ಒಟ್ಟು 1723 ಗ್ರಾಮಗಳಲ್ಲಿ ರಾಗಿ, ನೆಲಗಡಲೆ, ತೊಗರಿ ಬೆಳೆಗಳಿಗೆ ಹಾನಿಯಾಗಿದೆ. ಈಗಾಗಲೇ ಮೊಬೈಲ್ ಆ್ಯಪ್‌ ಮೂಲಕ ಸಂಗ್ರಹಿಸಿದ್ದ ಮಾಹಿತಿಗೆ ಅನುಗುಣವಾಗಿ ಪರಿಹಾರದ ಹಣ ನೀಡಲಾಗಿದೆ. 2ನೇ ಹಂತದಲ್ಲಿ 719 ಗ್ರಾಮಗಳ 63145 ಫಲಾನುಭವಿಗಳಿಗೆ ಪರಿಹಾರ ನೀಡಲು ಪ್ರಕ್ರಿಯೆ ನಡೆಸಲಾಗಿದ್ದು, ಸದ್ಯದಲ್ಲೇ ವಿತರಿಸಲಾಗುವುದು ಎಂದರು.

ಅಲ್ಲದೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಶ್ರೀನಿವಾಸಪುರ ಭಾಗದಲ್ಲಿ ಮಾವು, ಮುಳಬಾಗಿಲಿನ ಕೆಲವೆಡೆ ಬಾಳೆತೋಟ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೆಳೆ, ಮತ್ತಿತರ ಕೃಷಿ ಪರಿಕರಗಳು ಹಾನಿಗೊಳಗಾಗಿದ್ದು, ವರದಿ ಪಡೆದುಕೊಳ್ಳುತ್ತಿದ್ದೇವೆ. ಮಾನವೀಯತೆ ದೃಷ್ಟಿಯಿಂದಲೂ ಅನೇಕರಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಸೋಮಶೇಖರ್‌, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next