Advertisement
ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳು ಇತ್ತೀಚೆಗೆ ಕರಡು ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿರುವ ಮೈತ್ರಿ ಆಡಳಿತ, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಜನಪರವಾದ ಆಯವ್ಯಯ ಮಂಡಿಸಲು ತೀರ್ಮಾನಿಸಿವೆ.
Related Articles
Advertisement
ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗದವರ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಅವರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಿದ್ದಾರೆ. ಅದರಂತೆ ಕಳೆದ ಬಾರಿ ಘೋಷಣೆ ಮಾಡಿದಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸುವುದು, ಜತೆಗೆ ಬಡ ಹಾಗೂ ಮಧ್ಯಮ ವರ್ಗ ಜನತೆಯ ಆರೋಗ್ಯ ರಕ್ಷಣೆಗಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ಘೋಷಿಸಲಾಗುತ್ತದೆ ಎನ್ನಲಾಗಿದೆ.
ಮೇಯರ್, ಉಪಮೇಯರ್ ಅನುದಾನ ಹೆಚ್ಚಳ?: ಬಜೆಟ್‌ನಲ್ಲಿ ಬಿಬಿಎಂಪಿ ಮೇಯರ್, ಉಪಮೇಯರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ನಿಧಿಯ ಅನುದಾನ ಹೆಚ್ಚಿಸಲು ಚಿಂತನೆ ನಡೆದಿದೆ. ಇದರೊಂದಿಗೆ ಪಾಲಿಕೆಯ ಎಲ್ಲ 12 ಸ್ಥಾಯಿ ಸಮಿತಿಗಳಿಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕೆಂಬ ಮನವಿಗಳು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಬಂದಿವೆ.
10 ಸಾವಿರ ಕೋಟಿ ದಾಟಲಿರುವ ಬಜೆಟ್: ಕಳೆದ ಎರಡು ಅವಧಿಗಳಲ್ಲಿ ವಾಸ್ತವಿಕ ಬಜೆಟ್ ನೀಡಲಾಗಿದ್ದರೂ ಬಜೆಟ್ ಗಾತ್ರ 10 ಸಾವಿರ ಕೋಟಿ ರೂ. ದಾಟಿತ್ತು. ಅದರಂತೆ ಪ್ರಸಕ್ತ ಸಾಲಿನ ಬಜೆಟ್‌ನ ಗಾತ್ರವೂ 10 ಸಾವಿರ ಕೋಟಿ ರೂ. ದಾಟುವ ಸಾಧ್ಯತೆಯಿದೆ.
ಈಗಾಗಲೇ ಅಧಿಕಾರಿಗಳು ಸಲ್ಲಿಸಿರುವ ಕರಡು ಬಜೆಟ್ ಗಾತ್ರ 9 ಸಾವಿರ ಕೋಟಿ ರೂ. ತಲುಪಿದೆ ಎನ್ನಲಾಗಿದ್ದು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯಿಂದ ಮತ್ತಷ್ಟು ಯೋಜನೆಗಳು ಸೇರ್ಪಡೆಯಾಗಲಿವೆ. ಆಗ ಬಜೆಟ್ ಗಾತ್ರ 10 ಸಾವಿರ ಕೋಟಿ ರೂ. ದಾಟಲಿದೆ ಎನ್ನುತ್ತವೆ ಉನ್ನತ ಮೂಲಗಳು.
ಫೆ.23ರಂದು ಬಜೆಟ್ ಮಂಡನೆ: ಬಿಬಿಎಂಪಿ ಅಧಿಕಾರಿಗಳು ಕರಡು ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಫೆ.23ರಂದು ಬಜೆಟ್ ಮಂಡಿಸಲು ಉದ್ದೇಶಿಸಲಾಗಿದೆ. ಅದರಂತೆ ಫೆ.26 ಮತ್ತು 27ರಂದು ಬಜೆಟ್ ಮೇಲೆ ಕೌನ್ಸಿಲ್‌ನಲ್ಲಿ ಚರ್ಚೆ ನಡೆಸಿ ಫೆ.28ರಂದು ಕೌನ್ಸಿನ್‌ನಿಂದ ಬಜೆಟ್‌ಗೆ ಅನುಮೋದನೆ ಪಡೆದು ಸರ್ಕಾರದ ಒಪ್ಪಿಗೆ ಕಳುಹಿಸಲು ಸಿದ್ಧತೆ ನಡೆದಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಮಂಡಿಸುತ್ತಿರುವ ಮೂರನೇ ಬಜೆಟ್ ಜನಪರ ಹಾಗೂ ವಾಸ್ತವಕ್ಕೆ ಹತ್ತಿರವಾಗಿರಲಿದೆ. ನಗರದ ಬಡ ಹಾಗೂ ಮಧ್ಯಮ ವರ್ಗದವರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಪಾಲಿಕೆಯ ಸಂಪನ್ಮೂಲಗಳಿಗೆ ಅನುಗುಣವಾಗಿ ಬಜೆಟ್ ಮಂಡಿಸಲಾಗುವುದು.-ಮಹದೇವ್, ಅಧ್ಯಕ್ಷರು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ