Advertisement

ಹೈಕೋರ್ಟ್‌ನಲ್ಲಿ ಕಾಗದರಹಿತ ವ್ಯವಸ್ಥೆಗೆ ಸಿದ್ಧತೆ

09:05 AM Jan 18, 2018 | |

ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ 2020ರ ವೇಳೆಗೆ “ಕಾಗದರಹಿತ’ ವ್ಯವಸ್ಥೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದರಂತೆ “ಸಮಗ್ರ ನ್ಯಾಯಾಲಯ ಪ್ರಕರಣ ನಿರ್ವಹಣಾ ವ್ಯವಸ್ಥೆ (ಐಸಿಎಂಎಸ್‌) ಜಾರಿಗೆ ತರಲು ತೀರ್ಮಾನಿಸಿದೆ.

Advertisement

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ
ಪೀಠಗಳಲ್ಲಿ ಐಸಿಎಂಎಸ್‌ ವ್ಯವಸ್ಥೆ ಜಾರಿಗೆ ತರಲು ಅಂದಾಜು 43.50 ಕೋಟಿ ರೂ. ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದೇ ವರ್ಷದಿಂದ ಆರಂಭಿಸಿ 2020ರ ವೇಳೆಗೆ ಕಾಗದ ರಹಿತ ವ್ಯವಸ್ಥೆ ಜಾರಿಗೆ ತರುವ ಗುರಿ ಇಟ್ಟುಕೊಳ್ಳಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ವಕೀಲರು ನ್ಯಾಯಾಧೀಶರ ಪೂರ್ವಾನುಮತಿ ಪಡೆದು ವಿಡಿಯೋ ಕಾನ್‌ರೆನ್ಸ್‌ ಮೂಲಕ ವಾದ ಮಂಡಿಸಬಹುದು. ಆನ್‌ ಲೈನ್‌ನಲ್ಲಿ ವಕಾಲತ್ತು ಹಾಕಬಹುದು. ಪ್ರಕರಣದ ಮಾಹಿತಿಯನ್ನು ಆನ್‌ ಲೈನ್‌ ಮೂಲಕ
ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ನ್ಯಾಯಾಲಯದ ಕಲಾಪಗಳು ಕಾಗದರಹಿತ ಆಗಲಿವೆ ಎಂದು ಕಾನೂನು ಸಚಿವ ಟಿ.ಬಿ.
ಜಯಚಂದ್ರ ಮಾಧ್ಯಮದವರಿಗೆ ತಿಳಿಸಿದರು. 

“ಮುಖ್ಯಮಂತ್ರಿ ಅನಿಲಭಾಗ್ಯ’ ಯೋಜನೆಯಡಿ ಜಿಲ್ಲಾ ಖನಿಜ ನಿಧಿಯ 36 ಕೋಟಿ ರೂ.ಹಣದಲ್ಲಿ ಬಳ್ಳಾರಿ ಜಿಲ್ಲೆಯ ಅಡುಗೆ ಅನಿಲ ಸಂಪರ್ಕ ಇಲ್ಲದ 89 ಸಾವಿರ ಬಿಪಿಎಲ್‌ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ, ಗ್ಯಾಸ್‌ ಸ್ಟೌ ನೀಡಲು ಒಪ್ಪಿಗೆ ನೀಡಲಾಯಿತು. ಕರ್ನಾಟಕ ಪಶು ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ 22 ಜನ ಪಶುವೈದ್ಯರ ಸೇವೆಯನ್ನು ವಿವಿಯಲ್ಲಿ
ವಿಲೀನಗೊಳಿಸಲು ಒಪ್ಪಿಗೆ ನೀಡಲಾಯಿತು. ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-1ರ ಕ್ರಮ ಸಂಖ್ಯೆ 86ರಲ್ಲಿ ಗೊಲ್ಲ  ಜಾತಿಯೊಂದಿಗೆ ಕಾಡುಗೊಲ್ಲ ಹಾಗೂ ಹಟ್ಟಿಗೊಲ್ಲ ಎಂಬ ಪರ್ಯಾಯ ಪದಗಳನ್ನು ಸೇರಿಸಲು, ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ವಿಧೇಯಕ-2016 ಹಾಗೂ ಕಲಬುರಗಿಯ ಖಾಜಾ ಬಂದೇನವಾಜ್‌ ವಿಶ್ವ ವಿದ್ಯಾಲಯ ವಿಧೇಯಕ-2017ಕ್ಕೆ ಅನುಮೋದನೆ ನೀಡಲಾಗಿದ್ದು, ವಿಧಾನಸಭೆಯಲ್ಲಿ ಮಂಡಿಸ ಲಾಗುವುದು. ಉಡುಪಿ ಜಿಲ್ಲೆ, ಕುಂದಾಪುರ
ತಾಲೂಕು ಯಡ್ತೆರೆ ಗ್ರಾಮದ ಸರ್ವೆ ನಂಬರ್‌ 264/1ರಲ್ಲಿ 8.32 ಎಕರೆ ಜಮೀನನ್ನು ಬಸ್‌ ನಿಲ್ದಾಣ ಮತ್ತು ಬಸ್‌ ಘಟಕ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಂಜೂರು ಮಾಡಲು ಒಪ್ಪಿಗೆ ಕೊಡಲಾಗಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ 300 ಹಾಸಿಗೆಗಳ ಸಾಮರ್ಥಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಬಿ.ಆರ್‌.ಶೆಟ್ಟಿಯವರಿಗೆ 25 ಎಕರೆ ಜಾಗ ನೀಡಲು ಅನುಮೋದನೆ. ಚಿತ್ರದುರ್ಗ
ಜಿಲ್ಲೆಯ ಹೊಳಲ್ಕೆರೆಯಲ್ಲಿನ 100 ಹಾಸಿಗೆಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿರುವ ತಾಲೂಕು ಮಟ್ಟದ ಆಸ್ಪತ್ರೆಯ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹಗಳನ್ನು 16.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ. 48 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಆ್ಯನಿಮೇಷನ್‌, ಗೇಮಿಂಗ್‌ ಆ್ಯಂಡ್‌ ಕಾಮಿಕ್‌ ಕ್ಷೇತ್ರದ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು. 

109 ಕೈದಿಗಳಿಗೆ ಬಿಡುಗಡೆ ಭಾಗ್ಯ ಕೇಂದ್ರ ಕಾರಾಗೃಹ, ಜಿಲ್ಲಾ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 105 ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿ 109 ಕೈದಿಗಳಿಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ
ಎಂದು ಜಯಚಂದ್ರ ತಿಳಿಸಿದರು. 

Advertisement

ಇತರೆ ನಿರ್ಣಯಗಳು
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಬೆಳಗುತ್ತಿ ಹೋಬಳಿ ನ್ಯಾಮತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸೇರಿದ ಚಿನ್ನಿಕಟ್ಟಿ ಗ್ರಾಮ
ಸರ್ವೆ ನಂಬರ್‌ 219 ಮತ್ತು 220ರಲ್ಲಿನ 15.23 ಎಕರೆ ಜಮೀನನ್ನು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸಂತ
ಸೇವಾಲಾಲ್‌ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನಕ್ಕೆ ಹಸ್ತಾಂತರ.

ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಲ್ಲಿ “ಎಂಡ್‌ -ಟು-ಎಂಡ್‌ ಆಟೋಮೇಷನ್‌ನ್ನು ಅಳವಡಿಸಲು ಮೆ: ಕೇರಳ ಸ್ಟೇಟ್‌ ಎಲೆಕ್ಟ್ರಾನಿಕ್‌ ಡೆವೆಲಪ್‌ಮೆಂಟ್‌ ಕಾರ್ಪೋರೇಷನ್‌ ಲಿಮಿಟೆಡ್‌ ಇವರಿಂದ ಸಿಸ್ಟಿಮ್‌ ಇಂಟಿಗ್ರೇಷನ್‌ನ್ನು 51.34 ಕೋಟಿ ರೂ. ಮೊತ್ತದಲ್ಲಿ ಖರೀದಿಗೆ ಅನುಮೋದನೆ.

ಮೈಸೂರು ನಗರ ಪೊಲೀಸ್‌ ಆಯುಕ್ತರ ಹೊಸ ಕಚೇರಿ ಕಟ್ಟಡದ ಹೆಚ್ಚುವರಿ ನಿರ್ಮಾಣ ಕಾಮಗಾರಿಗಳನ್ನು 410 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ.  

 ದಾವಣಗೆರೆ ಜಿಲ್ಲೆ ದಾವಣಗೆರೆ ನಗರ ವ್ಯಾಪ್ತಿಯ ರಾಜ್ಯ ಹೆದ್ದಾರಿ 76ರಲ್ಲಿ ಬರುವ ಬೀರೂರು-ಸಮ್ಮಸಗಿ ರಸ್ತೆಯ 109 ಕಿ.ಮೀ ದಿಂದ
115 ಕಿ.ಮೀ ರವರೆಗೆ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿಯ 33.63 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.

ಬೀರೇಶ್ವರ ಪಂಚ ಸಮಿತಿ (ರಿ), ಬ್ಯಾಡಗಿ ಇವರಿಗೆ ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಗುಮ್ಮನಹಳ್ಳಿ ಗ್ರಾಮದ ಸರ್ವೆ ನಂಬರ್‌ 25ರಲ್ಲಿ 3 ಎಕರೆ ಮುಫ‌ತ್‌ ಗಾಯರಾಣ ಜಮೀನನ್ನು ಕನಕ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರು ಮಾಡಲು ಒಪ್ಪಿಗೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಕ್ಕೆ 146.51 ಕೋಟಿ ರೂ. ಹಾಗೂ ಹಳಿಯಾಳ ಪಟ್ಟಣಕ್ಕೆ 76.20 ಕೋಟಿ ರೂ. ಅಂದಾಜು ಮೊತ್ತದ ಒಳಚರಂಡಿ ಯೋಜನೆಗೆ ಘಟನೋತ್ತರ ಅನುಮೋದನೆ.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶ್ರೀ ತ್ಯಾಗರಾಜ ಪತ್ತಿನ ಸಹಕಾರ ಸಂಘಕ್ಕೆ ಮಂಜೂರಾದ ಸಿ.ಎ ನಿವೇಶನದ ಗುತ್ತಿಗೆ ದರದ ಬಾಕಿ ಮೊತ್ತ ಮನ್ನಾ ಮಾಡಲು ಒಪ್ಪಿಗೆ. 

 ಕನಕಪುರ ತಾಲೂಕಿನ ಕೋಡಿಹಳ್ಳಿ ಸೇರಿದಂತೆ 290 ಜನಸವತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ 216
ಕೋಟಿ ರೂ. ಪರಿಷ್ಕೃತ ಮೊತ್ತಕ್ಕೆ ಒಪ್ಪಿಗೆ.

Advertisement

Udayavani is now on Telegram. Click here to join our channel and stay updated with the latest news.

Next