ಮಾಗಡಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಾಲೂಕು ಕಂದಾಯ ಇಲಾಖೆಯ ಉಪತಹಶೀಲ್ದಾರ್ ಕೆಂಪೇಗೌಡ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ತಹಶೀಲ್ದಾರ್ ಎನ್.ರಮೇಶ್ ಆ.15ರ ಬೆಳಗ್ಗೆ 8 ಗಂಟೆಗೆ ನೆರವೇರಿಸಿ, ಸ್ವಾತಂತ್ರ್ಯದ ಸಂದೇಶ ನೀಡಿಲಿದ್ದಾರೆ. ಶಾಸಕ ಎ.ಮಂಜು ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಕನ್ನಡ ಪರ, ಜನಪರ ಹಾಗೂ ರೈತ ಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೆಚ್ಚುನ ಸಂಖ್ಯೆಯಲ್ಲಿ ದೇಶ ಪ್ರೇಮಿಗಳು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿಗೆ ಸನ್ಮಾನಿಸಲು ತೀರ್ಮಾನಿಸಲಾಗಿದೆ. ಇಲಾಖಾವಾರು ಕಾರ್ಯಕ್ರಮಗಳ ಉಸ್ತವಾರಿಯನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ತಿಂಡಿ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ, ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಸಭೆಗೆ ಅಧಿಕಾರಿಗಳು ಗೈರು: ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಗೆ ಶಾಸಕ ಎ.ಮಂಜು ಮತ್ತು ತಹಶೀಲ್ದಾರ್ ಎನ್.ರಮೇಶ್ ಅವರೇ ಗೈರಾಗಿದ್ದರಿಂದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಚುನಾಯಿತ ಪ್ರತಿನಿಧಿಗಳು, ಜನಪರ, ರೈತಪರ, ಕನ್ನಡ ಪರ ಸಂಘಟನೆಗಳನ್ನು ಸಹ ಸಭೆಗೆ ಆಹ್ವಾನಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಪೂರ್ವಭಾವಿ ಸಭೆಗೆ ಗೈರಾಗಿದ್ದರು. ಅಲ್ಲದೆ, ಬಹುತೇಕ ಅಧಿಕಾರಿಗಳು ಗೈರಾಗಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದೇಶ್ವರ್, ತಾಲೂಕು ಪಂಚಾಯ್ತಿ ಇಒ ಟಿ.ಪ್ರವೀಣ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಆಶಾ, ವೆಂಕಟೇಶ್, ಬಿಸಿಎಂ ಇಲಾಖೆಯ ನಾಗರಾಜು, ಪಾರ್ವತಮ್ಮ, ಕಂದಾಯ ಇಲಾಖೆಯ ರೆವಿನ್ಯೂ ಅಧಿಕಾರಿ ಶಿವರುದ್ರಯ್ಯ, ಕೃಷಿ ಇಲಾಖೆ ಮಹೇಶ್, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ನಟರಾಜ್, ಸಿ.ಬಿ.ಅಶೋಕ್, ಜೆಡಿಎಸ್ ಮುಖಂಡ ಬಿ.ಆರ್.ಗುಡ್ಡೇಗೌಡ, ಮೀನುಗಾರಿಕೆ ಇಲಾಖೆಯ ಯೋಗೇಶ್, ದಲಿತ ಮುಖಂಡ ದೊಡ್ಡಿಲಕ್ಷ್ಮಣ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.