ದಾವಣಗೆರೆ: ಹಲವಾರು ನಂಬಲಾಗದ ಸಾಹಸ ಕಾರ್ಯದಿಂದ ಮನೆ ಮಾತಾಗಿರುವ ಇಂಡಿಯ-ಟಿಬೆಟ್ ಬಾರ್ಡರ್ ಪೊಲೀಸ್ ಪೋರ್ಸ್ (ಐಟಿಬಿಟಿಎಫ್) ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹರಿಹರ ಮೂಲದ ಮಂಜುಸಿಂಗ್ ಕುಠಿಯಾಲ್ ಈಗ ಗಿನ್ನಿಸ್ ದಾಖಲೆಗೆ ಸೇರ ಬಯಸುವ ಉದ್ದೇಶದಿಂದ ಸಾಹಸ ಪ್ರರ್ದಶನಕ್ಕೆ ಮುಂದಾಗಿದ್ದಾರೆ.
2015ರ ಫೆ. 23 ರಂದು ದಾವಣಗೆರೆಯ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ 1,500 ಟ್ಯೂಬ್‌ಲೈಟ್‌ಗಳನ್ನು ಎದೆಯಿಂದ ಪುಡಿ ಮಾಡಿದ್ದಲ್ಲದೆ, ಎದೆ ಮೇಲೆ ಭಾರೀ ಗಾತ್ರದ ಕಲ್ಲನ್ನು ಹ್ಯಾಮರ್‌ನಿಂದ ತುಂಡು ಮಾಡಿದ್ದನ್ನು ತಡೆದುಕೊಂಡಿದ್ದರು. ಸಾಹಸ ಪ್ರರ್ದಶನದ ಮಂಜುಸಿಂಗ್ ಕಠಿಯಾಲ್ ಗಿನ್ನಿಸ್ ದಾಖಲೆ ಸೇರ್ಪಡೆಗೆ ನಂಬಲಿಕ್ಕೂ ಆಗದ ಸಾಹಸ ಪ್ರದರ್ಶನಕ್ಕೆ ಮುಂದಾಗಿರುವ ಬಗ್ಗೆ ಗುರುವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಇಂಡಿಯಾ-ಟಿಬೆಟ್ ಬಾರ್ಡರ್ ಪೊಲೀಸ್ ಪೋಸ್(ಐಟಿಬಿಟಿಎಫ್) ಅರೆ ಸೈನಿಕ ಪಡೆಯಲ್ಲಿ ಎಎಸ್‌ಐ ಆಗಿರುವ ತಾವು ಕೆಲವೇ ದಿನಗಳಲ್ಲಿ ನಿವೃತ್ತಿಯಾಗಲಿದ್ದೇನೆ. ಅದಕ್ಕೂ ಮುನ್ನ ನಂಬಲಾಗದ ಸಾಹಸ ಪ್ರದರ್ಶಿಸುವ ಉದ್ದೇಶ ಹೊಂದಿದ್ದೇನೆ. ಗಿನ್ನಿಸ್ ದಾಖಲೆ ಸಾಹಸ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.
ಗಿನ್ನಿಸ್ ದಾಖಲೆ ಮಾಡಿಯೇ ತೀರುತ್ತೇನೆ. ಆದರೆ, ಅದಕ್ಕೆ ಆಗುವ ಖರ್ಚು ಸುಮಾರು 5 ಲಕ್ಷ ರೂ. ಭರಿಸುವ ಸ್ಥಿತಿಯಲ್ಲಿ ಇಲ್ಲ. ಯಾರಾದರೂ ಪ್ರಾಯೋಜಕರು ಮುಂದೆ ಬಂದಲ್ಲಿ 2-3 ತಿಂಗಳಲ್ಲಿ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಹಸ ಪ್ರದರ್ಶಿಸುವೆ ಎಂದು ತಿಳಿಸಿದರು.
ಬರಿಗಾಲಿನಿಂದ ಓಡುತ್ತಾ ಎದೆಯಿಂದ ಒಂದೇ ಬಾರಿಗೆ 3 ಸಾವಿರ ಟ್ಯೂಬ್‌ಲೈಟ್ ಒಡೆಯುವ, ಹೊಟ್ಟೆಯ ಮೇಲೆ 50 ರಿಂದ 100 ಕೆಜಿ ತೂಕದ 121 ಕಲ್ಲುಗಳನ್ನು ಹ್ಯಾಮರ್‌ನಿಂದ ತುಂಡು ಮಾಡಿಸುವ, 5 ರಿಂದ 7 ಮಿಲಿ ಮೀಟರ್‌ನ 500 ಅಥವಾ ಅದಕ್ಕಿಂತಲೂ ಹೆಚ್ಚಿನ ಮಾರ್ಬಲ್ ಕಲ್ಲುಗಳನ್ನು ಒಂದೇ ಸಾರಿ ಒಡೆಯುವ, 6 ಇಂಚಿನ 121 ಮಂಜುಗಡ್ಡೆಯನ್ನು ಒಂದೇ ಸಾರಿಗೆ ತುಂಡು ಮಾಡುವ,
-ಚೌಕಾಕಾರದ 100 ಗ್ಲಾಸ್‌ಗಳನ್ನು ಮುಷ್ಠಿಯಿಂದ ಪಂಚ್ ಮಾಡುವುದು ಒಳಗೊಂಡಂತೆ 13 ಕ್ಕೂ ಹೆಚ್ಚು ಸಾಹಸ ಪ್ರದರ್ಶನ ನೀಡಲಿದ್ದೇನೆ ಎಂದು ತಿಳಿಸಿದರು. ತಮ್ಮ ಈ ಸಾಹಸ ಪ್ರರ್ದಶನಕ್ಕೆ ಪ್ರಾಯೋಜಕತ್ವ, ಸಹಕಾರ, ಸಹಾಯ ಮಾಡುವರು ಮೊ: 91483-76257ರ ಮೂಲಕ ಸಂಪರ್ಕಿಸುವಂತೆ ಮನವಿ ಮಾಡಿದರು. ವರದಿಗಾರರ ಕೂಟದ ಅಧ್ಯಕ್ಷ ಬಸವರಾಜ್ ದೊಡ್ಮನಿ ಇದ್ದರು.