ಭಾಲ್ಕಿ: ತಾಲೂಕಿನಲ್ಲಿ ಮುಕ್ತವಾಗಿ, ಪಾರದರ್ಶಕತೆಯಿಂದ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ದಯಾನಂದ ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ರವಿವಾರ ಮಾಧ್ಯಮದವರೊಂದಿಗಿನ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ 26 ರಂದು ತಾಲೂಕು ಆಡಳಿತದ ಸೇವೆಗೆ ಸೇರಿದ ಪ್ರಥಮ ದಿನವೇ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸೇರಿದಂತೆ ವಿವಿಧ ನೌಕರ ವರ್ಗದವರ
ಸಭೆ ನಡೆಸಲಾಗಿದೆ. ಅವರೆಲ್ಲರಿಗೂ ಚುನಾವಣೆಯಲ್ಲಿ ನಡೆದುಕೊಳ್ಳಬೇಕಾದ ಶಿಸ್ತಿನ ಬಗ್ಗೆ ತಿಳಿಸಿಕೊಡಲಾಗಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ನೌಕರರು ಯಾವುದೇ ಪಕ್ಷದ ಬಗ್ಗೆ ಮತ್ತು ಚುನಾವಣೆ ಅಭ್ಯರ್ಥಿಗಳ ಬಗ್ಗೆ ಮಾತನಾಡಬಾರದು ಎಂದು ತಿಳಿಹೇಳಲಾಗಿದೆ. ಬೂತ್ ಮಟ್ಟದ ಅರಿವು ಮೂಡಿಸುವ ಗುಂಪುಗಳನ್ನು (ಬ್ಲಾಗ್- ಬೂಥ್ ಲೇವಲ್ ಅವೇರ್‌ನೆಸ್ ಗ್ರೂಪ್) ರಚಿಸಿ, ತಾಲೂಕಿನ ಎಲ್ಲಾ 256 ಮತಗಟ್ಟೆಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಜರುಗುತ್ತಲಿದೆ ಎಂದರು.
ಇಂದಿನಿಂದ ಏ.14ರ ವರೆಗೆ ಮತದಾರರ ಮಿಂಚಿನ ನೋಂದಣಿ ಅಭಿಯಾನ ನಡೆಸಲಾಗುತ್ತಿದ್ದು, ಮತದಾನಕ್ಕೆ ಅರ್ಹರಾದ ತಾಲೂಕಿನ ಪ್ರತಿಯೊಬ್ಬ ನಾಗರಿಕರೂ ಮತ ಚಲಾಯಿಸಲು ಅವಕಾಶ ನೀಡುವಂತೆ ಜನವರಿ 1-2018ರ ವರೆಗೆ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಯುದೊಪಾದಿಯಲ್ಲಿ ಬಿಎಲ್‌ಒಗಳು ಕಾರ್ಯ ನಿರ್ವಹಿಸುತ್ತಲಿದ್ದಾರೆ ಎಂದರು.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪ್ರತಿಶತ ಮತದಾನ ಆಗುವ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಲಿದ್ದೇವೆ. ತಾಲೂಕಿನ ಪ್ರತಿ ಮಹಿಳೆಯೂ ಮತ ಚಲಾಯಿಸುವ ಉದ್ದೇಶದಿಂದ, ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳಲ್ಲಿ ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಮತಗಟ್ಟೆಗಳಲ್ಲಿ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಇರುವರು. ಅಲ್ಲದೇ ತಾಲೂಕಿನ ಗ್ರಾಮೀಣ ಭಾಗದ ಭಾಗ್ಯನಗರ ಮತ್ತು ಪಟ್ಟಣದ ಲೋಕೋಪಯೋಗಿ ಇಲಾಖೆಯ ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳಾಗಿ ನಿರ್ಮಿಸಲಾಗಿದೆ. ಅಂಗವಿಕಲ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ವ್ಹೀಲ್ ಚೇರ್ ಒದಗಿಸಲಾಗುವುದು.
ಅವರಿಗೆ ಸಹಾಯಕರಾಗಿ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ಒಟ್ಟಿನಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು. ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ, ಪೊಲೀಸ್ ಇಲಾಖೆ ಮತ್ತು ಎಕ್ಸಾಯಿಜ್ ಇಲಾಖೆಗಳ ಸಭೆ ಕರೆದು ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಮತಗಟ್ಟೆಯಲ್ಲಿ ಯಾವುದೇ ತರಹದ ಗೊಂದಲ ಸೃಷ್ಠಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮತಯಂತ್ರ ಮತ್ತು ಮತದಾನ ಖಾತ್ರಿಯಂತ್ರಗಳ ಬಗ್ಗೆ ಅನುಮಾನ ಪಟ್ಟವರಿಗೆ ಎಲ್ಲರ ಸಮ್ಮುಖದಲ್ಲಿ ಮತ ಚಲಾಯಿಸಲು ಅನುವು ಮಾಡಿಕೊಟ್ಟು, ಅವರು ಪಟ್ಟ ಅನುಮಾನ ಸುಳ್ಳಾದರೆ ಅವರಿಗೆ ಕಾನೂನು ಪ್ರಕಾರ ತಕ್ಷಣವೇ ಜೈಲು ಶಿಕ್ಷೆ ನೀಡಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಚುನಾವಣಾಧಿಕಾರಿ ಶ್ರೀಧರ ಪಿ., ಎಕ್ಸಾಯಿಜ್ ಇನಸ್ಪೆಕ್ಟರ್ ಮಮತಾ ಬಿ.ವಿ., ಎಆರ್‌ಒ ಬಿ.ಎಸ್.ಪಾಟೀಲ ಇದ್ದರು.