ಮೈಸೂರು: ದಸರೆಯ ವಿಶ್ವವಿಖ್ಯಾತಿಗೆ ಅಪಚಾರ ವಾಗದಂತೆ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಸರಾವನ್ನು ಯಶಸ್ವಿಗೊಳಿ ಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ದಸರಾ ಕಾರ್ಯಕಾರಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ದಸರಾ ಆಚರಿಸದೆ, ಈ ಬಾರಿ ವಿಭಿನ್ನವಾಗಿ ದಸರಾ ಆಚರಿಸಲು ಕಾರ್ಯಕ್ರಮ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆಯವರು ಆರಂಭಿಸಿದ ಗ್ರಾಮೀಣ ದಸರಾ ಸೇರಿ ಬಹುಪಾಲು ಕಾರ್ಯಕ್ರಮಗಳನ್ನು ಮುಂದು ವರಿಸಲಾಗುವುದು. ಮಹಿಳಾ ದಸರಾದಲ್ಲಿ ಈ ಬಾರಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾರ್ಯಕ್ರಮ ಆಯೋಜಿಸ ಲಾಗುವುದು. ಪ್ರತಿ ವರ್ಷ ತಲೆದೋರುವ ದಸರಾ ಪಾಸ್ ಗೊಂದಲವನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
“ಜಿಲ್ಲಾ ಉಸ್ತುವಾರಿ ಸಚಿವನಾಗಿ ಪಕ್ಷಾತೀತ ವಾಗಿ ಎಲ್ಲ ನಾಯಕರಿಗೂ ನಾನೇ ಖುದ್ದಾಗಿ ಫಲ, ತಾಂಬೂಲ ದೊಂದಿಗೆ ಹೋಗಿ ಆಮಂ ತ್ರಣ ನೀಡುತ್ತೇನೆ. ಜತೆಗೆ, ಎಲ್ಲ ಸ್ವಾಮೀಜಿಗಳು, ಮೌಲ್ವಿಗಳು, ಪಾದ್ರಿಗಳನ್ನೂ ಭೇಟಿ ಮಾಡಿ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾ ಗುವಂತೆ ಆಹ್ವಾನಿಸುತ್ತೇನೆ. ದಸರೆಯ ಹತ್ತು ದಿನಗಳು ಕೂಡ ರಾಜವಂಶಸ್ಥರು ಸಕ್ರಿಯವಾಗಿ ಭಾಗವಹಿಸುವಂತೆ ಮನವೊಲಿಸಲಾಗುವುದು. ಜತೆಗೆ, ದಸರಾ ಸಂದರ್ಭ ದಲ್ಲೇ ಮೈಸೂರು ರಾಜಮನೆತನದ ಕೊನೆಯ ಅರಸು ಜಯಚಾಮರಾಜ ಒಡೆಯರ್ ಅವರ ಜನ್ಮ ಶತ ಮಾನೋತ್ಸವ ಕಾರ್ಯಕ್ರಮವನ್ನೂ ಆಯೋಜಿಸ ಲಾಗುವುದು’ ಎಂದು ತಿಳಿಸಿದರು.
ರಾಮದಾಸ್ ಗೈರು: ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯಿಂದ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ದೂರ ಉಳಿದಿದ್ದರು. ಅದರಲ್ಲೂ, ಶಾಸಕ ಎಸ್.ಎ. ರಾಮದಾಸ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ನಗರ ದಲ್ಲೇ ಇದ್ದರೂ ರಾಮದಾಸ್ ಸಭೆಗೆ ಬರಲಿಲ್ಲ. ವಿ.ಸೋಮಣ್ಣ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ದಿಂದಲೂ ದೂರ ಉಳಿದಿದ್ದರು. ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದರಿಂದ ಅಸಮಾಧಾನಗೊಂಡಿರುವ ಅವರು, ಗಜಪಯಣದ ದಿನ ಸಚಿವರು ಬರುವುದಕ್ಕೂ ಮುನ್ನವೇ ಗಜಪಡೆಗೆ ಪೂಜೆ ಸಲ್ಲಿಸಿ, ಚಾಲನೆ ನೀಡಿದ್ದರು. ಬಿಜೆಪಿ ಸರ್ಕಾರದಲ್ಲಿ ಯಾರ್ಯಾರೋ ಬಂದು ದಸರಾ ಮಾಡಿ ಹೋಗುತ್ತಾರೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.