Advertisement
ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಚೇತನ್‌ಸಿಂಗ್ ರಾಥೋಡ್ ಅವರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು. ಮತ ಎಣಿಕೆ ಕೇಂದ್ರದಲ್ಲಿ 8 ಎಣಿಕೆ ಕೊಠಡಿಗಳು, ಜಿಲ್ಲಾ ಚುನಾವಣಾಧಿಕಾರಿ ಕೊಠಡಿಯಲ್ಲಿ ಅಂಚೆ ಮತಗಳು ಹಾಗೂ ಸೇವಾ ಮತಗಳ ಎಣಿಕೆಯ ವ್ಯವಸ್ಥೆ, ಮಾಧ್ಯಮ ಕೇಂದ್ರ, ಎಣಿಕೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಮತ್ತಿತರ ಸಿದ್ಧತೆಗಳನ್ನು ಪರಿವೀಕ್ಷಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
Related Articles
Advertisement
ಅರೆಸೇನಾಪಡೆ ನಿಯೋಜನೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್‌ಸಿಂಗ್ ರಾಥೋಡ್ ಮಾತನಾಡಿ, ಮೇ 23ರಂದು ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿ (ಸ್ಟ್ರಾಂಗ್ ರೂಂ), ಮತಯಂತ್ರ (ಇವಿಎಂ)ಗಳನ್ನು ಭದ್ರತಾ ಕೊಠಡಿಯಿಂದ ಎಣಿಕೆ ಕೊಠಡಿಗಳಿಗೆ ಸಾಗಣೆ ಮಾಡಲು ಪ್ಯಾರಾ ಮಿಲಿಟರಿ ಪಡೆಗಳ ಯೋಧರನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ನಿಷೇಧಾಜ್ಞೆ ಜಾರಿ: ಮೇ23 ರಂದು ಜಿಲ್ಲಾದ್ಯಂತ ಬಂದೋಬಸ್ತ್ಗೆ 1200 ಸಿಬ್ಬಂದಿಗಳ ನೇಮಕವಾಗಿದೆ. ಅಂದು ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ರಾಜಕೀಯ ಪ್ರೇರಿತವಾದ ಮೆರವಣಿಗೆಗಳು ನಡೆಯುವಂತಿಲ್ಲ. ಮದ್ಯ ಮಾರಾಟ, ಮದ್ಯಪಾನ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜೆಂಟರು, ಇನ್ನಿತರ ಸದಸ್ಯರುಗಳನ್ನು ಡೇರಿ ಸರ್ಕಲ್ನಿಂದ ಮತಗಳ ಎಣಿಕೆ ಕೇಂದ್ರದ ಒಳಗಡೆ ಬರುವವರೆಗೆ 3 ಕಡೆಯಲ್ಲಿ ಅರೆ ಸೇನಾಪಡೆಗಳ ನೇತೃತ್ವದಲ್ಲಿ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದ ಜಿಲ್ಲಾ ರಕ್ಷಣಾಧಿಕಾರಿಗಳು, ಜಿಲ್ಲೆಯಲ್ಲಿ 123 ಪ್ರದೇಶಗಳನ್ನು ಸೂಕ್ಷ್ಮ ಸ್ಥಳಗಳೆಂದು ಗುರುತಿಸಿದ್ದು ಅಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗುವುದು . ಈ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಬಿ.ಎನ್. ನಂದಿನಿ, ಎಲ್ಲಾ ತಾಲೂಕುಗಳ ತಹಶೀಲ್ದಾರರು ಈ ಸಂದರ್ಭದಲ್ಲಿ ಹಾಜರಿದ್ದರು.