Advertisement
ಕಾಲು ಗಂಟೆಯಿಂದ ಮೊಸರು ಕಡೆಯುವ ಮೆಷಿನ್ ತಿರುಗುತ್ತಿದ್ದರೂ ಬೆಣ್ಣೆ ಬಂದಿರಲಿಲ್ಲ. ಫ್ರಿಡ್ಜ್ನಿಂದ ತೆಗೆದಿಡಲು ಮರೆತಿದ್ದ ಮೊಸರು, ಬೆಣ್ಣೆಯನ್ನು ಹೊರಗೆ ಹೋಗಲೇ ಬಿಡುತ್ತಿರಲಿಲ್ಲ. ಈ ಬೆಣ್ಣೆ ಕಡೆಯೋದೂ ಬೇಡ, ತುಪ್ಪ ಮಾಡೋದೂ ಬೇಡ ಎಂದು ಬೈಯ್ದುಕೊಂಡರೂ, ಕೈ ಬೆಣ್ಣೆಯ ಮೆಷಿನ್‌ನ ಸ್ವಿಚ್‌ಅನ್ನು ಮತ್ತೂಮ್ಮೆ ಒತ್ತಿತ್ತು.
ಅದಾಗಲೇ ಅರವತ್ತೈದು ದಾಟಿದ ಸೊಸೆಗೆ ಈ ಜವಾಬ್ದಾರಿ ಹೊರುವ ಅನುಭವವಿನ್ನೂ ಬಂದಿಲ್ಲ ಎಂಬುದೇ ಅವಳ ಯೋಚನೆ. ಯಾವಾಗಲಾದರೊಮ್ಮೆ ತನ್ನ ಆರೋಗ್ಯ ಕೈ ಕೊಟ್ಟಾಗ ಅವಳು ಕಡೆದಿದ್ದ ಬೆಣ್ಣೆಯ ಗಾತ್ರ ಕಡಿಮೆಯೇ. ಮಜ್ಜಿಗೆ ಮಂದವಿಲ್ಲ, ತುಂಬ ನೀರು ಹಾಕಿ¨ªಾಳೆ ಎಂದೆಲ್ಲ ಮಂಜು ಕಣ್ಣುಗಳೂ ಅಳೆಯುತ್ತಿರುತ್ತವೆ. ತಾನಿಲ್ಲದಿದ್ದರೆ ಮನೆಯವರೆಂದೂ ಬೆಣ್ಣೆ, ತುಪ್ಪದ ಮುಖ ಕಾಣರು ಎಂಬುದು ಅವಳ ನಂಬಿಕೆ. ಹಾಗಾಗಿಯೇ ಅವಳು ಮಾಡುವ ಈ ಕೆಲಸಕ್ಕೆ ಅಷ್ಟು ಮರ್ಯಾದೆಯನ್ನು ಅವಳೇ ಕೊಟ್ಟುಕೊಳ್ಳುವುದು. ಬೆಣ್ಣೆ ಬರಲು ಬೇಕಾಗುವುದು ಹಾಲಲ್ಲ, ಮೊಸರಲ್ಲ, ಕೆನೆಯೂ ಅಲ್ಲ, ಬೇಕಾಗಿದ್ದು ಕಡೆಯುವ ಹದ, ಅದನ್ನರಿತ ತನ್ನ ಕೈ, ಎಂಬುದನ್ನವಳು ಎಲ್ಲಿಯೂ ಸ್ವರವೆತ್ತಿ ಹೇಳಬಲ್ಲಳು. ಅವಳ ಕೈಯ ಚರ್ಮದ ಸುಕ್ಕುಗಳಲ್ಲಷ್ಟು ಅನುಭವದ ಗೆರೆಗಳು ಮೂಡಿದ್ದು ಸುಳ್ಳೇ ಮತ್ತೆ!
Related Articles
ಇನ್ನೂ ಹಕ್ಕಿಗಳೇಳದ ಹೊತ್ತಿಗೆ ಏಳಬೇಕಿತ್ತಾಗ “ಬೆಣ್ಣೆ ಕಡೆಯುವುದು’ ಎಂಬ ಮಧುರ ಕೆಲಸವೊಂದನ್ನು ಮಾಡಲು. ಕೊಂಚ ಬಿಸಿಲೇರಿ ತಡವಾದರೆ, “ಮೊಸರೊಡೆದರೆ ಬೆಣ್ಣೆ ಬಾರದು ರನ್ನವೇ’ ಎನ್ನುವ ಹಾಡೇ ಗತಿ. ಚಳಿಯಿರಲಿ, ಮಳೆಯಿರಲಿ, ಬಿರು ಬೇಸಿಗೆಯ ಉರಿಯಿರಲಿ; ಇದೊಂದು ಅವಳ ಪ್ರೀತಿಯ ನಿತ್ಯ ನಿರಂತರ ಕೆಲಸ. ಆಗಾಗ ಕಡಗೋಲನ್ನೆತ್ತಿ ನೋಡಿ ತಾನು ಗುಣುಗುಣಿಸುವ ಹಾಡನ್ನೊಮ್ಮೆ ನಿಲ್ಲಿಸಿ ಇಣುಕಿದಾಗ, ಬೆಣ್ಣೆ ಬಂದಿದೆಯೇ ಎಂಬ ಪರೀಕ್ಷೆಗೊಳಗಾಗುತ್ತಿದ್ದ ಮೊಸರು, ಬಂದಿದ್ದರೂ ಹದ ಸರಿಯಿದೆಯೇ ಎಂದು ನೋಡುವ ಕೊಸರು. ಇಷ್ಟೆಲ್ಲ ಆದ ಮೇಲೆ ಬೆಣ್ಣೆ ತೆಗೆಯುವುದು ಕೂಡ ಸುಲಭದ್ದಲ್ಲ. ತಣ್ಣೀರು ತುಂಬಿದೊಂದು ಪಾತ್ರೆ, ಬಿಸಿನೀರು ತುಂಬಿದ್ದು ಇನ್ನೊಂದು. ಕೈಯನ್ನು ಬಿಸಿ ನೀರಿಗೆ ಅದ್ದಿಕೊಂಡರೆ ಬೆಣ್ಣೆ ಕೈಗೆ ಅಂಟದು. ಬೆಣ್ಣೆ ತೆಗೆದು ತಣ್ಣಗಿನ ನೀರಿಗೆ ಹಾಕಿದರೆ ಬೆಣ್ಣೆ ಒಂದಕ್ಕೊಂದು ಬೆಸೆದು ಮುದ್ದೆಯ ಆಕಾರಕ್ಕೆ ಬರುವುದು. ಉಳಿದ ಮಜ್ಜಿಗೆಯನ್ನು ಮತ್ತೆ ಮತ್ತೆ ಕಡೆದು ಶೋಧಿಸಿ ಉಳಿದ ಬೆಣ್ಣೆಯನ್ನು ಹೊರತೆಗೆಯುವುದು. ಅಷ್ಟು ಹೊತ್ತು ಮಜ್ಜಿಗೆಯೊಳಗೆ ಇದ್ದ ಬೆಣ್ಣೆಯಲ್ಲಿ ಮಜ್ಜಿಗೆಯ ಅಂಶ ಉಳಿಯದಂತೆ ತಣ್ಣೀರಿನಲ್ಲಿ ತೊಳೆದು ಶುದ್ಧಗೊಳಿಸಿ ನೀರಿನ ಪಾತ್ರೆಯಲ್ಲಿ ಹಾಕಿಡುವುದು. ಮಜ್ಜಿಗೆಯನ್ನು ಇನ್ನೊಂದು ಭರಣಿಗೆ ವರ್ಗಾಯಿಸಿ ಮುಚ್ಚಿಟ್ಟರೆ ಬೆಣ್ಣೆ ತೆಗೆಯುವುದು ಎಂಬ ಕೆಲಸ ಸಮರ್ಪಕವಾಗಿ ಮುಗಿದಂತೆ.
Advertisement
ಅಮ್ಮ ಕಂಡುಕೊಂಡ ಕ್ರಮಬೆಣ್ಣೆ ತೆಗೆಯುವುದನ್ನು ಕೊನೆಯ ಉಸಿರಿನವರೆಗೆ ಧ್ಯಾನದಂತೆ ಮಾಡಿಕೊಂಡು ಬಂದ ಅಜ್ಜಿ ಈ ಒರಟೊರಟಾದ ಮೆಷೀನನ್ನು ಯಾವತ್ತೂ ಒಪ್ಪಿಕೊಳ್ಳಲಾರಳು. ಅಜ್ಜಿಯ ಕ್ರಮವನ್ನೇ ಹಳೆಯದೆಂದು ಸಾಧಿಸಹೊರಟ ನಂತರದ ತಲೆಮಾರಾದ ನನ್ನಮ್ಮನದು ಇನ್ನೊಂದು ವಿಧ. ಬೆಣ್ಣೆ ತೆಗೆಯಲು ಅಷ್ಟೆಲ್ಲ ಕಷ್ಟ ಪಡಬೇಕಾ? ಅದೂ ದಿನನಿತ್ಯ ಬೇಗ ಎದ್ದು ! ಊಹುಂ! ಎಲ್ಲವನ್ನೂ ಸುಲಭಗೊಳಿಸುವ ಹೊಸ್ತಿಲಲ್ಲಿ ನಿಂತವಳು ತನ್ನದೇ ಸರಿ ಎಂದಳು. ಪೇಟೆಯ ಮನೆ, ಪ್ಯಾಕೆಟ್ ಹಾಲು… ಬಂದೀತೆಷ್ಟು ಬೆಣ್ಣೆ? ಅದನ್ನು ದಿನಾ ಬೆಳಗಾಗೆದ್ದು ಕಡೆಯುವುದು ಎಂಬ ಶಿಕ್ಷೆಗೆ ತಾನೂ ಒಳಗಾಗಳು. ಹಾಗೆಂದು ಅದನ್ನೂ ಸುಮ್ಮನೆ ಬಿಡಳು. ದಿನನಿತ್ಯವೂ ಕೆನೆಯನ್ನಷ್ಟೇ ಬಾಟಲಿಗೆ ತುಂಬಿ ಕೊನೆಗೊಂದಿಷ್ಟು ಮೊಸರ ಹನಿ ಬೆರೆಸಿಬಿಡುವುದು. ಬಾಟಲನ್ನು ಬೆಣ್ಣೆ ಬರುವವರೆಗೆ ಕುಲುಕಿ ಇಡುವುದು. ಹೀಗೆ, ಬೆಣ್ಣೆ ತೆಗೆಯುವ ಮೆಷೀನ್ ಬರುವ ಮೊದಲೇ ಬೆಣ್ಣೆ ತೆಗೆಯುವುದನ್ನು ಸುಲಭವಾಗಿಸಿಕೊಂಡವಳು ನನ್ನಮ್ಮ, ಅದೂ ಸ್ವಲ್ಪವೂ ತ್ರಾಸವಿಲ್ಲದೇ. ಅದೇನು ಬ್ರಹ್ಮವಿದ್ಯೆಯಾಗಿರಲಿಲ್ಲ ಆಕೆಗೆ. ಹಾಲಿನ ಕೆನೆಯನ್ನು, ಉಳಿದ ಮೊಸರನ್ನು ಒಂದು ಹಾರ್ಲಿಕ್ಸ್ ಬಾಟಲಿಗೆ ತುಂಬಿಡುವುದು ಮರುದಿನ ಬೆಳಗ್ಗೆ ಅಪ್ಪ ಹಲ್ಲುಜ್ಜಿ ಹೊರ ಬರುವುದನ್ನೇ ಕಾಯುತ್ತ ಅಪ್ಪನ ಕೈಗೆ ಬಾಟಲಿಯನ್ನು ಕೊಟ್ಟುಬಿಡುವುದು… ಇಷ್ಟೇ…ಸಿಂಪಲ್… ಅಪ್ಪ ಒಂದು ಕೈಯಲ್ಲಿ ಆ ಬಾಟಲಿಯನ್ನು ಕುಲುಕುತ್ತ ಇನ್ನೊಂದರಲ್ಲಿ ಪತ್ರಿಕೆಯೋ, ಪುಸ್ತಕವೋ ಹಿಡಿದು ಓದು ಮುಂದುವರಿಸುತ್ತಿದ್ದರು. ಆಗಾಗ ಅಮ್ಮನೇ ಬೆಣ್ಣೆ ಬಾಟಲಿಯ ಕಡೆಗೆ ನೋಡಿ ಅದು ಆಗುತ್ತಿದ್ದಂತೆ, “ಇನ್ನೊಂಚೂರು ಅಷ್ಟೇ. ನಾನೇ ಮಾಡ್ಕೊಳ್ತೀನಿ’ ಎಂದೋ, “ಅಯ್ಯೋ ಆಗಲೇ ಆಗಿದೆ, ಕೊಡಿ ಇತ್ಲಾಗಿ’ ಎಂದೋ ಅದನ್ನು ತನ್ನ ಕೈವಶ ಮಾಡಿಕೊಳ್ಳುತ್ತಿದ್ದಳು. ಸುಮಾರಾಗಿ ಉಂಡೆಯಂತೆಯೇ ಆಗಿರುವ ಬೆಣ್ಣೆಯನ್ನು ಪಾತ್ರೆಗೆ ವರ್ಗಾಯಿಸಿ ತೊಳೆದು ನೀರು ತುಂಬಿದ ಪಾತ್ರೆಗೆ ಹಾಕಿಡುವುದಷ್ಟೇ ಕೆಲಸ. ಮತ್ತೆ ಹಳ್ಳಿಯ ಮನೆಗೆ ಬಂದ ನಾನು, ಅತ್ತ ಅಜ್ಜಿಯ ಅನುಭವವೂ ಅಲ್ಲ, ಇತ್ತ ಅಮ್ಮನ ಸುಲಭ ವಿದ್ಯೆಯೂ ಅಲ್ಲ; ಕೈಗಳಿಗೆ ಕೆಲಸ ಕಡಿಮೆ ಮಾಡುವ ಯಂತ್ರ, ಅದನ್ನು ಚಲಾಯಿಸಲು ವಿದ್ಯುತ್… ಹೀಗೆ ಬೆಣ್ಣೆ ತೆಗೆಯುವುದನ್ನು ಆಧುನೀಕರಣಗೊಳಿಸಿದರೂ ಬೆಣ್ಣೆ ತನ್ನಿಂದ ತಾನೇ ಹೊರಬರದು ಬಿಡಿ. ಅದೇ ಮೊಸರು, ಅದೇ ಮೃದು ಮಧುರ ಪರಿಮಳದ ಬೆಣ್ಣೆ. ಅದೇ ಬಿಸಿನೀರು, ತಣ್ಣೀರಿನ ಸಮೀಕರಣ. ಬೆಣ್ಣೆ ಎಂಬ ದೇವರು ಪ್ರತ್ಯಕ್ಷವಾಗಬೇಕಾದರೆ ಅಷ್ಟೇ ತಾಳ್ಮೆಯ ಪೂಜೆ ಅಗತ್ಯ. ಈ ಪೂಜಾ ವಿಧಿಯ ನೆಪದಲ್ಲಿ ಅಜ್ಜಿ, ಅಮ್ಮ ಮತ್ತು ನಾನು, ನೀವೂ… ಕಾಸಿದ ಹಾಲಾದೆವು, ಹೆಪ್ಪಿಟ್ಟೊಡನೆ ಮೊಸರಾದೆವು, ಮಥನಕ್ಕೊಳಗಾಗಿ ಬೆಣ್ಣೆಯಾದೆವು, ಮತ್ತೆ ಕಾಸಿದರೆ ತುಪ್ಪವೂ… -ಅನಿತಾ ನರೇಶ ಮಂಚಿ