ರಾಯಚೂರು: ಕೊರೊನಾ ಎರಡನೇ ಅಲೆ ಪ್ರಭಾವ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಮೊದಲ ಅಲೆಯಿಂದ ಕಲಿಯದ ಪಾಠ 2ನೇ ಅಲೆ ಕಲಿಸಿದ್ದು, 3ನೇ ಅಲೆ ಸಮರ್ಥವಾಗಿ ಎದುರಿಸಲು ರಿಮ್ಸ್‌ನಲ್ಲಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಎರಡನೇ ಅಲೆಯಲ್ಲಿ ರೋಗಿಗಳು ಆಕ್ಸಿಜನ್, ಬೆಡ್, ವೆಂಟಿಲೇಟರ್, ರೆಮ್‌ಡೆಸಿವಿಯರ್ ಇಂಜೆಕ್ಷನ್ ಸೇರಿದಂತೆ ಕೆಲವೊಂದು ಸೌಲಭ್ಯಗಳು ಸಿಗದೇ ಪರದಾಡಿದ್ದು ಸುಳ್ಳಲ್ಲ.
ಆದರೆ, ಖಾಸಗಿ ಆಸ್ಪತ್ರೆಗಳನ್ನು ಮೀರಿ ರಿಮ್ಸ್, ಒಪೆಕ್‌ನಲ್ಲಿ ಉತ್ತಮ ಸೇವೆ ನೀಡಲಾಯಿತು ಎಂದು ಜನರೇ ಹೇಳುತ್ತಿರುವುದು ವಿಶೇಷ. ಕೆಲವೊಂದು ಖಾಸಗಿ ಆಸ್ಪತ್ರೆಗಳು ಆಕ್ಸಿಜನ್ ಸಿಗದೆ ರಿಮ್ಸ್, ಒಪೆಕ್‌ಗೆ ರೋಗಿಗಳನ್ನು ಶಿಫಾರಸು ಮಾಡಿದ್ದು ಇದಕ್ಕೊಂದು ತಾಜಾ ನಿದರ್ಶನ. ಅದೆಲ್ಲ ಸದ್ಯಕ್ಕೆ ಮುಗಿದ ಕತೆಯಾಗಿದ್ದು, ಈಗ ಎಲ್ಲೆಡೆ ಮೂರನೇ ಅಲೆ ಭಯ ಸೃಷ್ಟಿಯಾಗಿದೆ. ಆದರೆ, ಎರಡನೇ ಅಲೆಗೆ ನಿರೀಕ್ಷಿತ ಮಟ್ಟದ ಸಿದ್ಧತೆ ಮಾಡಿಕೊಳ್ಳದೇ ಆರಂಭದಲ್ಲಿ ಕಂಗೆಟ್ಟಿದ್ದ ರಿಮ್ಸ್ ಆಡಳಿತ ಮಂಡಳಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದಂತೆ ಕಾಣುತ್ತದೆ.
ಸಾಕಷ್ಟು ವಿಚಾರದಲ್ಲಿ ಈಗಾಗಲೇ ಮುಂದಾಲೋಚನೆ ಮಾಡಿ ಮುಂದಡಿ ಇಟ್ಟಿದೆ. ಮಕ್ಕಳಿಗೆ ಪ್ರತ್ಯೇಕ ವಾರ್ಡ್: ತಜ್ಞರು ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ. ಅದರಲ್ಲೂ ಅಪೌಷ್ಟಿಕ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳಬಹುದು ಎಂಬ ಶಂಕೆಯಿದ್ದು, ಜಿಲ್ಲೆಯಲ್ಲಿ ಅಂಥ ಮಕ್ಕಳ ಸಂಖ್ಯೆ 40 ಸಾವಿರ ಇದೆ ಎಂದು ಜಿಲ್ಲಾಧಿಕಾರಿಯೇ ತಿಳಿಸಿದ್ದಾರೆ.
ಈ ಎಲ್ಲ ಅಂಕಿ ಅಂಶ ಗಮನದಲ್ಲಿರಿಸಿಕೊಂಡು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಮಕ್ಕಳಿಗೆ ಸೋಂಕು ಬಂದಲ್ಲಿ ಯಾವ ಪ್ರಮಾಣದಲ್ಲಿ ಇರಲಿದೆಯೋ ಎಂಬ ಅಂದಾಜಿರದ ಕಾರಣ ರಿಮ್ಸ್‌ನಲ್ಲಿ ಕೇವಲ ಮಕ್ಕಳಿಗಾಗಿಯೇ ಕೋವಿಡ್ ವಾರ್ಡ್ ಆರಂಭಿಸಲು ನಿರ್ಧರಿಸಲಾಗಿದೆ. ಒಪೆಕ್‌ನಲ್ಲಿ ಈಗ 150 ಬೆಡ್ ಗಳ ಕೋವಿಡ್ ಆಸ್ಪತ್ರೆ ಮುಂದುವರಿಯುತ್ತಿದ್ದು, ಅಲ್ಲಿ ದೊಡ್ಡವರಿಗೆ ಮಾತ್ರ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಅದರ ಜತೆಗೆ ಮಕ್ಕಳಿಗಾಗಿ 70 ಐಸಿಯು, 70 ವೆಂಟಿಲೇಟರ್, 150 ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಈಗಾಗಲೇ ಇದಕ್ಕೆ ಬೇಕಾದ ಮಾನಿಟರ್, ಯಂತ್ರೋಪಕರಣಗಳ ಅಳವಡಿಕೆ, ಆಕ್ಸಿಜನ್ ಪೂರೈಕೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಮಕ್ಕಳಿಗಾಗಿ ಟ್ರಯಸ್ ಸಿದ್ಧಪಡಿಸಿದ್ದು, ಇನ್ನೂ 50 ಬೆಡ್‌ಗಳ ಟ್ರಯಸ್ ಮಾಡುವ ಆಲೋಚನೆ ಇದೆ. ಮಕ್ಕಳು, ವಯಸ್ಕರನ್ನು ಪ್ರತ್ಯೇಕವಾಗಿ ಇಡುವುದರಿಂದ ರೋಗದ ತೀವ್ರತೆ ಕಡಿಮೆ ಮಾಡಬಹುದು ಎನ್ನುತ್ತಾರೆ ವೈದ್ಯಾಧಿ ಕಾರಿಗಳು.