ವರದಿ: ವೀರೇಂದ್ರ ನಾಗಲದಿನ್ನಿ
ಗದಗ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ನಿವಾರಣೆಗೆ ಜಿಲ್ಲಾಡಳಿತ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. ಅದರೊಂದಿಗೆ ಜಿಲ್ಲೆಯಲ್ಲಿ ಸದ್ಯಕ್ಕೆ 9 ಕೋವಿಡ್ ಕೇರ್ ಸೆಂಟರ್‌ಗಳನ್ನು ವ್ಯವಸ್ಥೆ ಮಾಡುವ ಮೂಲಕ ಕೊರೊನಾ ಸೋಂಕಿನ ಸರಪಳಿಗೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ಫೆಬ್ರವರಿವರೆಗೆ ಎರಡಂಕಿಯಲ್ಲಿದ್ದ ಕೋವಿಡ್ ಸೋಂಕಿತರ ಸಂಖ್ಯೆ, ಮಾಚ್ ìನಲ್ಲಿ ಮೂರಂಕಿ ಹಾಗೂ ಏಪ್ರಿಲ್‌ನಲ್ಲಿ ನಾಲ್ಕು ಅಂಕಿಗೇರಿದೆ. ಕಳೆದ ಎರಡು ತಿಂಗಳಿಂದ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಅದರಲ್ಲೂ ಅಗತ್ಯ ಸೌಲಭ್ಯಗಳಿಲ್ಲದೇ ಹೋಂ ಐಸೋಲೇಷನ್ ನಲ್ಲಿರುವವರಿಂದ ಹೆಚ್ಚಿನ ಜನರಿಗೆ ಸೋಂಕು ವ್ಯಾಪಿಸುತ್ತಿದೆ. ಸೋಂಕಿತರಿಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಅವರಿಂದ ಇಡೀ ಮನೆ ಮಂದಿಗೆ ವ್ಯಾಪಿಸಿರುವ ಉದಾಹರಣೆಗಳು ಸಾಕಷ್ಟಿವೆ. ಗ್ರಾಮೀಣ ಭಾಗದಲ್ಲಿ ಸೋಂಕು ಹಬ್ಬಲು ಇದೂ ಒಂದು ಕಾರಣವಾಗಿರಬಹುದು ಎನ್ನುತ್ತಾರೆ ಅಧಿಕಾರಿಗಳು.
ಜಿಲ್ಲೆಯಲ್ಲಿ 9 ಕೋವಿಡ್ ಕೇರ್ ಸೆಂಟರ್: ಕೋವಿಡ್ ಮೊದಲನೇ ಅಲೆಯಲ್ಲಿ ಜಿಲ್ಲಾಡಳಿತದಿಂದ 1010 ಹಾಸಿಗೆಗಳ 12 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಸಿ, ಸಾವಿರಾರು ಜನ ಸೋಂಕಿತರಿಗೆ ಚಿಕಿತ್ಸೆ ಒದಗಿಸಿತ್ತು. ಈ ಬಾರಿ ಜಿಲ್ಲೆಯಲ್ಲಿ 9 ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಿದೆ. ಪೈಕಿ ಒಟ್ಟು 804 ಬೆಡ್‌ಗಳನ್ನು ವ್ಯವಸ್ಥೆ ಮಾಡಿದ್ದು, ಸದ್ಯ 155 ಜನ ಸೋಂಕಿತರು ಆರೈಕೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಗದಗ ಸಮೀಪದ ಮಲ್ಲಸಮುದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆ(120 ಬೆಡ್), ಮುಂಡರಗಿ ತಾಲೂಕಿನ ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ(70 ಬೆಡ್), ಕಲಕೇರಿ ಗ್ರಾಮದ ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯ(70 ಬೆಡ್), ಹಿರೇವಡ್ಡಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನಿಲಯ(100 ಬೆಡ್), ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ(100 ಬೆಡ್), ಗಜೇಂದ್ರಗಡ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕಿಯರ ವಸತಿ ನಿಲಯ(42 ಬೆಡ್) ಹಾಗೂ ರೋಣ ತಾಲೂಕಿನ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ(100ಬೆಡ್), ಲಕ್ಷೆ ¾àಶ್ವರದ ಒಡೆಯರ್ ಮಲ್ಲಾಪೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನಿಲಯ(100ಬೆಡ್), ಶಿರಹಟ್ಟಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ(100 ಬೆಡ್) ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗಿದೆ.
ಆರೈಕೆ ಕೇಂದ್ರಗಳಿಗೆ ಜನರ ಹಿಂದೇಟು: ಯಾವುದೇ ಲಕ್ಷಣಗಳಿಲ್ಲದ ಸೋಂಕಿತರ ಪೈಕಿ ಸಾವಿರಾರು ಜನರು ಹೋಂ ಐಸೋಲೇಷನ್‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತವರ ಪೈಕಿ ಅನೇಕರಿಗೆ ಪ್ರತ್ಯೇಕ ಶೌಚಾಲಯ ಸಹಿತ ಮಲಗುವ ಕೋಣೆಗಳಿಲ್ಲ. ಅಂತಹವರನ್ನು ಅಂಗನವಾಡಿ ಮತ್ತು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರ ಮೂಲಕ ಗುರುತಿಸಲಾಗುತ್ತಿದೆ. ಅಲ್ಲದೇ, ಆರೈಕೆ ಕೇಂದ್ರಗಳಿಗೆ ತೆರಳುವ ಅಗತ್ಯತೆ ಕುರಿತು ವಿವರಿಸಲಾಗುತ್ತಿದೆ. ಕುಟುಂಬಸ್ಥರೊಂದಿಗೆ ಬೆರೆಯುವುದರಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಭಾಗವೆಂಬುದನ್ನು ಮನದಟ್ಟು ಮಾಡಿಕೊಡಲಾಗುತ್ತಿದೆ. ಜತೆಗೆ ಆರೈಕೆ ಕೇಂದ್ರಗಳಲ್ಲಿ ಸೋಂಕಿತರಿಗೆ ವಸತಿ, ಊಟ ಹಾಗೂ ವೈದ್ಯಕೀಯ ಸೇವೆಗಳನ್ನೂ ವಿವರಿಸುವ ಮೂಲಕ ಸೋಂಕಿತರನ್ನು ಕೇವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗುತ್ತಿದೆ ಎನ್ನಲಾಗಿದೆ.
ಆದರೂ, ವಿನಾಕಾರಣ ವಾದಕ್ಕಿಳಿಯುವ ಗ್ರಾಮೀಣ ಜನರು ಅಂಗನವಾಡಿ, ಆಶಾ ಕಾರ್ಯಕರ್ತೆಯರೊಂದಿಗೆ ವಾಗ್ವಾದಕ್ಕಿಳಿಯುತ್ತಾರೆ. ತಕ್ಷಣಕ್ಕೆ ಕೋವಿಡ್ ಕೇರ್ ಸೆಂಟರ್‌ಗಳಿಗೆ ತೆರಳಲು ಒಪ್ಪುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.