Advertisement
ಮಂಗಳೂರು ನಗರವನ್ನು ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಲ್ಲಿ ಕೈಜೋಡಿಸಿರುವ ರಾಮಕೃಷ್ಣ ಮಿಷನ್ ಸಂಸ್ಥೆ ಜತೆ ಗುರುತಿಸಿಕೊಂಡಿರುವ ‘ಸ್ವಚ್ಛ ಮಂಗಳೂರು’ ಮತ್ತು ‘ಹಿಂದೂ ವಾರಿಯರ್’ ತಂಡದ ಸುಮಾರು 50 ಮಂದಿ ಸದಸ್ಯರು ಕೊಡಗು ಜಿಲ್ಲೆಗೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಈ ತಂಡಗಳ ಸದಸ್ಯರು ಈಗಾಗಲೇ ಸಭೆ ಸೇರಿದ್ದು, ಮುಂದಿನ ಕಾರ್ಯ ಯೋಜನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಎರಡು ಮಂದಿಯ ತಂಡ ಸರ್ವೇ ನಡೆಸಲು ಮಡಿಕೇರಿಗೆ ತೆರಳಿದ್ದು, ಅಲ್ಲಿಯ ಮಂದಿಯ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅದೇ ರೀತಿ ಮಂಗಳೂರಿನಲ್ಲಿರುವ ಮಡಿಕೇರಿ ಪರಿಸರದವರು ಕೂಡ ಈ ತಂಡದ ಜತೆ ಕೈ ಜೋಡಿಸಲು ಮುಂದಾಗಿದ್ದಾರೆ.
ಅಂದಹಾಗೆ, ಮಡಿಕೇರಿ ಸುತ್ತ- ಮುತ್ತಲಿನ ಮನೆಗಳನ್ನು ಸ್ವಚ್ಛಗೊಳಿಸಿ ವಾಸಿಸಲು ಯೋಗ್ಯವಾಗುವಂತೆ ಮಾಡಿ ಕೊಡುವುದೊಂದೇ ಈ ತಂಡದ ಯೋಚನೆಯಲ್ಲ. ಅದರ ಜತೆಗೆ ಆಯಾ ಮನೆಗಳಿಗೆ ತತ್‌ಕ್ಷಣಕ್ಕೆ ಅಗತ್ಯವಿರುವ ವಸ್ತುಗಳನ್ನು ಪೂರೈಕೆ ಮಾಡುವುದಕ್ಕೂ ಹೆಚ್ಚಿನ ಗಮನಹರಿಸಲಿದೆ. ರವಿವಾರ ಮೊದಲನೇ ತಂಡ ಮಡಿಕೇರಿಯತ್ತ ಪ್ರಯಾಣ ಬೆಳೆಸಲಿದ್ದು, ಇದಾದ ಒಂದೆರಡು ದಿನಗಳ ಬಳಿಕ ಮತ್ತೊಂದು ತಂಡವನ್ನು ಕಳುಹಿಸಲು ತೀರ್ಮಾನ ಮಾಡಲಾಗಿದೆ. ಸ್ವಚ್ಛತೆ ಕಾರ್ಯಕ್ಕಾಗಿ ಗುದ್ದಲಿ, ಪಿಕ್ಕಾಸು, ಹಾರೆ, ಕತ್ತಿ, ಬಟ್ಟಿ ಸಹಿತ ಮತ್ತಿತರ ವಸ್ತುಗಳ ಅಗತ್ಯವಿದ್ದು, ಅವುಗಳನ್ನು ರಾಮಕೃಷ್ಣ ಮಠದಿಂದ ಕೊಂಡೊಯ್ಯಲಿದ್ದಾರೆ. ಅದರ ಜತೆಗೆ ಒಂದು ಟ್ರಕ್‌ನಲ್ಲಿ ಅಲ್ಲಿನ ಮನೆಗೆ ತತ್‌ಕ್ಷಣಕ್ಕೆ ಬೇಕಾಗುವಂತಹ ಅಗತ್ಯ ವಸ್ತುಗಳಾದ ತಟ್ಟೆ, ಚಮಚ, ಲೋಟ ಸಹಿತ ಮತ್ತಿತರ ಪರಿಕರಗಳನ್ನು ತೆಗೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ.
Related Articles
ಕೊಡಗು ಜಿಲ್ಲೆಯ ಮಂದಿಗೆ ನಮ್ಮ ತಂಡ ಧೈರ್ಯ ತುಂಬುವ ಕೆಲಸ ಮಾಡಲಿದ್ದೇವೆ. ಮಡಿಕೇರಿಯ ಮನೆಗಳಿಗೆ ಸಂಪರ್ಕಿಸಲು ಅಗತ್ಯವಿರುವ ರಸ್ತೆ ಕೆಲಸದಲ್ಲಿಯೂ ನಮ್ಮ ತಂಡದ ಸದಸ್ಯರು ತೊಡಗಲಿದ್ದಾರೆ. ರಾಮಕೃಷ್ಣ ಮಿಶನ್‌ನ ಮೈಸೂರು ಮತ್ತು ಪೊನ್ನಂಪೇಟೆ ತಂಡ ಕೂಡ ಮಡಿಕೇರಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು, ಅವರ ಜತೆಗೂ ನಾವು ಕೈಜೋಡಿಸಲಿದ್ದೇವೆ.
- ಸೌರಜ್, ಸಾಮಾಜಿಕ ಕಾರ್ಯಕರ್ತ
Advertisement