Advertisement

ಉಗ್ರಗಾಮಿಗಳ ಹುಟ್ಟಡಗಿಸಲು ಸನ್ನದ್ಧರಾಗಿ

07:29 AM Feb 25, 2019 | Team Udayavani |

ದೇವನಹಳ್ಳಿ: ದೇಶದಲ್ಲಿ ತಾಂಡವವಾಡುತ್ತಿರುವ ಭಯೋತ್ಪಾದನೆ ಮತ್ತು ಉಗ್ರಗಾಮಿತ್ವವನ್ನು ಬುಡ ಸಮೇತ ಕಿತ್ತು ಹಾಕಬೇಕು. ಈ ನಿಟ್ಟಿನಲ್ಲಿ ಪ್ರತಿ ಯುವಕರು ಸೈನಿಕರಾಗಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿದೇಶಕ ಡಾ.ರಮೇಶ್‌ ಬಾಬು ಸಲಹೆ ನೀಡಿದರು.

Advertisement

ನಗರದ ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ರಾಷ್ಟ್ರೀಯ ಭಾವೈಕ್ಯತೆ ಶಿಬಿರದ ಮುಕ್ತಾಯ ಸಮಾರಂಭವನ್ನು ಗಿಡಕ್ಕೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.  

ಯುವಕ, ಯುವತಿಯರು ಸೈನ್ಯಕ್ಕೆ ಸೇರಬೇಕು. ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ಯುವಕರ ಪಾತ್ರ ಹೆಚ್ಚಾಗಿದೆ. ಬೇರೆ ರಾಜ್ಯಗಳೊಂದಿಗೆ ಭಾಷೆ, ನೆಲ, ಜಲದ ಬಗ್ಗೆ ಜಗಳವಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ರಾಷ್ಟ್ರೀಯ ಭಾವೈಕ್ಯತೆಯಿಂದ ಹೋದಾಗ ಸಮಸ್ಯೆ ಇತ್ಯರ್ಥವಾಗುತ್ತದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.  

ಅಭಿವೃದ್ಧಿಗೆ ಭಾವೈಕ್ಯತೆ ಮುಖ್ಯ: ರಾಷ್ಟ್ರೀಯ ಮಟ್ಟದಲ್ಲಿ ಭಾವೈಕ್ಯತಾ ಶಿಬಿರ‌ವನ್ನು ದೇವನಹಳ್ಳಿಯಲ್ಲಿ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ದೇಶದ ಅಭಿವೃದ್ಧಿಗೆ ಭಾವೈಕ್ಯತೆ ಮುಖ್ಯ. ಸ್ವಾತಂತ್ರಕ್ಕಾಗಿ ಸಾಕಷ್ಟು ಮಹನೀಯರು ಹೋರಾಟ ಮಾಡಿದ್ದಾರೆ. ಹಲವಾರು ಜನರ ತ್ಯಾಗ ಹಾಗೂ ಶಾಂತಿ ಮಂತ್ರದಿಂದ ಸ್ವಾತಂತ್ರ ಪಡೆಯಲು ಸಾಧ್ಯವಾಗಿದೆ. ಪ್ರತಿ ವಿದ್ಯಾರ್ಥಿಯಲ್ಲಿ ಇಂತಹ ಶಿಬಿರಗಳು ಜೀವನದ ದಿಕ್ಕನ್ನು ಬದಲಾಯಿಸುತ್ತವೆ. ರಾಷ್ಟ್ರಧ್ವಜದ ಮಹತ್ವ ಹಾಗೂ ಶಿಸ್ತು, ಸಂಯಮದ ವ್ಯಕ್ತಿತ್ವವನ್ನು ರಾಷ್ಟ್ರೀಯ ಭಾವೈಕ್ಯತೆ ಬೆಳೆಸುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರೌಢಶಾಲಾ ಹಂತದಲ್ಲೂ ವಿಸ್ತರಿಸಲಾಗಿದೆ ಎಂದು ಹೇಳಿದರು.  

ಹೆಚ್ಚಿನ ಜ್ಞಾನಾರ್ಜನೆ ಮಾಡಿಕೊಳ್ಳಿ: ರಾಜ್ಯ ಎನ್‌ಎಸ್‌ಎಸ್‌ ಸಂಯೋಜಕ ಡಾ.ಆರ್‌.ಶ್ರೀನಿವಾಸ್‌ ಮಾತನಾಡಿ, ಯುವ ಶಕ್ತಿ ಮನಸ್ಸು ಮಾಡಿದರೆ ಏನನ್ನಾದರೂ ಬದಲಾವಣೆ ತರಲು ಸಾಧ್ಯವಾಗುತ್ತದೆ. ಎನ್‌ಎಸ್‌ಎಸ್‌ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಕೇವಲ ಅಂಕ ಮತ್ತು ಪ್ರಮಾಣ ಪತ್ರಗಳಿಗೆ ಕಾಟಾಚಾರಕ್ಕೆ ಭಾಗವಹಿಸಿದರೆ ಸಾಲದು. ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಎಲ್ಲೆಡೆ ಅರಿವು ಮೂಡಿಸುವ ಕಾರ್ಯವಾಗಬೇಕು. ಹೆಚ್ಚಿನ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದರು.  

Advertisement

ಪರಿಸರ ಉಳಿದರೆ ಮಾತ್ರ ಉಳಿಗಾಲ: ಬಾಲ ಗಂಗಾಧರನಾಥ್‌ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಒಂದು ಲಕ್ಷ ಸಸಿಗಳನ್ನು ನೆಡಲಾಗಿತ್ತು. ಪರಿಸರದ ಮಹತ್ವ ಪ್ರತಿಯೊಬ್ಬರು ತಿಳಿಯಬೇಕು. ಪರಿಸರ ಉಳಿದರೆ ಮಾತ್ರ ನಾವೂ ಉಳಿಯಲು ಸಾಧ್ಯ. ಫ್ಲಾಸ್ಟಿಕ್‌ನ್ನು ಬಳಸುವ ಮೊದಲು ವಿ ಧ್ಯಾರ್ಥಿಗಳು ಚಿಂತಿಸಬೇಕು. ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯಬೇಕು. ಫ್ಲಾಸ್ಟಿಕ್‌ ಭೂಮಿಯ ಒಳ ಭಾಗಕ್ಕೆ ಹೋದರೆ ಅಂತರ್ಜಲ ಕುಸಿತ, ಪ್ರಾಣಿಗಳು ತಿಂದರೆ ಆರೋಗ್ಯ ಕೆಡುತ್ತದೆ. ಫ್ಲಾಸ್ಟಿಕ್‌ ಬಳಕೆಯಿಂದ ಅಂದ, ಚಂದವೂ ಕೆಡುತ್ತದೆ ಎಂದರು.  

ಸೇವಾ ಮನೋಭಾವ ಅಗತ್ಯ: ಇಡೀ ದೇಶದಲ್ಲಿಯೇ ರಾಷ್ಟ್ರೀಯ ಸೇವಾ ಭವನ ಬೆಂಗಳೂರಿನಲ್ಲಿ ಮಾತ್ರ ಇದೆ. ವಿದ್ಯಾರ್ಥಿಗಳಲ್ಲಿರುವ ಉತ್ತಮ ಪ್ರತಿಭೆ ಹೊರಹಾಕಲು ಯೋಜನೆ ಸೂಕ್ತ ವೇದಿಕೆಯಾಗಿದೆ. ಸೇವಾ ಮನೋಭಾವನೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.  

ಈ ವೇಳೆ ರಾಜ್ಯ ಎನ್‌ಎಸ್‌ಎಸ್‌ ಯೋಜನಾಧಿಕಾರಿ ಪೂರ್ಣಿಮಾ ಜೋಗಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್‌.ಶಿವಶಂಕರಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ರವಿಚಂದ್ರ, ಎನ್‌ಎಸ್‌ಎಸ್‌ ಸಂಯೋಜಕ ಸಜ್ಜಾದ್‌ ಪಾಷ್‌, ಉಪನ್ಯಾಸಕರಾದ ಪ್ರೊ.ಕೆಂಪೆೇಗೌಡ, ಸತ್ಯನಾರಾಯಣ ಗೌಡ, ಅರ್ಚನಾ, ಕೇಶವ ಮೂರ್ತಿ, ಸಂಘಟನಾ ಅಧಿಕಾರಿ ಗಿರೀಶ್‌, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬೆಟ್ಟಕೋಟೆ ಹರೀಶ್‌, ಪಿಳ್ಳರಾಜು, ಮುಖಂಡ ಅಜಯ್‌, ಶಿವಕುಮಾರ್‌, ಸತೀಶ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next