Advertisement

ನೆರೆ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ

10:29 AM Jun 26, 2021 | Team Udayavani |

ಗದಗ: ಜಿಲ್ಲೆಯಲ್ಲಿ ಅಧಿಕ ಮಳೆ ಮತ್ತು ನದಿ, ಹಳ್ಳಗಳ ನೆರೆಯಿಂದಾಗಿ ಯಾವುದೇ ಸಮಯದಲ್ಲಾದರೂ ಪ್ರವಾಹ ಪರಿಸ್ಥಿತಿ ತಲೆದೋರಬಹುದು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ತಹಶೀಲ್ದಾರ್‌ರು ಪ್ರತಿವಾರ ಸಭೆನಡೆಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಜಿಪಂ ವಿಡಿಯೋ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪ್ರವಾಹ ಪರಿಸ್ಥಿತಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಗೆ ಯಾವುದೇ ಸಮಯದಲ್ಲಾದರೂ ಪ್ರವಾಹ ಎದುರಾಗಬಹುದು. ಈ ನಿಟ್ಟಿನಲ್ಲಿ ತಾಲೂಕು ಆಡಳಿತಗಳು ಮುಂಜಾಗ್ರತಾ ಕ್ರಮವಾಗಿ ಸಭೆ ನಡೆಸುವ ಮೂಲಕ ಪರಿಸ್ಥಿತಿ ಸೂಕ್ತ ನಿರ್ವಹಣೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಹಾಗೂ ಸೂಕ್ತ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಪ್ರವಾಹಕ್ಕೆ ತುತ್ತಾದ ಗ್ರಾಮಗಳ ಜನರಿಗೆ ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಿತದೃಷ್ಟಿಯಿಂದ ಜನಸಂಖ್ಯೆಗನುಗುಣವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು ಎಂದು ತಿಳಿಸಿದರು.

ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ತಾಲೂಕು ಮಟ್ಟದಲ್ಲಿ ಮನೆ ಹಾನಿ ಕುರಿತು ಸರ್ವೇ ನಡೆಸಲು ತಂಡಗಳನ್ನು ರಚಿಸಿಕೊಳ್ಳಿ. ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆಗೆ ರಚಿಸಲಾದ ತಂಡ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸುವುದರೊಂದಿಗೆ ಪರಿಹಾರ ಕೊಡಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ರೈತರ ಬೆಳೆಗಳಿಗೆ ನೀರು ನುಗ್ಗಿ ಹಾನಿಗೊಳಗಾದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳು ತಕ್ಷಣ ಜಂಟಿ ಸಮೀಕ್ಷೆ ನಡೆಸಿ, ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ಸೂಚಿಸಿದರು.

ಈಗಾಗಲೇ ತಾಲೂಕುಗಳಲ್ಲಿ ಗುರುತಿಸಲಾದ ಆರೈಕೆ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಜನ ಜಾನುವಾರುಗಳಿಗೆ ಆಹಾರ, ಮೇವು ಔಷ ಧ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌ ಸೌಲಭ್ಯಗಳು ಲಭ್ಯವಾಗುವಂತೆ ಆರೈಕೆ ಕೇಂದ್ರಗಳಲ್ಲಿ ವ್ಯವಸ್ಥೆ ಇರಬೇಕು. ಪ್ರತಿ ತಾಲೂಕಿನಲ್ಲಿ ಗುರುತಿಸಲಾದ ಕಾಳಜಿ ಕೇಂದ್ರಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಿ, ಕಾಳಜಿ ಕೇಂದ್ರಗಳ ಪರಿಸ್ಥಿತಿ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು ಎಂದರು.

Advertisement

ಪ್ರವಾಹ ಪರಿಸ್ಥಿತಿಯಲ್ಲಿ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನಿಗಾ ವಹಿಸಬೇಕು. ರೋಗ ರುಜಿನಗಳ ಹತೋಟೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನಿಗದಿತವಾಗಿ ಸೊಳ್ಳೆ ನಿಯಂತ್ರಣ ಹಾಗೂ ಫಾಗಿಂಗ್‌ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಸತೀಶ ಬಸರಿಗಿಡದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗುರು ಪ್ರಸಾದ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಆರ್‌.ಸಿ.ಎಚ್‌.ಅಧಿಕಾರಿ ಡಾ|ಬಿ.ಎಂ.ಗೊಜನೂರ, ಮಹಿಳಾ ಮತ್ತು ಮಕ್ಕಳ ನಿರೂಪಣಾಧಿಕಾರಿ ಡಾ|ಎಸ್‌.ಎಚ್‌.ಕುಕನೂರ ಸೇರಿದಂತೆ ಆಯಾ ತಾಲೂಕುಗಳ ತಹಶೀಲ್ದಾರ್‌ಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರವಾಹ ನಿರ್ವಹಣೆಗಾಗಿ ಗ್ರಾಪಂಗಳಲ್ಲಿ ರಚಿಸಲಾದ ಟಾಸ್ಕ್ ಫೋರ್ಸ್‌ ಸಮಿತಿ ಸಭೆಗಳನ್ನು ನಡೆಸಿ, ಸೂಕ್ತ ಯೋಜನೆ ಸಿದ್ಧವಾಗಿಟ್ಟುಕೊಳ್ಳಬೇಕು. ಈ  ಕಾರ್ಯಗಳ ಮೇಲುಸ್ತುವಾರಿಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಿರ್ವಹಿಸಬೇಕು.-ಭರತ್‌ ಎಸ್‌., ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next