Advertisement

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ

07:59 PM Jul 01, 2021 | Nagendra Trasi |

ಮುದ್ದೇಬಿಹಾಳ: ಕೃಷ್ಣಾ ನದಿ ಪ್ರವಾಹದಿಂದ ಮತ್ತು ಮಳೆಯಿಂದ ಹಾನಿಗೊಳಗಾಗುವ ಸಂಭವನೀಯ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು ಅಲ್ಲಿ ಏನಾದರೂ ತೊಂದರೆ ಸಂಭವಿಸಿದಲ್ಲಿ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಕೂಡಲೇ ಸಂಬಂಧಿಸಿದವರ ಗಮನಕ್ಕೆ ತಂದು ಪರಿಹಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ ಸೂಚಿಸಿದರು.

Advertisement

ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ನಡೆದ ತಹಶೀಲ್ದಾರ್‌ ಕಚೇರಿಯ ವಿಪತ್ತು ನಿರ್ವಹಣಾ ವಿಭಾಗದ ಸಿಬ್ಬಂದಿ, ಉಪ ತಹಶೀಲ್ದಾರ್‌, ಶಿರಸ್ತೇದಾರ್‌ರ, ಕಂದಾಯ ನಿರೀಕ್ಷಕರ, ಗ್ರಾಮಲೆಕ್ಕಿಗರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರತೊಡಗಿದೆ.

ಈ ನೀರು ಕೃಷ್ಣಾ ನದಿ ಮುಖಾಂತರ ತಾಲೂಕಿನ ಗಡಿ ಭಾಗದಲ್ಲಿರುವ ಬಸವಸಾಗರ ಜಲಾಶಯಕ್ಕೆ ತಲುಪುತ್ತದೆ. ಅಲ್ಲಿ ನೀರನ್ನು ಹಿಡಿದಿಡುವುದರಿಂದ ಎರಡೂ ಜಲಾಶಯಗಳ ಮಧ್ಯೆ ಬರುವ ನದಿ ದಂಡೆ ಗ್ರಾಮಗಳ ಜನರು ಬಾಧಿ ತರಾಗುತ್ತಾರೆ. ಹಿಂದೆ ಇಂಥ ಘಟನೆಗಳು ನಡೆದಿವೆ. ಆವಾಗೆಲ್ಲ ಜಾಗೃತಿ ವಹಿಸಿ ತೊಂದರೆ, ಸಮಸ್ಯೆ ತಪ್ಪಿಸಲಾಗಿದೆ. ಆದರೆ ಈ ಬಾರಿ ಮುಂಚಿತವಾಗಿಯೇ ಎಚ್ಚರಿಕೆಯಿಂದ ಇದ್ದು ಪರಿಸ್ಥಿತಿ ಮೇಲೆ ನಿಗಾ ವಹಿಸಬೇಕು ಎಂದರು.

ನದಿ ದಂಡೆ ಬಾಧಿತ ಗ್ರಾಮಗಳು: ಕಾಳಗಿ ಗ್ರಾಪಂನ ಕಾಳಗಿ, ಯರಝರಿ ಗ್ರಾಪಂನ ಮುದೂರ, ಹಂಡರಗಲ್‌, ನಾಗರಾಳ, ಕಂದಗನೂರ, ಕೋಳೂರು ಗ್ರಾಪಂನ ದೇವೂರ, ತಂಗಡಗಿ ಗ್ರಾಪಂನ ತಂಗಡಗಿ, ಕಮಲದಿನ್ನಿ, ಗಂಗೂರ, ಕುಂಚಗನೂರ, ಅಮರಗೋಳ,ಆಲೂರು ಗ್ರಾಪಂನ ಮದರಿ, ಹಡಗಲಿ, ಬೈಲಕೂರ ಮುಂತಾದ ಗ್ರಾಮಗಳು ಕೃಷ್ಣಾ ನದಿ ದಂಡೆಯಲ್ಲಿವೆ.

ಮುದ್ದೇಬಿಹಾಳ ವಲಯದಲ್ಲಿ ಕಂದಗನೂರ, ಬನೋಶಿ, ಗೋನಾಳ ಎಸ್‌ಎಚ್‌, ಚಿರ್ಚನಕಲ್‌, ಕಪನೂರ, ನಾಲತವಾಡ ವಲಯದಲ್ಲಿ ಇಂಗಳಗಿ, ರಕ್ಕಸಗಿ, ಬಲದಿನ್ನಿ, ಕಾರಕೂರ, ಬಂಗಾರಗುಂಡ, ಬಿಜೂರ, ಸುಲ್ತಾನಪುರ, ಟಕ್ಕಳಕಿ ಗ್ರಾಮ ವ್ಯಾಪ್ತಿಯ ಜಮೀನುಗಳ ಬೆಳೆಗಳು ನದಿ ನೀರಿನಿಂದ ಹಾನಿಗೀಡಾಗುತ್ತವೆ. ಕೃಷ್ಣಾ ನದಿ ಪ್ರವಾಹದಿಂದ ಮುದೂರ, ಕುಂಚಗನೂರ, ಕಮಲದಿನ್ನಿ, ನಾಗರಾಳ, ಗಂಗೂರ, ತಂಗಡಗಿ, ಕಾಳಗಿ, ಹಂಡರಗಲ್‌, ಕಂದಗನೂರ, ಹಡಗಲಿ ಗ್ರಾಮಗಳು ಹೆಚ್ಚು ಹಾನಿಗೊಳಗಾಗುತ್ತವೆ ಎಂದು ತಹಶೀಲ್ದಾರ್‌ಗೆ ಮಾಹಿತಿ ನೀಡಲಾಯಿತು.

Advertisement

ಈ ಬಗ್ಗೆ ನಿಗಾ ವಹಿಸಲು ವಿಪತ್ತು ನಿರ್ವಹಣಾ ತಂಡ ರಚಿಸಲು ಹಾಗೂ ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಾಗೃತಿ ಮೂಡಿಸಲು ಸೂಚನೆ: ಮಳೆ ಮತ್ತು ಪ್ರವಾಹದಿಂದ ತೊಂದರೆಗಿಡಾಗುವ ಗ್ರಾಮಗಳಲ್ಲಿ ಡಂಗೂರ ಸಾರಿಸಿ ಜನರಿಗೆ ಎಚ್ಚರಿಕೆಯಿಂದ ಇರಲು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ ತಹಶೀಲ್ದಾರ್‌ರು ಪ್ರಕೃತಿ ವಿಕೋಪದಿಂದ ಸಂಭವಿಸುವ ಯಾವುದೇ ಅವಘಡ, ಜೀವಹಾನಿ ಮಾಹಿತಿಗಳನ್ನು ಆದಷ್ಟು ಬೇಗ ಮೇಲಧಿಕಾರಿಗಳಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು. ಸಕಾಲಕ್ಕೆ ಮಾಹಿತಿ ದೊರಕುವುದರಿಂದ ತೊಂದರೆಗೀಡಾದವರ ನೆರವಿಗೆ ಜಿಲ್ಲಾಡಳಿತ, ಸರ್ಕಾರ ಧಾವಿಸುವುದಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಕಿವಿಮಾತು ಹೇಳಿದರು.

ನಿರ್ಲಕ್ಷಿಸಿದರೆ ಕ್ರಮ: ಯಾವುದೇ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಮತ್ತು ಸಂಬಂಸಿದ ಅಧಿಕಾರಿಗಳು ನಿರ್ಲಕ್ಷé ತೋರಿದಲ್ಲಿ ಉದಾಸೀನ ಮಾಡಿದಲ್ಲಿ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ತಹಶೀಲ್ದಾರ್‌ ಅವರು ಪರಸ್ಪರ ಹೊಂದಾಣಿಕೆಯಿಂದ, ಗ್ರಾಮಸ್ಥರ ಸಹಕಾರದಿಂದ ನಿರಂತರ ಸಂಪರ್ಕದಲ್ಲಿದ್ದು ಮಳೆಗಾಲ ಮುಗಿಯುವವರೆಗೂ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ತಿಳಿ ಹೇಳಿ ಕರ್ತವ್ಯದಲ್ಲಿ ತಪ್ಪು ಮಾಡುವವರನ್ನು ಕ್ಷಮಿಸುವ ಮಾತೇ ಇಲ್ಲ ಎಂದರು. ಶಿರಸ್ತೇದಾರ್‌ ವಿ.ಸಿ. ತೊನಿಶ್ಯಾಳ, ನಾಲತವಾಡ ಉಪ ತಹಶೀಲ್ದಾರ್‌ ಜಿ.ಎನ್‌. ಕಟ್ಟಿ, ಕಂದಾಯ ನಿರೀಕ್ಷಕರಾದ ಮಹಾಂತೇಶ ಮಾಗಿ, ನಿಂಗಪ್ಪ ದೊರೆ, ಬಾ ಧಿತ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next