ಜಮಖಂಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಕೃಷ್ಣಾನದಿಗೆ ನೀರಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆಯೊಂದಿಗೆ ಸಂಪೂರ್ಣ ಸಜ್ಜುಗೊಂಡಿದೆ ಎಂದು ಉಪವಿಭಾಗಾಧಿಕಾರಿ ಇಕ್ರಂ ಶರೀಫ್ ಹೇಳಿದರು.
ನಗರದ ಮಿನಿ ವಿಧಾನಸೌಧ ಸಭಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಪಾಯದ ಮಟ್ಟಕ್ಕೆ ತಲುಪಿದೆ. ಯಾವುದೇ ಸಂದರ್ಭದಲ್ಲಿ ಪ್ರವಾಹ ಎದುರಾದರೂ ಅದನ್ನು ಎದುರಿಸಲು ತಾಲೂಕಾಡಳಿತ ಸದಾ ಸಿದ್ಧವಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದೇವೆ ಎಂದರು.
ಜಿಲ್ಲಾಡಳಿತದ ಆದೇಶದಂತೆ ಜಮಖಂಡಿ ಉಪವಿಭಾಗದ ಮೂರು ತಾಲೂಕಿನ ಪೈಕಿ ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿಗೆ 27 ಗ್ರಾಮಗಳು, ಬೀಳಗಿ ತಾಲೂಕಿನ 20 ಗ್ರಾಮಗಳು ಮತ್ತು ಮುಧೋಳ ತಾಲೂಕಿನ ಘಟಪ್ರಭಾ ನದಿಗೆ 11 ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಗಳಿವೆ.
ಮುಳುಗಡೆಯಾಗುವ ಪ್ರತಿಯೊಂದು ಗ್ರಾಮಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಲ್ಲಿನ ಲೆಕ್ಕಾಧಿಕಾರಿಗಳು ಮತ್ತು ಪಂಚಾಯತ ಅಭಿವೃದ್ಧಿ ಮತ್ತು ನೋಡಲ್ ಅಧಿಕಾರಿಗಳು ಗ್ರಾಮದ ಸಂಪೂರ್ಣ ಮಾಹಿತಿ ಕಲೆಹಾಕಿ ತಾಲೂಕಾಡಳಿತಕ್ಕೆ ಮಾಹಿತಿ ನೀಡಲಿದ್ದಾರೆ. ನೋಡಲ್ ಅಧಿಕಾರಿಗಳಿಗೆ ಬೇಕಾಗುವ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಆಯಾ ಗ್ರಾಮಗಳಲ್ಲಿ ಡಂಗೂರ ಸಾರಿ ಸಭೆ ಮಾಡಲಾಗಿದೆ ಎಂದರು.
ನದಿಯ ಸುತ್ತಲೂ ನೀರು ಹೆಚ್ಚಾದಂತೆ ಹಾವಿನ-ಚೇಳು ಕಾಟ ಹೆಚ್ಚಾಗುತ್ತದೆ. ನೀರಿನ ಬಾಧೆ ಇರುವ ಪ್ರದೇಶದಲ್ಲಿ ಹಾವು ಕಡಿತ ನಿಯಂತ್ರಿಸಲು ಹಾವು ಹಿಡಿಯುವವರನ್ನು ಸಂಪರ್ಕ ಮಾಡಿದ್ದೇವೆ. ಹಾವೂ ಕಡಿದವರಿಗೆ ಚಿಕಿತ್ಸೆ ನೀಡಲು ತುರ್ತು ಚಿಕಿತ್ಸೆಗೆ ಅವಕಾಶ ಮಾಡಲಾಗಿದೆ. ತಾಲೂಕಿನಲ್ಲಿರುವ ನುರಿತ ಈಜುಗಾರರನ್ನು ಆಹ್ವಾನಿಸಲಾಗಿದೆ. ಪ್ರವಾಹ ಹೆಚ್ಚಾದರೆ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಅಗತ್ಯವಾದರೆ ಗಂಜಿ ಕೇಂದ್ರ ತೆರೆಯಲಾಗುವುದು. ಗಂಜಿ ಕೇಂದ್ರಗಳಿಗೆ ಬೇಕಾದ ರೇಷನ್ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ. ಜಾನುವಾರಗಳಿಗೆ ಗೋಶಾಲೆ ತೆರೆಯುವ ಸ್ಥಳ ನಿಗದಿಪಡಿಸಿ, ಮೇವಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ತಹಶೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿ, ಕಂದಾಯ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಪ್ರವಾಹ ಭಾದಿತ ಗ್ರಾಮಗಳಲ್ಲಿ ತುರ್ತು ಸಮಸ್ಯೆಗಳಿದ್ದಲ್ಲಿ 08353-220023 ಇಲ್ಲಿಗೆ 24X7 ಗಂಟೆಗಳ ಕಾಲ ದೂರವಾಣಿ ಕರೆ ಮಾಡಬಹುದು.
ತಾಲೂಕಾಡಳಿತದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಹೆಸ್ಕಾಂ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ, ಸಾರಿಗೆ ಇಲಾಖೆ ಎಲ್ಲ ಇಲಾಖೆಗಳ ನೆರವು ಪಡೆಯಲಾಗುವುದು. ಪ್ರವಾಹ ಪರಿಸ್ಥಿತಿ ಎದುರಿಸಲು ಲಭ್ಯವಿರುವ ಬೋಟ್‌ಗಳಲ್ಲಿ 150 ಲೈಪ್ ಜಾಕೆಟ್, 150 ಟಾರ್ಚಗಳು, 100 ಹೆಲ್ಮೇಟ್, 27 ವೈರ್‌ಲೆಸ್ ಸೆಟ್, 54 ಹಗ್ಗ (ರೂಪ್), 54 ಸೇಪ್ಟಿ ಹುಕ್ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರವಾಹ ಎದುರಾದರೆ ನಿಯಂತ್ರಣ ಮಾಡಲು ಹೆಚ್ಚಿನ ವ್ಯವಸ್ಥೆ ಬೇಕಾದರೆ ರೋಟರಿ ಕ್ಲಬ್, ರೆಡ್ ಕ್ರಾಸ್‌ಗಳಂತಹ ಸಂಸ್ಥೆಗಳೊಂದಿಗೆ, ಕೃಷಿ ಸಂಘ ಸಲಹೆಗಾರರೊಂದಿಗೆ ಸಂಪರ್ಕ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಬಕವಿ ಬನಹಟ್ಟಿ ವಿಶೇಷ ತಹಶೀಲ್ದಾರ್ ಮೆಹಬೂಬಿ ಇದ್ದರು.