Advertisement

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧ

11:27 AM Jul 31, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಮುಂಗಾರು ಮಾನ್ಸೂನ್‌ ತಡವಾಗಿ ಪ್ರಾರಂಭವಾಗಿದ್ದು, ಜಿಲ್ಲೆಯ ತ್ರಿವಳಿ ನದಿಗಳಾದ ಕೃಷ್ಣಾ, ಮಲಪ್ರಭೆ ಮತ್ತು ಘಟಪ್ರಭೆ ನದಿಗಳಿಗೆ ನೀರು ಬರುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ, ಪ್ರವಾಹ ನಿಯಂತ್ರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಸೂಚಿಸಿದರು.

Advertisement

ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರವಾಹ ನಿಯಂತ್ರಣ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರವಾಹ ಉಂಟಾಗುವ ನದಿ ದಡದಲ್ಲಿರುವ ಹಾಗೂ ಮುಳುಗಡೆಯಾಗುವ ಪ್ರದೇಶಗಳಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಆಯಾ ತಾಲೂಕಾ ತಹಶೀಲ್ದಾರ್‌ರು ಮುನ್ನಚ್ಚರಿಕೆ ಕ್ರಮವಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಕೃಷ್ಣಾ ನದಿಯಿಂದ ಪ್ರವಾಹ ಉಂಟಾದಲ್ಲಿ ಜಮಖಂಡಿ ತಾಲೂಕಿನಲ್ಲಿ 11 ಗ್ರಾಮಗಳು ಪೂರ್ತಿ ಬಾಧಿತಗೊಳ್ಳುತ್ತಿದ್ದರೆ, 16 ಗ್ರಾಮಗಳು ಬಾಗಶಃ ಬಾಧಿತಗೊಳಗಾಗುತ್ತವೆ. ನಾರಾಯಣಪುರ ಜಲಾಯಶದ ಪ್ರಭಾವದಿಂದ ಬಾಗಲಕೋಟೆ ತಾಲೂಕಿನಲ್ಲಿ 13 ಹಳ್ಳಿಗಳು ಭಾಗಶಃ ಬಾಧಿತಗೊಳಗಾಗುತ್ತವೆ. ಹುನಗುಂದ ತಾಲೂಕಿನಲ್ಲಿ 12 ಗ್ರಾಮಗಳು ಪೂರ್ತಿಯಾಗಿ, 23 ಗ್ರಾಮಗಳು ಭಾಗಶಃ ಬಾಧಿತಗೊಳ್ಳಲಿವೆ.

ಆಲಮಟ್ಟಿ ಜಲಾಶಯದಿಂದ ಮಂಗಳವಾರ 1,17,336 ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದೆ. ಆಲಮಟ್ಟಿ, ನಾರಾಯಣಪುರ, ನವಿಲುತೀರ್ಥ ಹಾಗೂ ಹಿಪ್ಪರಗಿ ಜಲಾಶಯದ ಇಂಜಿನೀಯರ್‌ಗಳು ಜಲಾಶಯದ ಅಧಿಕಾರಿಗಳೊಡನೆ ಸತತ ಸಂಪರ್ಕವಿಟ್ಟುಕೊಂಡು ಹೊರಹರಿವು ಸ್ಥಿತಿಗತಿಗಳ ಮಾಹಿತಿ ಪಡೆಯುತ್ತಿರಬೇಕು.

Advertisement

ಪ್ರವಾಹ ಪರಿಸ್ಥಿತಿ ಬಗ್ಗೆ ಬಾಧಿತಗೊಳ್ಳುವ ಎಲ್ಲ ಗ್ರಾಮಗಳಿಗೆ ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಬಾಧಿತಗೊಳ್ಳುವ ಕುಟುಂಬ, ಜಾನುವಾರು ಹಾಗೂ ಹಾನಿಗೊಳಗಾಗಬಹುದಾದ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸ್ಥಳದ ಆಯ್ಕೆ, ಆಹಾರ ಧಾನ್ಯ ಸಂಗ್ರಹಣೆ, ಗಂಜಿ ಕೇಂದ್ರಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ನದಿಗಳ ದಡದಲ್ಲಿರುವ ಗ್ರಾಮಗಳಲ್ಲಿ ಈಗಾಗಲೇ ಕೆಲವು ಗ್ರಾಮಗಳಲ್ಲಿ ಯಾಂತ್ರಿಕ ಬೋಟ್ ಹಾಗೂ ನಾವೆಗಳು ಲಭ್ಯವಿದ್ದು, ಅವುಗಳನ್ನು ಪರಿಶೀಲಿಸುವುದು ಹಾಗೂ ಪ್ರವಾಹ ಪರಿಸ್ಥಿತಿ ತಕ್ಕಂತೆ ರಕ್ಷಣಾ ಸಾಮಗ್ರಿಗಳು ಹಾಗೂ ಉಪಕರಣ ಇಟ್ಟುಕೊಳ್ಳುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಗಿರಮಾ ಪೋವಾರ, ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಚ್. ಜಯಾ, ಜಮಖಂಡಿ ಉಪ ವಿಭಾಗಾಧಿಕಾರಿ ಮೊಹಮ್ಮದ ಈಕ್ರಮ, ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next