ಮೈಸೂರು: ಜಿಲ್ಲೆಯಲ್ಲಿ ಎದುರಾಗಿರುವ ಬರಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಜತೆಗೆ ಮಳೆಯಿಂದಾಗಿ ಸಂಭವಿಸುತ್ತಿರುವ ಕೆರೆಗಳ ಸೋರಿಕೆ ತಡೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬರ ಮತ್ತು ದಸರಾ ಸಂಬಂಧ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮುಂಗಾರು ವೈಫಲ್ಯದಿಂದಾಗಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ.
ಹೀಗಾಗಿ ಭತ್ತ, ಕಬ್ಬು ಇನ್ನಿತರ ಬೆಳೆಗಳ ಬದಲು ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೇರೇಪಿಸಲು ಕೃಷಿ ಇಲಾಖೆ ಕ್ರಮವಹಿಸಬೇಕಿದೆ. ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವುದರ ಪರಿಣಾಮ ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆರೆಗಳ ಕಟ್ಟೆ ಒಡೆದು ನೀರು ಪೋಲಾಗುತ್ತಿದೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.
ಹಣಬಿಡುಗಡೆ ಮಾಡಿಸಿ: ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರು ಮಾತನಾಡಿ, 2016ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 12,149 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಇದುವರೆಗೆ 2,675 ರೈತರಿಗೆ 316.33 ಲಕ್ಷ ರೂ.ಬೆಳೆ ವಿಮೆ ದೊರೆತಿದೆ. ಆದರೆ, ಇನ್ನೂ 9474 ರೈತರಿಗೆ 558.10 ಲಕ್ಷ ರೂ. ಪರಿಹಾರ ದೊರೆಯಬೇಕಿದೆ.
ಇದರಿಂದಾಗಿ ಅನೇಕ ರೈತರು ಬೆಳೆ ವಿಮೆ ಮಾಡಿಸಲು ಹಿಂದೇಟು ಹಾಕುತ್ತಿದ್ದು, ಪರಿಣಾಮ ಈ ಬಾರಿ 3376 ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಹೀಗಾಗಿ ಬಾಕಿಯಿರುವ ಬೆಳೆ ವಿಮೆ ಹಣ ಬಿಡುಗಡೆ ಮಾಡಲು ವಿಮಾ ಕಂಪನಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್ ಮತ್ತಿತರರಿದ್ದರು.
ರೈತರಿಗೆ ಮುಂಗಾರು ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ 45,83,64,886 ರೂ., ಹಿಂಗಾರು ಬೆಳೆ ಹಾನಿಗೆ 5,40,71,579 ರೂ. ಇನ್‌ಪುಟ್ ಸಬ್ಸಿಡಿಯನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ.
-ಡಿ.ರಂದೀಪ್, ಜಿಲ್ಲಾಧಿಕಾರಿ