ಬೆಳ್ಮಣ್: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿ ಜಿಲ್ಲಾದ್ಯಂತ ಅಕ್ಷರ ದಾಸೋಹ ಸಿಬಂದಿಗಳು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಸೋಮವಾರ ಹೆಚ್ಚಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆತ್ತವರೇ ಅಡುಗೆ ತಯಾರಿಸಿ ತಂತಮ್ಮ ಮಕ್ಕಳಿಗೆ ತಾವೇ ಬಡಿಸಿ ಸೈ ಎನಿಸಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲ ತಾಲೂಕಿನ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘದ ಉಡುಪಿ ಜಿಲ್ಲಾ ಸಮಿತಿ ಕರಪತ್ರ ಮಾದರಿಯಲ್ಲಿ ಅನಿರ್ದಿಷ್ಠಾವಧಿ ಮುಷ್ಕರ ನಡೆಸುವ ಬಗ್ಗೆ ಶನಿವಾರ ವಾಟ್ಸಾಪ್ ಮೂಲಕ ಪತ್ರ ನೀಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಸೋಮವಾರ ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಸೇರಿ ಶಾಲೆಯ ಮಕ್ಕಳಿಗೆ ಅಡುಗೆ ತಯಾರಿಸಿ ಬಡಿಸಿ ಅಡುಗೆ ಸಿಬಂದಿ ಕೊರತೆ ನೀಗಿಸಿದರು.
ಕಲ್ಲಿನಲ್ಲೆ ಮಸಾಲೆ ಅರೆದರು
ಮುಂಡ್ಕೂರು ಸ.ಮಾ.ಹಿ.ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಪೂಜಾರಿ ಅವರ ನೇತೃತ್ವದ ತಂಡ ಅಡುಗೆ ಕೆಲಸ ಪೂರೈಸಿದ್ದು ಕರೆಂಟ್ ಕೈಕೊಟ್ಟ ಹಿನ್ನೆಲೆ ಯಲ್ಲಿ ಕಡೆಯುವ ಕಲ್ಲು ಬಳಸಿ ಮಸಾಲೆ ಅರೆದು ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಊಟ ಬಡಿಸಲು ನೆರವಾದರು.
ಅಡುಗೆ ಸಿಬಂದಿಗಳ ಮುಷ್ಕರ ಇದೇನೂ ಹೊಸತಲ್ಲ, ಈ ಹಿಂದೆಯೂ ನಡೆದಿದ್ದು ಮಕ್ಕಳ ಹೆತ್ತವರು ಬಿಸಿಯೂಟದಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಹಕರಿಸುತ್ತಿದ್ದಾರೆ ಎಂದು ಮುಂಡ್ಕೂರು ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್ ತಿಳಿಸಿದ್ದಾರೆ.