ಬೆಂಗಳೂರು:ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್.ಡಿ ಕುಮಾರಸ್ವಾಮಿ ಮೇ 23ರಂದು ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ವಿಧಾನಸೌಧದ ಪೂರ್ವ ಭಾಗದಲ್ಲಿ ಅದ್ಧೂರಿ ವೇದಿಕೆ ನಿರ್ಮಾಣ ಕಾರ್ಯ ನಡೆದಿದೆ.
ಸೋಮವಾರ ಶಕ್ತಿಸೌಧದ ಪೂರ್ವಭಾಗದ ಮೆಟ್ಟಿಲುಗಳ ಸಮೀಪ ಬೃಹತ್ ವೇದಿಕೆ ನಿರ್ಮಾಣ ಕಾರ್ಯಗಳ ಆರಂಭಕ್ಕೂ ಮುನ್ನ ಅರ್ಚಕರಿಂದ ಶಾಸ್ತ್ರೋಕ್ತ ಪೂಜೆ ನೆರವೇರಿಸಲಾಯಿತು.ವೇದಿಕೆ ನಿರ್ಮಾಣ ಕಾರ್ಯಗಳನ್ನು ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭ, ಅಪರ ಮುಖ್ಯಕಾರ್ಯದರ್ಶಿ ಲಕ್ಷ್ಮೀನಾರಾಯಣ, ಶಿಷ್ಟಾಚಾರ ವಿಭಾಗದ ಅಧಿಕಾರಿ ವಿಜಯ್ ಮಹಂತೇಶ್ ಖುದ್ದು ಹಾಜರಿದ್ದು ಪರಿಶೀಲನೆ ನಡೆಸಿದರು.
ಕುಮಾರಸ್ವಾಮಿ ಪದಗ್ರಹಣಕ್ಕೆ ಸಾಕ್ಷಿಯಾಗಲಿರುವ ಶಕ್ತಿಸೌಧವನ್ನು ಹಲವು ಬಗೆಯಲ್ಲಿ ಅಲಂಕೃತಗೊಳಿಸಲಾಗುತ್ತಿದ್ದು, ವಿಧಾನಸೌಧ ಮುಂಭಾಗದ ವೇದಿಕೆ, ಪ್ರವೇಶ ದ್ವಾರಗಳ ಬಳಿ ಹೆಚ್ಚಿನ ಭದ್ರತೆಯನ್ನೂ ಕೈಗೊಳ್ಳಲಾಗುತ್ತಿದೆ.
ಈ ಹಿಂದೆ 2006ರಲ್ಲಿ ಬಿಜೆಪಿ ಜತೆಗಿನ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿ ಕುಮಾರಸ್ವಾಮಿ ವಿಧಾನಸೌಧದ ಮುಂಭಾಗವೇ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಮತ್ತೂಮ್ಮೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ,ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಪಾಲ್ಗೊಳ್ಳುವ ಸಾಧ್ಯತೆಯಿದೆ.
ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಕುಮಾರಸ್ವಾಮಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರದಲ್ಲಿ ಸರ್ಕಾರ ರಚನೆಯಾಗುತ್ತಿದ್ದು, ಸಹಜವಾಗಿಯೇ ಎರಡೂ ಪಕ್ಷಗಳ ಕಾರ್ಯಕರ್ತರು ಸಾಕಷ್ಟು ಪ್ರಮಾಣದಲ್ಲಿ ಸೇರುವ ನಿರೀಕ್ಷೆಯಿದೆ.