Advertisement

ಮಿಷನ್‌-123 ಗುರಿ ಸಾಧನೆಗೆ ಸಿದ್ಧರಾಗಿ; ಕುಮಾರಸ್ವಾಮಿ

05:44 PM Jul 30, 2022 | Team Udayavani |

ಬೀದರ: ವಿಧಾನಸಭೆ ಚುನಾವಣೆ ಡಿಸೆಂಬರ್‌ ಇಲ್ಲವೇ ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು, ಮಿಷನ್‌ -123 ಗುರಿ ತಲುಪಲು ಈಗಿನಿಂದಲೂ ತಯಾರಿ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕರೆ ನೀಡಿದರು.

Advertisement

ನಗರದ ಹೊರವಲಯದ ಚಿಕಪೇಟ್‌ನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಜೆಡಿಎಸ್‌ ಸಂಘಟನೆಗಾಗಿ ಸಮಾಲೋಚನೆ ಹಾಗೂ ಚುನಾವಣೆ ಸಿದ್ಧತೆಗಳ ಬಗ್ಗೆ ಚಿಂತನ-ಮಂಥನಕ್ಕಾಗಿ ನಡೆದ ಕಲ್ಯಾಣ ಕರ್ನಾಟಕದ ಭಾಗದ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಶಾಸಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ 40 ಕ್ಷೇತ್ರಗಳಲ್ಲಿ ನಾಲ್ವರು ಮಾತ್ರ ಶಾಸಕರಿದ್ದಾರೆ. ಈ ಬಾರಿ 18-20 ಜನ ಇಲ್ಲಿಂದ ಆಯ್ಕೆಯಾಗುವ ಅವಕಾಶಗಳಿದ್ದು, ಈ ನಿಟ್ಟಿಯಲ್ಲಿ ಶ್ರಮ ವಹಿಸಬೇಕು ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ನಡವಳಿಕೆಯಿಂದ ಜನರು ಬೇಸತ್ತಿದ್ದಾರೆ. ಇತ್ತ ಕಾಂಗ್ರೆಸ್‌ ಬಗ್ಗೆಯೂ ಒಲವು ಇಲ್ಲ. ಹೀಗಾಗಿ ಜನ ಪರ್ಯಾಯ ಪಕ್ಷದತ್ತ ಆಲೋಚಿಸುತ್ತಿದ್ದಾರೆ. ಹೀಗಾಗಿ ಈ ಪಕ್ಷಗಳ ಎದುರು ಒಬ್ಬ ಸಾಮಾನ್ಯ ಕಾರ್ಯಕರ್ತನೂ ಸ್ಪರ್ಧಿಸಿದರೆ ಗೆಲ್ಲಬಹುದು. ಮತದಾರರು ಜೆಡಿಎಸ್‌ಗೆ ವೋಟು ಹಾಕಲು ಸಿದ್ಧರಿದ್ದಾರೆ. ಆದರೆ, ಹಾಕಿಸಿಕೊಳ್ಳಲು ನಮ್ಮವರು ತಯಾರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ಆಕಾಂಕ್ಷಿತ ಅಭ್ಯರ್ಥಿಗಳು ನಾವು ಚುನಾವಣೆಗೆ ನಿಲ್ಲುತ್ತೇವೆ ಎಂದು ನಮ್ಮ ಸುತ್ತಮುತ್ತ ಅಲೆದಾಡುವುದನ್ನು ಬಿಟ್ಟು ಮತದಾರರನ್ನು ಭೇಟಿಯಾಗಿ ವಿಶ್ವಾಸ ಗಳಿಸುವ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಪಕ್ಷ ಸಮರ್ಥ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಿದೆ. ಇದಕ್ಕೆ ಸ್ಥಳೀಯ ನಾಯಕರು ಸಹಕರಿಸಿ ಒಮ್ಮತದಿಂದ ಬೆಂಬಲಿಸಬೇಕು. ಇಲ್ಲವಾದರೆ ಪಕ್ಷದ ಸಂಘಟನೆ ಕುಂಠಿತವಾಗಲಿದೆ. ಪಕ್ಷದ ಕಾರ್ಯಾಗಾರ ಮತ್ತು ಸಭೆಗಳಲ್ಲಿ ನೀಡುವ ಸೂಚನೆ ತಮ್ಮ ಕ್ಷೇತ್ರಗಳಲ್ಲಿ ಜಾರಿಗೆ ತರಬೇಕು. ಬಹಳಷ್ಟು ಕಡೆಗಳಲ್ಲಿ ಈ ವಿಚಾರದಲ್ಲಿ ಹಿನ್ನಡೆಯಾಗಿರುವುದು ಮನಗಂಡಿದ್ದೇನೆ. ಬೇರೆ ಪಕ್ಷಗಳಂತೆ ಪಕ್ಷದ ಸಂಘಟನೆಗೆ ಒತ್ತು ಕೊಟ್ಟು ನಿಮ್ಮ ಶಕ್ತಿ ಬೆಳೆಸಿಕೊಳ್ಳಿ ಎಂದರು.

ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆಡಿಎಸ್‌ಗೆ ಒಳ್ಳೆಯ ಕಾಲ ಇದ್ದು, ಮತ್ತೂಮ್ಮೆ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದು ನಿಶ್ಚಿತ. ನಾನು ತ್ಯಾಗ ಮಾಡಿ ಪಕ್ಷಕ್ಕೆ ಬಂದಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರ ಮುಂದೆ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ನೋಡಬೇಕಿದೆ. ಇಷ್ಟು ದಿನ ಕಷ್ಟಗಳನ್ನು ಎದುರಿಸುತ್ತಿದ್ದೀರಿ, ಈಗ ಸುಖ ಅನುಭವಿಸುತ್ತೀರಿ ಎಂದು ಭವಿಷ್ಯ ನುಡಿದರು.

Advertisement

ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಖಾಶೆಂಪುರ ಮಾತನಾಡಿ, ಜೆಡಿಎಸ್‌ನ ಪ್ರಾಬಲ್ಯ ಹೊಂದಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿಯ ಚುನಾವಣೆಯಲ್ಲಿ 40 ಕ್ಷೇತ್ರಗಳ ಪೈಕಿ ಕನಿಷ್ಟ 18ರಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ತರುವ ಪ್ರಯತ್ನ ಮಾಡಬೇಕಿದೆ.

ಇದಕ್ಕಾಗಿ ಹಗಲು-ರಾತ್ರಿ ಶ್ರಮಿಸೋಣ. ಆ ಮೂಲಕ ಪ್ರಾದೇಶಿಕ ಪಕ್ಷಕ್ಕೆ ಮತ್ತು ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ. ಈ ನಿಟ್ಟಿನಲ್ಲಿ ಬೀದರನಿಂದಲೇ ತಯಾರಿಗೆ ಚಾಲನೆ ನೀಡಿರುವುದು ಶುಭ ಸಂಕೇತವಾಗಿದೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸ್ವಾಗತಿಸಿದರು. ಈ ವೇಳೆ ಶಾಸಕರಾದ ವೆಂಕಟಗೌಡ, ರಾಜಾ ವೆಂಕಟಪ್ಪ ನಾಯಕ, ಮಾಜಿ ಸಚಿವ ನಜೀಮ್‌ ಸಾಬ್‌, ಪ್ರಮುಖರಾದ ಶಮಶುಲ್ಲಾ ಖಾನ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next