Advertisement

ಪ್ರವಾಹ ನಿಯಂತ್ರಣಕ್ಕೆ ಸನ್ನದ್ಧರಾಗಿ

04:14 PM Jun 17, 2020 | Suhan S |

ಚಿಕ್ಕೋಡಿ: ಈಗಾಗಲೇ ಮಹಾರಾಷ್ಟ್ರದಲ್ಲಿ ಮಳೆ ಆರಂಭವಾಗಿದೆ. ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ನೀರಾವರಿ ಅಧಿಕಾರಿಗಳು ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದುಕೊಂಡು ಪ್ರವಾಹ ನಿಯಂತ್ರಿಸಲು ಸನ್ನದ್ಧರಾಗಬೇಕು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಸೂಚಿಸಿದರು.

Advertisement

ತಾಲೂಕಿನಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಅಪಾರ ಮಳೆ ಸುರಿದು, ಪ್ರವಾಹ ಉಂಟಾಗಿ ಸಾಕಷ್ಟು ಹಾನಿಯಾಗಿದೆ. ಹೀಗಾಗಿ ಆಲಮಟ್ಟಿ ಮತ್ತು ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ನೀರಿನ ಮಾಹಿತಿ ಪಡೆದುಕೊಳ್ಳಬೇಕು. ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಹರಿದು ಬಂದರೆ ಆಲಮಟ್ಟಿಯಿಂದ ಹೊರಗೆ ಬಿಡುವ ವ್ಯವಸ್ಥೆ ಆಗಬೇಕು ಎಂದರು.

ನದಿ ತೀರದಲ್ಲಿ ಅಧಿಕಾರಿಗಳು ಹೈ ಅಲರ್ಟ್‌ ಆಗಿ ಕೆಲಸ ಮಾಡಬೇಕು. ನದಿ ತೀರದ ಗ್ರಾಮಗಳಲ್ಲಿ ಬೋಟ್‌ ವ್ಯವಸ್ಥೆ ಮಾಡಿಕೊಳ್ಳಬೇಕು. ಗಂಜಿ ಕೇಂದ್ರ. ದನಕರುಗಳಿಗೆ ಮೇವಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು. ಚಿಕ್ಕೋಡಿ ಉಪ ವಿಭಾಗದಲ್ಲಿ ಬರುವಂತಹ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಸಮಸ್ಯೆಗಳ ಜೊತೆಗೆ ಪ್ರವಾಹ ಪೀಡಿತ ಗ್ರಾಮಗಳಿಗೆ ಇನ್ನೂ ಕೂಡ ಮನೆಗಳ ನಿರ್ಮಾಣಕ್ಕೆ ಸರಿಯಾದ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ ಎಂದು ತಾಲೂಕು ಪಂಚಾಯತ್‌ ಸದಸ್ಯ ರವಿ ಮಿರ್ಜೆ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ತಾಂತ್ರಿಕ ಹಾಗೂ ಜಿಪಿಎಸ್‌ ಸಮಸ್ಯೆಯಿಂದ ಸ್ವಲ್ಪ ವಿಳಂಬವಾಗಿದೆ. ಆದಷ್ಟು ಬೇಗ ಫಲಾನುಭವಿಗಳ ಸಮಸ್ಯೆ ನಿವಾರಿಸಲಾಗುವುದು ಎಂದರು.

ಟಿಸಿ ಅಳವಡಿಸಲು ರೈತರಿಂದ ಹೆಸ್ಕಾಂ ಅಧಿಕಾರಿಗಳು ಕಮಿಷನ್‌ ಪಡೆಯುತ್ತಾರೆ ಎಂದು ವಿಧಾನ ಪರಿಷತ್‌ ಮುಖ್ಯ ಸಂಚೇತಕ ಮಹಾಂತೇಶ ಕವಟಗಿಮಠ ಹೆಸ್ಕಾಂ ಅಧಿಕಾರಿಗಳ ವಿರುದ್ಧ ನೇರವಾಗಿ ಆರೋಪಿಸಿದರು. ಇದಕ್ಕೆ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳು ಯಾರೇ ಇರಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

Advertisement

ಈಗಾಗಲೇ ಚಿಕ್ಕೋಡಿ ಉಪ ವಿಭಾಗದಲ್ಲಿ ಸೊಯಾಬಿನ್‌ ಕಳಪೆ ಬೀಜ ವಿತರಿಸಿದ್ದಾರೆ ಎಂದು ತಾಪಂ ಸದಸ್ಯನ ಆರೋಪಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ, ಬಿತ್ತನೆ ಮಾಡಿದ ಬೀಜ ಕಳಪೆ ಗುಣಮಟ್ಟದ್ದಾಗಿದ್ದರೆ ಅಂತಹ ರೈತರಿಗೆ ಒಂದು ಏಕರೆಗೆ 3 ಸಾವಿರ ರೂ. ಅಥವಾ ಬದಲಾಗಿ ಸೊಯಾಬಿನ್‌ ಬೀಜ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಸಿಇಒ ರಾಜೇಂದ್ರ ಕೆವಿ.ಎಸ್‌ಪಿ ಲಕ್ಷ್ಮಣ ನಿಂಬರಗಿ, ಡಿಡಿಪಿಐ ಗಜಾನನ ಮನ್ನಿಕೇರಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next