Advertisement

ಬರ ನಿರ್ವಹಣೆಗೆ ಸಜ್ಜಾಗಿ: ಡೀಸಿ

07:29 AM Jan 30, 2019 | |

ಹಾಸನ: ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ವಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ನಿರ್ವಹಣೆ ಹಾಗೂ ಬೆಳೆವಿಮೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು ಜಿಲ್ಲೆಯ ಎಲ್ಲಾ 8 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ.

Advertisement

ಹಿಂಗಾರು ವೈಫ‌ಲ್ಯದಿಂದ ಅರಸೀಕೆರೆ ತಾಲೂಕಿನಲ್ಲಿ 7,595 ಹೆಕ್ಟೆರ್‌ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ಇದಕ್ಕೆ ಸೂಕ್ತ ಪರಿಹಾರ ವಿತರಣೆಯಾಗಬೇಕು. ಅ ಬೇಸಿಗೆಯಲ್ಲಿ ಜಾನು ವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಈಗಲೇ ಮುಂಜಾಗ್ರತೆ ವಹಿಸಬೇಕು ಎಂದರು.

6 ಸಾವಿರ ರೂ.ದರದಲ್ಲಿ ಮೇವು ಖರೀದಿ: ರೈತರ ಬಳಿ ಹೆಚ್ಚುವರಿ ಮೇವು ಲಭ್ಯವಿದ್ದು ಆಸಕ್ತಿ ಇದ್ದಲ್ಲಿ ಪ್ರತಿ ಟನ್‌ಗೆ 6 ಸಾವಿರ ರೂ.ದರದಲ್ಲಿ ಅದನ್ನು ಮೇವು ಬ್ಯಾಂಕ್‌ಗಳಿಗೆ ಮಾರಾಟ ಮಾಡಬಹುದಾಗಿದೆ. ಇಂತಹ ಮೇವನ್ನು ಖರೀದಿಸಿ ಸಮೀಪ ಇರುವ ಅರಣ್ಯ ಇಲಾಖೆ ಸಸ್ಯ ಸಂರಕ್ಷಣಾ ಕ್ಷೇತ್ರಗಳಲ್ಲಿ ದಾಸ್ತಾನು ಮಾಡಿ ಬೇಸಿಗೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳ ಬಹುದು ಎಂದರು.

ತಹಶೀಲ್ದಾರ್‌ಗೆ ಸೂಚನೆ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಗಮನಹರಿಸಿ, ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿಯವರು ತಹಶೀಲ್ದಾರ ರಿಗೆ ನಿರ್ದೇಶನ ನೀಡಿದರು.

ಜಂಟಿ ಕೃಷಿ ನಿರ್ದೇಶಕ‌ ಡಾ.ಮಧುಸೂದನ್‌ ಅವರು ಮಳೆ ಕೊರತೆ ಮತ್ತು ಬೆಳೆ ಪರಿಸ್ಥಿತಿ ವಿವರಿಸಿದರು. ಪಶುಪಾಲನಾ ಇಲಾಖೆ ಉಪನಿದೇರ್ಶಶಕ ಡಾ. ವೀರ ಭದ್ರಯ್ಯ ಅವರು ಜಿಲ್ಲೆಯಲ್ಲಿ 7.47 ಲಕ್ಷ ಜಾನುವಾರುಗಳಿದ್ದು, ಮುಂದಿನ 23 ವಾರಗಳಿಗೆ ಮೇವು ಲಭ್ಯವಿದೆ. ಈಗಾಗಲೇ ಸುಮಾರು 75 ಸಾವಿರ ಮೇವಿನ ಬೀಜದ ಮಿನಿಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.

Advertisement

ಮೇವಿನ ಕಿಟ್ ವಿತರಿಸಿ: ಇದಕ್ಕೆ ಪ್ರತಿಕ್ರಿಸಿದ ಜಿಲ್ಲಾಧಿಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗದೇ ಇರುವ ಆಸಕ್ತ ರೈತರು ಸಹ ಪಶುಪಾಲನಾ ಇಲಾಖೆ ಮೂಲಕ ಮೇವಿನ ಮಿನಿಕಿಟ್‌ಗಳನ್ನು ಪಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಪ್ರಚಾರ ಒದಗಿಸಬೇಕೆಂದರು. ಯಾವುದೇ ಗ್ರಾಮವೂ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತವಾಗಬಾರದು. ಮಳೆಗಾಲದಲ್ಲಿ ಸಮಸ್ಯೆ ತಲೆದೋರಬಹುದಾದ ಗ್ರಾಮಗಳನ್ನು ಈಗಲೇ ಪಟ್ಟಿಮಾಡಿ ಶಾಶ್ವತ ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕು. ಅನಿವಾರ್ಯ ಸಂದರ್ಭ ಬಂದರೆ ಮಾತ್ರ ಟ್ಯಾಂಕರ್‌ ಬಳಕೆ ಮಾಡಿ ಎಂದು ಸಲಹೆ ನೀಡಿದರು.

ಸಾಲ ಮನ್ನ ಗಣಕೀಕರಣಕ್ಕೆ ಸೂಚನೆ: ಸಾಲಮನ್ನಾ ಯೋಜನೆ ಅನುಷ್ಠಾನ ಚುರುಕಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಾ ಫ‌ಲಾನುಭವಿ ರೈತರಿಂದ ಸ್ವಯಂ ಘೋಷಣಾ ಪತ್ರಗಳನ್ನು ಶೇ.100 ರಷ್ಟು ಪಡೆದು ಗಣಕೀಕರಣ ಕಾರ್ಯಪೂರ್ಣಗೊಳ್ಳಬೇಕು. ತಾಲೂಕು ಮಟ್ಟದ ಸಮಿತಿ ಮುಂದೆ ಬರುವ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡಬೇಕು. ಯಾವುದೇ ಅರ್ಹರೂ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರವಹಿಸ ಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಹಶೀಲ್ದಾರ್‌ ಹಾಗೂ ಸಹಕಾರ ಸಂಘದ ಉಪ ನಿಬಂಧಕರಿಗೆ ಸೂಚನೆ ನೀಡಿದರು.

ಅಪರ ಡೀಸಿ ಎಂ.ಎಲ್‌ ವೈಶಾಲಿ, ಉಪಭಾಗಾಧಿಕಾರಿ ಎಚ್.ಎಲ್‌. ನಾಗರಾಜ್‌, ಜಿಲ್ಲಾ ಪಂಚಾಯಿತಿ ಉಪನಿರ್ದೇಶಕ ನಾಗ ರಾಜ್‌, ಯೋಜನಾ ನಿರ್ದೇಶಕ‌ ಅರುಣ್‌ ಕುಮಾರ್‌, ವಿವಿಧ ಇಲಾಖಾ ಅಧಿಕಾರಿಗಳು ಮತ್ತು ಎಲ್ಲಾ ತಾ| ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next