ಕಲಬುರಗಿ: ಸರ್ಕಾರದ ವಸತಿ ನಿಲಯದಲ್ಲಿರುವ ಗ್ರಂಥಾಲಯ ಸದ್ಬಳಕೆ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಳ್ಳಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ವಸಂತ ಕುಮಾರ ಹೇಳಿದರು.
ಇಲ್ಲಿನ ಅಂಬಿಕಾನಗರದಲ್ಲಿ ಇರುವ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಮಂಗಳವಾರ ಭೇಟಿ ನೀಡಿ ವಸತಿ ನಿಲಯದ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ ಅವರು ಮಾತನಾಡಿದರು. ನಂತರ ಇಲಾಖೆ ಜಂಟಿ ನಿರ್ದೇಶಕರಾದ ಡಾ| ಜಗದೀಶ, ಜಿ. ಜಗದೀಶ ಅವರೊಂದಿಗೆ ಹಾಸ್ಟೆಲ್ ಪರಿಶೀಲಿಸಿದ ಅವರು, ಅಲ್ಲಿ ನೀಡಲಾಗುತ್ತಿರುವ ಊಟ, ಹಾಸಿಗೆ ಮತ್ತು ಶೌಚಾಲಯ ವ್ಯವಸ್ಥೆ, ಸ್ವತ್ಛ ಕುಡಿಯುವ ನೀರು, ಇನ್ನಿತರ ಮೂಲಸೌಕರ್ಯಗಳ ಕುರಿತು ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದರು.
ವಸತಿ ನಿಲಯದಲ್ಲಿ ಉಟೋಪಚಾರ ಚೆನ್ನಾಗಿದೆ. ಸ್ವಚ್ಛ ಕುಡಿಯುವ ನೀರು ಪೂರೈಸಲಾಗುತ್ತಿದೆ. ಶೌಚಾಲಯದ ಸಮಸ್ಯೆ ಇಲ್ಲ. ಓದುವಿಕೆಗೆ ಉತ್ತಮ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಯಿದ್ದು, ವಸತಿ ನಿಲಯವು ಉತ್ತಮ ನಿರ್ವಹಣೆಯಿಂದ ಕೂಡಿದೆ. ಹೀಗಾಗಿ ಯಾವುದೇ ಕುಂದುಕೊರತೆಗಳು ಇಲ್ಲ ಎಂದು ವಿದ್ಯಾರ್ಥಿರ್ನಿಯರು ಹೇಳಿದರು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಆಯುಕ್ತರು, ವಸತಿ ನಿಲಯ ನಿರ್ವಹಣೆಯನ್ನು ಇದೇ ರೀತಿಯಲ್ಲಿ ಮುಂದುವರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಸಂತ ಕುಮಾರ, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ವಸತಿ ನಿಲಯದಲ್ಲಿ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಪರಿಪಾಲನೆ, ಮಾಸ್ಕ್ ಧರಿಸುವುದು ಮತ್ತು ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎಂದರು. ವಸತಿ ನಿಲಯದಲ್ಲಿರುವ ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಹೆಚ್ಚಿನ ಅಂಕ ಪಡೆದು ಉನ್ನತ ಸ್ಥಾನ ಅಲಂಕರಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಜತೆಗೆ ವಸತಿ ನಿಲಯದ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ, ತಾಲೂಕಾಧಿಕಾರಿ ಅಂಬವ್ವ, ವ್ಯವಸ್ಥಾಪಕ ಮಹಿಂದ್ರ, ಆರಿಫುದ್ದೀನ್, ವಾರ್ಡನ್ ಮಹಾದೇವಿ ಹಾಜರಿದ್ದರು.