Advertisement

ಅಜ್ಜನ ಜಾತ್ರೆಗೆ ಆರಕ್ಷ ಕರಿಂದ ಶ್ರಮದಾನ

03:29 PM Jan 06, 2020 | Suhan S |

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಜ. 12ರಂದು ಲಕ್ಷಾಂತರ ಭಕ್ತರ ಸಾನಿಧ್ಯದಲ್ಲಿ ಸಾಗಲಿದ್ದು, ಅಜ್ಜನ ಜಾತ್ರೆಗಾಗಿ ಎಲ್ಲರೂ ತನು-ಮನ-ಧನದಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇತ್ತ ಪೊಲೀಸ್‌ ಪಡೆಯೂ ರವಿವಾರ ಮಠದಲ್ಲಿ ಶ್ರಮದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

Advertisement

ಗವಿಮಠದ ಜಾತ್ರಾ ಮಹೋತ್ಸವದ ಮೈದಾನದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಸರ್ವ ಭಕ್ತ ವೃಂದವೂ ಸೇವೆಯಲ್ಲಿ ತಲ್ಲೀನವಾಗಿದೆ. ಈ ಬಾರಿ ಭಕ್ತರ ಜೊತೆ ಜೊತೆಯಲ್ಲಿಯೇ ಪೊಲೀಸ್‌ ತಂಡವು ಶ್ರೀಮಠದ ಜಾತ್ರಾ ಮಹೋತ್ಸವದ ಆವರಣ, ರಥ ಸಾಗುವ ಬೀದಿ ಮೊದಲಾದ ಕಡೆಗೆ ಸ್ವಇಚ್ಛೆಯಿಂದ ಶ್ರಮದಾನ ಸಲ್ಲಿಸಲಿದ್ದಾರೆ.  ಸ್ವತಃ ಸಿಪಿಐ ಮೌನೇಶ್ವರ ಪಾಟೀಲ, ಪಿಎಸ್‌ಐ ಗಣೇಶ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರಲ್ಲದೇ, ಇತರೆ ಸಿಬ್ಬಂದಿಗೂ ಸೂಚನೆ ನೀಡುತ್ತಾ ಭಕ್ತಿಯಿಂದ ಸೇವೆ ಸಲ್ಲಿಸಿದರು.

ಪ್ರಬಂಧ ಸ್ಪರ್ಧೆ ವಿಜೇತರರು: ಜಿಲ್ಲಾಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಗವಿಸಿದ್ದೇಶ್ವರ ಕಾಲೇಜಿನಲ್ಲಿ ನಡೆಸಿತ್ತು. ಪ್ರೌಢಶಾಲಾ ವಿಭಾಗದಲ್ಲಿ ಶಾರದಾ ಸ್ಕೂಲ್‌ನ ಮಂಜುಶ್ರೀ ಹುಡೇದ ಪ್ರಥಮ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವಿದ್ಯಾಶ್ರೀ ಮೇಟಿ ದ್ವಿತೀಯ, ಮುನಿರಾಬಾದ್‌ನ ವಿಜಯನಗರ ಹೈಸ್ಕೂಲ್‌ನ ವಿನೋದ ತೃತೀಯ ಸ್ಥಾನ, ಪಪೂ ವಿಭಾಗದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಗಂಗಾವತಿಯ ಸಂಕಲ್ಪ ಪಪೂ ಕಾಲೇಜಿನ ಸುದರ್ಶನ ರೆಡ್ಡಿ ಪ್ರಥಮ, ಗವಿಸಿದ್ಧೇಶ್ವರ ಪಪೂ ಕಾಲೇಜಿನ ರಮೇಶ ಕನಕಪ್ಪ ದ್ವಿತೀಯ, ಕೊಪ್ಪಳದ ಬಾಲಕರ ಸರಕಾರಿ ಪಪೂ ಕಾಲೇಜಿನ ಜಂಬಣ್ಣ ಕನಕಗಿರಿ ತೃತೀಯ, ಪದವಿ ವಿಭಾಗದಲ್ಲಿ ಗವಿಸಿದ್ದೇಶ್ವರ ಕಾಲೇಜಿನ ಶಿವಶಂಕರ್‌ ಪ್ರಥಮ, ಗವಿಸಿದ್ದೇಶ್ವರ ಕಾಲೇಜಿನ ಭೂಮಿಕಾ ಅಂಗಡಿ ದ್ವಿತೀಯ, ಕೊಪ್ಪಳದ ಶಾರದಮ್ಮಾ ಕೊತಬಾಳ ಕಾಲೇಜಿನ ನಬೀಬಾ ತೃತೀಯ ಸ್ಥಾನ ಪಡೆದಿದ್ದಾರೆ. ಎಲ್ಲ ವಿಜೇತರರಿಗೆ ಜ. 7ರಂದು ನಡೆಯುವ ಜಾಥಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.

ಸಿ.ಸಿ ಕ್ಯಾಮರಾ ಅಳವಡಿಕೆ: ಜಾತ್ರಾ ಮಹೋತ್ಸವದ ಅಂಗಡಿಗಳ ಆವರಣ, ಮಹಾದಾಸೋಹ, ಶ್ರೀಮಠದ ಒಳ-ಹೊರ ಆವರಣ, ಕೆರೆಯ ದಡ, ಕೈಲಾಸ ಮಂಟಪ, ಜನದಟ್ಟಣೆ ಹೆಚ್ಚು ಇರುವ ಸ್ಥಳಗಳಲ್ಲಿ ಮಹಿಳೆಯರ, ಮಕ್ಕಳ, ವಯೋವೃದ್ಧರ ಹಿತದೃಷ್ಟಿಯಿಂದ ಮುಂಜಾಗೃತೆಗಾಗಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ರಕ್ತದಾನ ಶಿಬಿರ: ಜ. 13ರಿಂದ ಜ. 15ರವರೆಗೆ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ಬೃಹತ್‌ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ರಕ್ತದಾನ ಶಿಬಿರದಲ್ಲಿ 20 ವೈದ್ಯರ ತಂಡ, 40 ಜನ ಪ್ರಯೋಗ ಶಾಲಾ ತಂತ್ರಜ್ಞರ ತಂಡ, 20 ಜನ ಸ್ವಯಂ ಸೇವಕರ ತಂಡ ಹಾಗೂ 100ಕಾಟ್‌ ಬೆಡ್‌ಗಳ  ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸದರಿ ರಕ್ತದಾನ ಶಿಬಿರದಲ್ಲಿ 2000-2500 ಜನ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ನಿರೀಕ್ಷೆಯಿದೆ.

ಸಚಿವ ಸಿ.ಸಿ ಪಾಟೀಲ ಭೇಟಿ: ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಗವಿಮಠಕ್ಕೆ ಅನೇಕ ಗಣ್ಯರು ಭೇಟಿ ನೀಡುತ್ತಿದ್ದು, ರವಿವಾರ ಗಣಿ, ಭೂವಿಜ್ಞಾನ ಮತ್ತು ಅರಣ್ಯ ಇಲಾಖೆಯ ಸಚಿವ ಸಿ.ಸಿ ಪಾಟೀಲ್‌ ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಲಕ್ಷ ವೃಕ್ಷೊàತ್ಸವ ಅಭಿಯಾನ: ಜ. 7ರಂದು ನಗರದ ಸಾರ್ವಜನಿಕ ಮೈದಾನದಲ್ಲಿ ಗವಿಶ್ರೀಗಳು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಅಭಿಯಾನದಲ್ಲಿ 10 ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Advertisement

ಉಚಿತ ಬಸ್‌ ವ್ಯವಸ್ಥೆ: ಲಕ್ಷ ವೃಕ್ಷೊàತ್ಸವ ಜಾಗೃತಿ ಜಾಥಾದಲ್ಲಿ ಭಾಗವಹಿಸುವ ಮಕ್ಕಳು ಬಳಿಕ ತಮ್ಮ ಶಾಲೆಗಳತ್ತ ತೆರಳಲು ಉಚಿತ ಬಸ್‌ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ, ಜ. 10ರಂದು ಮಠದ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬಲು ಆಗಮಿಸುವ ಮಹಿಳೆಯರಿಗೂ ಉಚಿತ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next