ಬೆಂಗಳೂರು: “ನದಿ ನೀರಿನ ತೀರದಲ್ಲಿ ಬೆಂಗಳೂರು’ ಕಲ್ಪನೆಯಡಿ ವೃಷಭಾವತಿ ನದಿ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ, ಪ್ರಧಾನಿ ಜತೆ ಚರ್ಚಿಸುವುದಾಗಿ ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಹೇಳಿದರು.
ಬಸವನಗುಡಿಯ ದೊಡ್ಡಬಸವನ ದೇವಸ್ಥಾನದಲ್ಲಿ ಸೋಮವಾರ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ವೃಷಭಾವತಿ ನದಿಯ ಉಗಮ ಸ್ಥಾನ ದೊಡ್ಡ ಬಸವನ ಗುಡಿ ಸಮೀಪವೇ ಇದೆ ಎಂಬ ಪ್ರತೀತಿ ಇದೆ. ಸ್ಥಳೀಯ ಶಾಸಕರು ಮತ್ತು ಬಿಬಿಎಂಪಿ ಮೇಯರ್ ಸೇರಿ ವೃಷಭಾವತಿ ನದಿ ಪುನಶ್ಚೇತನಕ್ಕೆ ಸಂಕಲ್ಪ ಮಾಡಬೇಕು ಎಂದರು.
ಅಹ್ಮದಬಾದ್ ನಗರವು ಸಬರಮತಿ ನದಿ ತೀರದಲ್ಲಿದ್ದು, ಪ್ರಮುಖ ಪ್ರವಾಸಿಗರ ತಾಣವಾಗಿದೆ. ವಿದೇಶಿ ಪ್ರಧಾನಿಗಳು ನದಿ ತೀರದ ನಗರವನ್ನು ನೋಡಲು ಪ್ರವಾಸ ಬರುತ್ತಿರುತ್ತಾರೆ. ಬೆಂಗಳೂರಿನ ಜೀವ ಗಂಗೆಯಾಗಿದ್ದ ವೃಷಭಾವತಿಯನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು.
ಇದಕ್ಕಾಗಿ ರಾಜ್ಯ ಸರ್ಕಾರ ನೀಲನಕ್ಷೆಯೊಂದನ್ನು ರಚಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ತದನಂತರವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಲ ಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಈ ಮೂಲಕ ಎಲ್ಲರೂ ಸೇರಿ ಸ್ವತ್ಛ ನದಿ ತೀರದ ನಗರವಾಗಿ ಬೆಂಗಳೂರನ್ನು ನಿರ್ಮಿಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
198 ಸದಸ್ಯರನ್ನು ಕರೆತರುವೆ: ಐಟಿ, ಬಿಟಿಗೆ ಹೆಸರಾಗಿರುವ ಬೆಂಗಳೂರಿನಲ್ಲಿ ಕಲೆ, ಸಾಂಸ್ಕೃತಿಕ ಉತ್ಸವಕ್ಕೂ ಜನ ಸೇರುತ್ತಾರೆ ಎಂಬುದು ಕಡಲೆಕಾಯಿ ಪರಿಷೆಯಿಂದ ಸಾಬೀತಾಗಿದೆ. ಮುಂದಿನ ವರ್ಷ ಬಿಬಿಎಂಪಿಯ 198 ಸದಸ್ಯರನ್ನು ಬಸ್‌ನಲ್ಲಿ ಪರಿಷೆಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದರು. ಶಾಸಕ ರವಿಸುಬ್ರಹ್ಮಣ್ಯ, ಉಪ ಮೇಯರ್ ಪದ್ಮವತಿ ನರಸಿಂಹಮೂರ್ತಿ, ಮಾಜಿ ಮೇಯರ್ ಕಟ್ಟ ಸತ್ಯನಾರಾಯಣ, ಪಾಲಿಕೆ ಸದಸ್ಯ ಸಂಗಾತಿ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.